ಕೈರೋ: “ಯಾರೂ ಇಲ್ಲದ ಊರಿನಲ್ಲಿ ಇರುವವನೇ ಗೌಡ’ ಎಂಬ ಮಾತಿಗೆ ಉದಾಹರಣೆಯೆಂಬಂತೆ, ಇಂದೋರ್ ಮೂಲದ 24ರ ಹರೆಯದ ಸುಯಶ್ ದೀಕ್ಷಿತ್ ಎಂಬ ಉದ್ಯಮಿಯೊಬ್ಬ ಈಜಿಪ್ಟ್ ಹಾಗೂ ಸುಡಾನ್ ದೇಶಗಳ ನಡುವಿನ ನಿರ್ಜನ ಹಾಗೂ ಯಾವ ದೇಶಕ್ಕೂ ಅಧಿಕೃತವಾಗಿ ಸೇರದ ಪ್ರಾಂತ್ಯವೊಂದನ್ನು ತನ್ನ ದೇಶವೆಂದು ಘೋಷಿಸಿಕೊಂಡಿದ್ದಾನೆ!
ಅಷ್ಟೇ ಅಲ್ಲ, ತಾನು ಅದರ ಪ್ರಧಾನಿಯೆಂದೂ, ತನ್ನ ತಂದೆ ಅಧ್ಯಕ್ಷರೆಂದೂ ಘೋಷಿಸಿರುವ ಆತ, ಈ ಸಂಬಂಧ ತನ್ನ ದೇಶಕ್ಕೆ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೂ ಮನವಿ ಸಲ್ಲಿಸಿದ್ದಾನೆ! ಈತ ಘೋಷಿಸಿಕೊಂಡಿರುವ ದೇಶದ ಹೆಸರು ಕಿಂಗ್‌ಡಮ್ ಆಫ್ ದೀಕ್ಷಿತ್ (ಕೆಒಡಿ)!
ಎಲ್ಲಿದೆ ಈ ಭೂಮಿ?: ಈಜಿಪ್ಟ್ ಹಾಗೂ ಸುಡಾನ್ ದೇಶಗಳ ಗಡಿಯಲ್ಲಿರುವ ಸುಮಾರು 2,060 ಚದರ ಕಿ.ಮೀ ವ್ಯಾಪ್ತಿಯ “ಬಿರ್ ಟಾವಿಲ್’ ಹೆಸರಿನ ಮರಳುಗಾಡು ಅದು. 1899ರಲ್ಲಿ ಸುಡಾನ್-ಈಜಿಪ್ಟ್ ಗಡಿ ಗುರುತಿಸಿದ್ದ ಬ್ರಿಟಿಷರು ಪ್ರಮಾದವಶಾತ್ ಆಗಿ ಈ ಜಾಗ ಯಾವ ದೇಶಕ್ಕೂ ಸೇರಿಸದೇ ಬಿಟ್ಟುಬಿಟ್ಟರು. ಆಗಿನಿಂದಲೂ ಇದು ಈ ಭೂಮಿಯ “ಯಾವುದೇ ದೇಶಕ್ಕೆ ಸೇರದ, ಮನುಷ್ಯರು ಜೀವಿಸಬಹುದಾದ ಏಕೈಕ ಸ್ಥಳ’ ಎಂದೇ ಹೆಸರು ಗಳಿಸಿದೆ.
ಪ್ರಾಣ ಒತ್ತೆಯಿಟ್ಟು ಬಂದೆ!: ಇಲ್ಲಿಗೆ ತಲುಪುವುದು ಸುಲಭವಲ್ಲ. ಈ ಮರಳುಗಾಡಿಗೆ ಸೂಕ್ತ ರಸ್ತೆಯಿಲ್ಲ. ಇದರ ಸುತ್ತಲೂ ಸುಡಾನ್ ಬಂಡುಕೋರರ ಅಡಗುದಾಣಗಳಿವೆ. ಹೆಜ್ಜೆ ಹೆಜ್ಜೆಗೂ ಅಪಾಯದ ಭೀತಿಯ ಈ ನಾಡಿಗೆ ಗಂಟೆಗಟ್ಟಲೆ ಪಯಣಿಸಿ, ಪ್ರಾಣ ಒತ್ತೆಯಿಟ್ಟು ಬಂದಿದ್ದಾಗಿ ದೀಕ್ಷಿತ್ ಹೇಳಿ ಕೊಂಡಿದ್ದಾನೆ. ಬರೀ ಮರಳು, ಶಿಲಾ ಬೆಟ್ಟಗಳಿರುವ ಇಲ್ಲಿ “ಉಳುವವನೇ ಒಡೆಯ’ ಎಂಬ ನಿಯಮ ದಡಿ ತಾನು ಬೀಜವೊಂದನ್ನು ಬಿತ್ತಿ, ನೀರು ಹಾಕಿದ್ದು ಇಲ್ಲಿ ಕೃಷಿ ಆರಂಭಿಸಿರುವ ಹಿನ್ನೆಲೆಯಲ್ಲಿ ನನಗೇ ಈ ಪ್ರಾಂತ್ಯದ ಒಡೆತನದ ಹಕ್ಕು ನೀಡಬೇಕೆಂದು ಆಗ್ರಹಿಸಿದ್ದಾನೆ. ಯಾರಾದರೂ ಈ ಜಾಗ ನಮ್ಮದೆಂದು ಬಂದರೆ “ಕಾಫಿ ಆತಿಥ್ಯದ’ ಯುದ್ಧವಾಗುತ್ತೆ ಅಂತ ತಮಾಷೆಯಾಗಿ ಎಚ್ಚರಿ ಸಿದ್ದಾನೆ! ಈತ ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದಾನೆ.
ಕಾನೂನು ಏನು ಹೇಳುತ್ತೆ?
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಯಾವುದೇ ಪ್ರಾಂತ್ಯವನ್ನು ಯಾವುದೇ ರಾಷ್ಟ್ರ ಅಥವಾ ರಾಜ್ಯ ತನ್ನದೆಂದು ಘೋಷಿ ಸಿಕೊಳ್ಳ ಬಹುದೇ ವಿನಃ ವ್ಯಕ್ತಿಯೊಬ್ಬ ಹಾಗೆ ಘೋಷಿಸಿಕೊಳ್ಳಲು ಸಾಧ್ಯವಿಲ್ಲ.