Advertisement
ಹೆಂಡತಿಯನ್ನು ಸಮಾಧಾನಪಡಿಸಲು ಗುಮೋಕೆ ಮತ್ತೆ ಹೊರಗೆ ಹೋಗಿ ಹಕ್ಕಿಗಳನ್ನು ಹಿಡಿದು ತರುತ್ತಿದ್ದ. ಆದರೂ ಅವಳಿಗೆ ಸಾಲುತ್ತಿರಲಿಲ್ಲ. ತಿಂದ ಕೂಡಲೇ ಜಗಳ ಮಾಡುವಳು. ದಿನವೂ ಈ ಪರಿಸ್ಥಿತಿಯನ್ನೆದುರಿಸಿ ಅವನಿಗೆ ಬೇಸರ ಬಂದಿತು. ಗೆಳೆಯರೊಂದಿಗೆ, “”ಎಂಥ ಹೆಂಡತಿಯನ್ನು ಕಟ್ಟಿಕೊಂಡೆ ನೋಡಿ. ದುಡಿದು ತಂದ ಎಲ್ಲವನ್ನೂ ಅವಳೊಬ್ಬಳೇ ತಿಂದು ನಾನು ಕೈಲಾಗದವನೆಂದು ಜರೆಯುತ್ತಾಳೆ. ಅವಳ ಜೊತೆಗೆ ಬದುಕುವ ಬದಲು ಸಾಯುವುದೇ ಮೇಲು ಅನಿಸುತ್ತದೆ” ಎಂದು ತನ್ನ ದುಃಖವನ್ನು ತೋಡಿಕೊಂಡ. ಗೆಳೆಯರ ಪೈಕಿ ವಯಸ್ಸಿನಲ್ಲಿ ಹಿರಿಯವನೂ ಅನುಭವಿಯೂ ಆದ ಒಬ್ಬನಿದ್ದ. ಅವನು, “”ಅವಳ ದೇಹದ ಆಕೃತಿ ನೋಡಿದರೆ ಸಹಜವಾದುದಲ್ಲ ಅನಿಸುತ್ತದೆ. ಯಾವುದೋ ಪಿಶಾಚಿ ದೇಹವನ್ನು ಪ್ರವೇಶಿಸಿ ಹೀಗೆ ಆಹಾರದ ರಾಶಿಯನ್ನೇ ನುಂಗುತ್ತಿರಬಹುದು. ನೀನು ಪಕ್ಕದ ಕಾಡಿಗೆ ಹೋಗು. ಅಲ್ಲಿ ಮಾಟಗಾತಿಯರು ಅಲೆದಾಡುತ್ತ ಇರುತ್ತಾರೆ. ನಿನ್ನ ಸಮಸ್ಯೆಯನ್ನು ನಿವಾರಿಸಿ ಹೆಂಡತಿಯನ್ನು ಸಾಮಾನ್ಯಳಂತೆ ಮಾಡುವ ಶಕ್ತಿ ಅವರಿಗೆ ಇರುತ್ತದೆ, ಅವರಲ್ಲಿ ಕೇಳಿಕೋ” ಎಂದು ಸಲಹೆ ನೀಡಿದ.
Related Articles
Advertisement
ಮಾಟಗಾತಿಯು, “”ಒಂದು ವಾರದ ಅವಕಾಶ ಕೊಡುತ್ತೇನೆ. ಸಮುದ್ರ ತೀರದಲ್ಲಿ ನಮಗಿಬ್ಬರಿಗೂ ಮದುವೆಯಾಗುತ್ತದೆ. ಅಲ್ಲಿಗೆ ಹಂದಿಯಾಗಿರುವ ನಿನ್ನ ಹೆಂಡತಿಯನ್ನೂ ಕರೆತರಬೇಕು. ನಾನು ನಿನಗೆ ಮಂತ್ರಜಲ ತುಂಬಿದ ಒಂದು ಪಾತ್ರೆಯನ್ನು ಕೊಡುತ್ತೇನೆ. ನಾನು ಸಮುದ್ರದಲ್ಲಿ ಸ್ನಾನ ಮಾಡಿ ಮೇಲೆ ಬಂದ ಕೂಡಲೇ ನೀನು ಅದರಲ್ಲಿರುವ ಮಂತ್ರಿಸಿದ ನೀರನ್ನು ನನ್ನ ಮೈಗೆ ಹಾಕಬೇಕು. ಅದರಿಂದ ನಾನು ಪರಮ ಸುಂದರಿಯಾಗಿ ಬದಲಾಗುತ್ತೇನೆ. ಎರಡನೆಯ ಸಲದ ನೀರನ್ನು ನಿನ್ನ ಹೆಂಡತಿಯ ಮೇಲೆ ಸುರುವಿಬಿಡು. ಅದರಿಂದ ಅವಳು ಶಿಲೆಯಾಗಿ ಬಿಡುತ್ತಾಳೆ. ತಪ್ಪಿ ಕೂಡ ಎರಡನೆಯ ಸಲದ ನೀರನ್ನು ನನ್ನ ಮೈಗೆ ಹಾಕಬೇಡ. ನಿನ್ನೊಂದಿಗೆ ಒಂದು ವಾರ ಸಂಸಾರ ಮಾಡಿದ ಮೇಲೆ ನಾನು ನಿನ್ನನ್ನು ತಿಂದು ಮರಳಿ ಕಾಡಿಗೆ ಹೋಗುತ್ತೇನೆ. ಹೀಗೆ ನಾನು ಅನೇಕ ಸಲ ಮದುವೆಯಾಗಿ ಅವರನ್ನೆಲ್ಲ ತಿಂದು ಜೀರ್ಣಿಸಿಕೊಂಡಿದ್ದೇನೆ” ಎಂದು ಹೇಳಿದಳು.
ಗುಮೋಕೆ ಮಾಟಗಾತಿಯ ಮಾತಿನಂತೆಯೇ ನಡೆಯುವುದಾಗಿ ಮಾತು ಕೊಟ್ಟು ಮನೆಗೆ ಬಂದ. ಮದುವೆಯಾಗಿ ಒಂದು ವಾರದಲ್ಲಿ ತಾನು ಮಾಟಗಾತಿಗೆ ಆಹಾರವಾಗಲಿರುವುದನ್ನು ಕೇಳಿ ಅವನಿಗೆ ಅನ್ನಾಹಾರಗಳು ಸೇರಲಿಲ್ಲ. ನಿದ್ರೆ ಬರಲಿಲ್ಲ. ಸೊರಗಿ ಕಡ್ಡಿಯಾದ. ಗೆಳೆಯರೆಲ್ಲ ಅವನನ್ನು ನೋಡಲು ಬಂದರು. “”ಅಯ್ಯೋ ಏನಾಯಿತೋ ನಿನಗೆ? ಎಷ್ಟೊಂದು ಚಂದವಾಗಿ ಜೀವನ ಮಾಡಿಕೊಂಡಿದ್ದೆಯಲ್ಲ! ಈಗ ನೋಡಿದರೆ ನೀನು ಬತ್ತಿ ಹೋಗಿದ್ದೀ. ನಿನ್ನ ಹೆಂಡತಿಯೂ ಕಾಣುವುದಿಲ್ಲ. ಏನು ನಡೆಯಿತು ಹೇಳು” ಎಂದು ಕೇಳಿದರು.
ಗುಮೋಕೆ ಕಣ್ಣೀರು ತುಂಬಿಕೊಂಡು, “”ಇರುವ ಪರಿಸ್ಥಿತಿಯಲ್ಲೇ ಮನುಷ್ಯ ತೃಪ್ತಿ ಪಟ್ಟುಕೊಂಡು ಬದುಕಲು ಕಲಿತರೆ ಏನೂ ಆಗುವುದಿಲ್ಲ. ನಾನು ಹೆಂಡತಿಯನ್ನು ಬದಲಾಯಿಸಲು ಹೋಗಿ ಮಾಟಗಾತಿಯ ಬಲೆಗೆ ಸಿಲುಕಿಬಿಟ್ಟಿದ್ದೇನೆ. ಈಗ ಕೈ ಹಿಡಿದ ಹೆಂಡತಿ ಶಿಲೆಯಾಗುತ್ತಾಳೆ. ಮಾಟಗಾತಿಯ ಗಂಡನಾಗಿ ಒಂದು ವಾರದಲ್ಲಿ ಅವಳಿಗೆ ಆಹಾರವಾಗುತ್ತೇನೆ. ಇದರಿಂದ ಪಾರಾಗುವ ದಾರಿಯಾದರೂ ಏನಿದೆ ಎಂದು ತಿಳಿಯದೆ ಕಂಗಾಲಾಗಿದ್ದೇನೆ” ಎಂದು ನಡೆದ ವಿಷಯವನ್ನು ಗೆಳೆಯರಿಗೆ ಹೇಳಿದ.
ಗೆಳೆಯರಲ್ಲಿ ಅನುಭವಿಯಾದ ಹಿರಿಯ, “”ಅಪಾಯವನ್ನು ಉಪಾಯದಿಂದ ನಿವಾರಿಸಿಕೊಳ್ಳಬೇಕು. ನಾನು ಹೇಳಿದಂತೆ ಮಾಡಿದರೆ ನಿನಗೆ ಒಳ್ಳೆಯದೇ ಆಗುತ್ತದೆ” ಎಂದು ಮಾಡಬೇಕಾದ ಕೆಲಸವನ್ನು ಅವನಿಗೆ ಕಿವಿಯಲ್ಲಿ ಹೇಳಿದ. ಇದರಿಂದ ಗುಮೋಕೆಯ ಮುಖ ಅರಳಿತು. ಕಷ್ಟದಿಂದ ಪಾರಾಗುವ ಧೈರ್ಯ ಮೂಡಿತು. ಮಾಟಗಾತಿ ಹೇಳಿದ ದಿನ ಸಮುದ್ರ ತೀರಕ್ಕೆ ಹೋದ. ಜೊತೆಗೆ ಹಂದಿಯಾಗಿರುವ ಹೆಂಡತಿಯನ್ನೂ ಕರೆದುಕೊಂಡಿದ್ದ. ಮಾಟಗಾತಿ ಮಂತ್ರಜಲ ತುಂಬಿದ ಪಾತ್ರೆಯೊಂದಿಗೆ ಅಲ್ಲಿಗೆ ಬಂದು ಅವನ ಕೈಗೆ ಅದನ್ನು ಕೊಟ್ಟಳು. “”ನೆನಪಿದೆ ತಾನೆ? ನಾನು ಸಮುದ್ರದಲ್ಲಿ ಮುಳುಗಿ ಸ್ನಾನ ಮುಗಿಸಿ ಬಂದ ಕೂಡಲೇ ಮೇಲ್ಭಾಗದ ಮಂತ್ರದ ನೀರನ್ನು ನನ್ನ ಮೈಗೇ ಚಿಮುಕಿಸಬೇಕು. ನಾನು ಅಪ್ಸರೆಯಂತಹ ಸುಂದರಿಯಾಗುತ್ತೇನೆ. ಉಳಿದ ನೀರು ಹಂದಿಯಾದ ಹೆಂಡತಿಗೆ. ಅವಳು ಶಾಶ್ವತವಾಗಿ ಇಲ್ಲೇ ಶಿಲೆಯಾಗಿ ಬಿದ್ದಿರಲಿ” ಎಂದು ಹೇಳಿದಳು.
“”ನನಗೆ ಎಲ್ಲ ಮಾತುಗಳೂ ನೆನಪಿವೆ. ನೀನು ಸ್ನಾನ ಮುಗಿಸಿ ಬಾ” ಎಂದು ಗುಮೋಕೆ ಹೇಳಿದ. ಮಾಟಗಾತಿ ಸಮುದ್ರದಲ್ಲಿ ಸ್ನಾನ ಮುಗಿಸಿ ಬರುತ್ತಿದ್ದಂತೆ ಪಾತ್ರೆಯಲ್ಲಿರುವ ಮೇಲ್ಭಾಗದ ನೀರನ್ನು ತನ್ನ ಹೆಂಡತಿಯ ಮೈಗೆ ಸುರುವಿದ. ಕೋಪದಿಂದ ಮಾಟಗಾತಿ ಹಲ್ಲು ಕಡಿಯುತ್ತ, “”ಅವಿವೇಕಿ, ಏನು ಅವಾಂತರ ಮಾಡಿದೆ? ನನ್ನ ಮಂತ್ರದಿಂದ ನಿನ್ನನ್ನು ಸರ್ವನಾಶ ಮಾಡುತ್ತೇನೆ” ಎಂದು ಗರ್ಜಿಸಿದಳು. ಗುಮೋಕೆ ಬೆದರದೆ ಪಾತ್ರೆಯಲ್ಲಿರುವ ತಳಭಾಗದ ನೀರನ್ನು ಮಾಟಗಾತಿಯ ಮೈಮೇಲೆ ಎರಚಿದ. ಅವಳ ಕೂಗು ನಿಂತೇಹೋಯಿತು. ಅವಳು ದೊಡ್ಡ ಶಿಲೆಯಾಗಿ ಮಾರ್ಪಟ್ಟಳು. ಮಂತ್ರಜಲದ ಮಹಿಮೆಯಿಂದ ಗುಮೋಕೆಯ ಹೆಂಡತಿ ಮರಳಿ ಮನುಷ್ಯಳಾದಳು. ಆದರೆ ತೆಳ್ಳಗೆ, ಬೆಳ್ಳಗೆ ಸುಂದರಿಯಾಗಿ ಬದಲಾಗಿದ್ದ ಅವಳಿಗೆ ಮೊದಲಿನಂತೆ ಹಸಿವೆಯೂ ಇರಲಿಲ್ಲ. ಗಂಡನೊಂದಿಗೆ ಸುಖವಾಗಿದ್ದಳು.
ಪ. ರಾಮಕೃಷ್ಣ ಶಾಸ್ತ್ರಿ