ಬಾಲಿ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರಾಡೊ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಬುಧವಾರ ಇಂಡೋನೇಷ್ಯಾದ ಬಾಲಿಯಲ್ಲಿ ಮಾತಿನ ಚಕಮಕಿ ನಡೆದಿದೆ.
ಉಭಯ ನಾಯಕರ ನಡುವೆ ನಡೆದಿದ್ದ ಮಾತುಕತೆಯ ವಿವರಗಳು ಮಾಧ್ಯಮಗಳಿಗೆ ಸೋರಿಕೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾಧ್ಯಮಗಳ ಸಮ್ಮುಖದಲ್ಲಿಯೇ ಕೆನಡಾ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನಾವು ಇಬ್ಬರೂ ಮಾತನಾಡಿದ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಇದು ಸರಿಯಾದ ಕ್ರಮವಲ್ಲ. ರಾಜತಾಂತ್ರಿಕ ಮಟ್ಟದಲ್ಲಿ ಸಂಭಾಷಣೆ ನಡೆಯುವುದು ಈ ರೀತಿಯಲ್ಲ’ ಎಂದು ಟೀಕಿಸಿದ್ದಾರೆ.
“ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಮಗೆ ಆಸಕ್ತಿ ಇದ್ದರೆ ಮುಂದುವರಿಯಲು ಅವಕಾಶ ಇದೆ. ಇಲ್ಲದೇ ಇದ್ದರೆ ಕಷ್ಟವಾದೀತು’ ಎಂದು ನೇರವಾಗಿ ಹೇಳಿದ್ದಾರೆ.
ಮೂರು ವರ್ಷಗಳ ಬಳಿಕ ಕೆನಡಾ ಮತ್ತು ಚೀನ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಚೀನ ತಮ್ಮ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.