Advertisement
ಅತ್ತ ಚೀನ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಗಡಿಭಾಗದಲ್ಲಿ ಜಮಾವಣೆ ಮಾಡುತ್ತಿರುವಂತೆಯೇ, ಇತ್ತ ಭಾರತವೂ ಸಹ ಯೋಧರು, ಯುದ್ಧವಿಮಾನಗಳು, ರಾಡಾರ್‌ಗಳು, ವಾಯುನೆಲೆ ತುಕಡಿಗಳು, ಫಿರಂಗಿಗಳು ಸೇರಿದಂತೆ ಅತ್ಯುಪಯುಕ್ತ ಯುದ್ಧ ಸಾಮಗ್ರಿಗಳ ಮೂಲಕ ಎಲ್ಲಾ ಸವಾಲಿಗೂ ಸಜ್ಜಾಗಿ ನಿಲ್ಲುತ್ತಿದೆ.
Related Articles
Advertisement
ಗಮನಾರ್ಹ ಸಂಗತಿಯೆಂದರೆ, ಈ ಬಿಕ್ಕಟ್ಟಿನ ಸಮಯದಲ್ಲೇ ಭಾರತದ ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸುವಂಥ ಸಂತಸದ ಸುದ್ದಿಯೊಂದು ಬಂದಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಹಿನ್ನೆಲೆಯಲ್ಲಿ ಜುಲೈ ಅಂತ್ಯದೊಳಗೆ ಆರು ರಫೇಲ್ ಯುದ್ಧ ವಿಮಾನಗಳನ್ನು ಭಾರತ ಪಡೆಯಲಿದೆ.
ಹಾಗೆಂದು, ಚೀನ – ಭಾರತದ ನಡುವೆ ಯುದ್ಧ ಸಂಭವಿಸುವುದು ಶತಃಸಿದ್ಧ ಎಂದು ಭಾವಿಸುವುದು ತಪ್ಪಾಗುತ್ತದೆ. ಚೀನ ಆರ್ಥಿಕವಾಗಿ ಭಾರತಕ್ಕಿಂತ ಎಷ್ಟೇ ಮುಂದಿರಬಹುದು, ಆದರೆ ಯುದ್ಧ ನಿಸ್ಸಂಶಯವಾಗಿಯೂ ಅದಕ್ಕೂ ಹಲವು ರೀತಿಯಿಂದ ದುಬಾರಿಯಾಗಿ ಪರಿಣಮಿಸುವುದು ನಿರ್ವಿವಾದ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಲೇ ಕಪ್ಪು ಚುಕ್ಕೆಯೊಂದು ಚೀನಕ್ಕೆ ಹತ್ತಿದ್ದು, ಅದರ ಮೇಲೆ ಜಾಗತಿಕ ಒತ್ತಡವೂ ಹೆಚ್ಚುತ್ತಿದೆ. ಒಂದು ವೇಳೆ ಯುದ್ಧ ಸಂಭವಿಸಿತೆಂದರೂ ಚೀನದ ಹೆಡೆಮುರಿಕಟ್ಟಲು ಅನೇಕ ರಾಷ್ಟ್ರಗಳು ಭಾರತಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಕ್ಕೆ ನಿಲ್ಲಲಿವೆ. ಭಾರತವೂ ಏಕಾಂಗಿಯಾಗಿ ಚೀನಕ್ಕೆ ಉತ್ತರಿಸಲು ಸಶಕ್ತವಾಗಿದೆ.
ಇಂದು ಪಾಕಿಸ್ಥಾನವನ್ನು ಹೊರತುಪಡಿಸಿ, ಉಳಿದೆಲ್ಲ ನೆರೆ ರಾಷ್ಟ್ರಗಳೊಂದಿಗೂ ಚೀನ ವೈಷಮ್ಯ ಕಟ್ಟಿಕೊಂಡಿದೆ. ದಕ್ಷಿಣ ಚೀನ ಸಮುದ್ರದಲ್ಲಿ ಅದು ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಜಗತ್ತಿನ ಅನೇಕ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ.
ಇತ್ತೀಚೆಗಷ್ಟೇ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಜರ್ಮನಿಯಲ್ಲಿದ್ದ ತನ್ನ ಮೂರು ಸಮರ ನೌಕೆಗಳನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸಿಕೊಟ್ಟಿರುವುದು, ಅಲ್ಲದೇ ಚೀನ ಯಾವ ರಾಷ್ಟ್ರಗಳೊಂದಿಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆಯೋ, ಆ ರಾಷ್ಟ್ರಗಳಿಗೆಲ್ಲ ಸೇನಾ ಬೆಂಬಲ ನೀಡಿರುವುದಾಗಿ ಹೇಳಿರುವುದು ಸಹ, ಚೀನ ಬೆಚ್ಚುವಂತೆ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತ ಚೀನಕ್ಕೆ ಈಗ ಬಲಿಷ್ಠ ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗುತ್ತಿದೆ.
ಈಗ ಭಾರತ ಬದಲಾಗಿದೆ. ಸತ್ಯವೇನೆಂದರೆ, ಗಡಿ ಭಾಗದಲ್ಲಿ ಭಾರತ ನಡೆಸಿರುವ ಅಭಿವೃದ್ಧಿ ಕಾರ್ಯಗಳು ಚೀನದ ನಿದ್ದೆಗೆಡಿಸಿವೆ. ಈ ಕಾರಣಕ್ಕಾಗಿಯೇ, ಚೀನ ಹುಚ್ಚುಹಿಡಿದಂತೆ ವರ್ತಿಸುತ್ತಿದೆ. ನಿಸ್ಸಂಶಯವಾಗಿಯೂ ಭಾರತೀಯ ಸೇನೆಯ ಕೆಚ್ಚೆದೆಯ ಈ ಹೆಜ್ಜೆಗಳು, ಬದಲಾದ ಭಾರತದ ಸಂಕೇತಗಳಾಗಿವೆ.