Advertisement

Karnataka: ಪ್ರತಿಯೊಬ್ಬ ಅಧಿಕಾರಿಯ ವರ್ಗಾವಣೆಗೆ ಪ್ರತ್ಯೇಕ ಕಾರಣ ನೀಡಬೇಕಿಲ್ಲ: ಹೈಕೋರ್ಟ್‌

12:21 AM Feb 03, 2024 | Pranav MS |

ಬೆಂಗಳೂರು: ಸರಕಾರ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಅಧಿಕಾರಿಯ ವರ್ಗಾವಣೆಗೂ ಪ್ರತ್ಯೇಕ ಕಾರಣ ನೀಡುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್‌ ಹೇಳಿದೆ. ಅಲ್ಲದೆ, ಸರಕಾರಿ ಸಿಬಂದಿಯನ್ನು ನಿಗದಿತ ಅವಧಿಗಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಮುಂದುವರಿಸಿದರೆ ಅವರು ಸ್ಥಳೀಯವಾಗಿ ಸಂಬಂಧಗಳನ್ನು ಬೆಳೆಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳತ್ತ ಒತ್ತು ನೀಡುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

Advertisement

ತಮ್ಮನ್ನು ವರ್ಗಾವಣೆ ಮಾಡಿದ್ದ ಸರಕಾರದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಕ್ರಮ ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿದ್ದ ಎಚ್‌.ಎಸ್‌. ವೀಣಾ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ಪೀಠ ಈ ಆದೇಶ ನೀಡಿ ಅರ್ಜಿಗಳನ್ನು ವಜಾಗೊಳಿಸಿದೆ.

ಸರಕಾರದಲ್ಲಿ ವರ್ಗಾವಣೆ ಮಾಡ ಬಹುದಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ತಾನು ಬಯಸಿದ ಹುದ್ದೆಯಲ್ಲಿ ದೀರ್ಘ‌ಕಾಲ ಉಳಿದುಕೊಳ್ಳುವ ಹಕ್ಕು ಹೊಂದಿರುವುದಿಲ್ಲ ಎಂದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖೀಸಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಜತೆಗೆ, ಅರ್ಜಿದಾರರ ದಾಖಲೆ ಗಳನ್ನು ಪರಿಶೀಲಿಸಿದಾಗ ಒಂದೇ ಸ್ಥಳದಲ್ಲಿ ಒಂದಲ್ಲ ಒಂದು ಹುದ್ದೆಯಲ್ಲಿ ಗಣನೀಯವಾಗಿ ಕಾರ್ಯ ನಿರ್ವಹಿಸಿದ್ದಾರೆಂಬ ಅಂಶ ಗೊತ್ತಾ ಗಲಿದೆ. ಅಲ್ಲದೆ, ರಾಜ್ಯ ಸರಕಾರ ಪ್ರತಿಯೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವುದಕ್ಕೆ ಕಾರಣ ಗಳನ್ನು ನಿಗದಿಪಡಿಸುವುದು ಕಷ್ಟ. ಅರ್ಜಿದಾರರನ್ನು ವರ್ಗಾವಣೆ ಮಾಡುವುದಕ್ಕೆ ಕಾರಣ ನೀಡುವುದು ಅನಿವಾರ್ಯವಲ್ಲ ಎಂದು ಪೀಠ ತಿಳಿಸಿದೆ.

ಮುಖ್ಯಮಂತ್ರಿಗಳ ಪೂರ್ವಾನು ಮತಿ ಪಡೆಯದೇ ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಪ್ರಕರಣ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದಲ್ಲಿ ಅರ್ಜಿದಾರರನ್ನು ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆದೇ ವರ್ಗಾವಣೆ ಮಾಡಲಾಗಿದೆ ಎಂಬ ಅಂಶ ಮನದಟ್ಟಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

Advertisement

ಪ್ರಕರಣ ಏನು ?
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನ ವಿಭಾಗದದಲ್ಲಿ ಉಪ ಆಯುಕ್ತರಾಗಿದ್ದ ಎಚ್‌.ಎಸ್‌. ವೀಣಾ, ಸಿ.ಪುಷ್ಪಾ, ಜಿಎಸ್ಟಿ ವಿಭಾಗದ ಉಪ ಆಯುಕ್ತೆ ವಿ.ಆರ್‌. ಮಂಜುಳಾ, ಸಹಾಯಕ ಆಯುಕ್ತೆ ಎನ್‌.ಸಿ. ಶೈಲಾ, ಇ- ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಕೆ.ಎಸ್‌. ಬಸವರಾಜು ಅವರನ್ನು 2022ರ ಜೂ. 22ರಂದು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿತ್ತು. ಇದಾದ ಬಳಿಕ ಒಂದು ವರ್ಷ ಎರಡು ತಿಂಗಳು ಮುಗಿಯುವುದಕ್ಕೂ ಮುನ್ನ ಮತ್ತೆ ವರ್ಗಾವಣೆ ಮಾಡಲಾಗಿತ್ತು. ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳನ್ನು ಕೆಎಟಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಲ್ಲ ಅರ್ಜಿದಾರರು ಪ್ರತ್ಯೇಕವಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅಲ್ಲೂ ಸರಕಾರಕ್ಕೇ ಜಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next