ಬೆಂಗಳೂರು: ಜಮೀನು ಮಾರಾಟದಲ್ಲಿ ವಂಚನೆ ತಡೆಯಲು ಪಹಣಿ-ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸೂಚಿಸಿರುವ ಮುಖ್ಯಮಂತ್ರಿ, ಸರಕಾರಿ ಜಮೀನುಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದಿದ್ದಾರೆ.
ಈ ಕುರಿತು ಸಭೆಗೆ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ 1.40 ಕೋಟಿ ಎಕರೆ ಸರಕಾರಿ ಜಮೀನು ಇದ್ದು, ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ದತ್ತಾಂಶ ಸೃಜಿಸಲಾಗಿದೆ. 14.32 ಲಕ್ಷ ಸರಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಲಾಗಿದೆ. ಈ ಪೈಕಿ 10.78 ಲಕ್ಷ ಜಮೀನುಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದರು.
ಇದರಲ್ಲಿ ಕಂದಾಯ ಇಲಾಖೆಗಳ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಶ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು ಸಮೀಕ್ಷೆ ನಡೆಸಲಾಗಿದೆ. ಒಟ್ಟು 91,000 ಜಮೀನುಗಳು ಒತ್ತವರಿಯಾಗಿರುವುದನ್ನು ಗುರುತಿಸಲಾಗಿದೆ. ಆಗಸ್ಟ್‌ನಿಂದ ಸರ್ವೇಯರುಗಳ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ತಿ ರಕ್ಷಣೆಗೆ ಎಸ್ಟೇಟ್7 ಅಧಿಕಾರಿಗಳ ನೇಮಕ ವಿವಿಧ ಇಲಾಖೆಗಳ ಆಸ್ತಿ ರಕ್ಷಣೆಗೆ ಎಸ್ಟೇಟ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ತಮ್ಮ ಇಲಾಖೆಗೆ ಹಂಚಿಕೆಯಾದ ಭೂಮಿಯ ಮಾಹಿತಿಯನ್ನು ಆರ್‌ಟಿಸಿಯಲ್ಲಿ ಇಂದೀಕರಣ ಮಾಡಬೇಕು. ಹಾಗೂ ಒತ್ತುವರಿ ತೆರವು ಗೊಳಿಸಿ, ತಮ್ಮ ಆಸ್ತಿಯನ್ನು ಸಂರಕ್ಷಿಸಬೇಕು. ಸರಕಾರಿ ಜಮೀನು ಒತ್ತುವರಿ ಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸಿಎಂ ಹೇಳಿದರು.
ವರ್ಷದೊಳಗೆ ಭೂಮಿ ದಾಖಲೆ ಡಿಜಿಟಲೀಕರಣ
ಭೂ ಸುರಕ್ಷಾ ಕಾರ್ಯಕ್ರಮದಡಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಮುಂದಿನ 1 ವರ್ಷದೊಳಗೆ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.