ಕೊಪ್ಪಳ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯ ಪ್ರತಿಯೊಂದು ಮಾಹಿತಿಯೂ ಇನ್ಮುಂದೆ ಆನ್‌ಲೈನ್‌ನಲ್ಲಿ ಸಂಗ್ರಹವಾಗಲಿದೆ. ಪ್ರತಿ ನಿತ್ಯ ಜನತೆ ಊಟ, ಉಪಾಹಾರ ಪಡೆದ ವಿವರ ಜತೆಗೆ ಕ್ಯಾಂಟೀನ್‌ನಲ್ಲಿ ಸಿದ್ಧಗೊಳ್ಳುವ ಪದಾರ್ಥ ವೀಕ್ಷಣೆಗೆ ಅಧಿಕಾರಿ ವರ್ಗ ನಿತ್ಯ ಬಂದು ಪರೀಕ್ಷೆ ಮಾಡಿ ಆನ್‌ಲೈನ್ ಸಹಿ ಮಾಡುವ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಯಡಿ 160 ಇಂದಿರಾ ಕ್ಯಾಂಟೀನ್‌ಗಳು ನಡೆಯುತ್ತಿದ್ದು, ಆ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ನಡೆಯುವ ಕಾರ್ಯ ಚಟುವಟಿಕೆಗಳ ಮಾಹಿತಿ ಕುಳಿತ ಸ್ಥಳದಲ್ಲೇ ದೊರೆಯಲಿದೆ.
ಸಿದ್ದರಾಮಯ್ಯ ಸರ್ಕಾರ ನಗರ ಪ್ರದೇಶದ ಜನತೆಗೆ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿ ಉಪಾಹಾರಕ್ಕೆ 5 ರೂ., ಊಟಕ್ಕೆ 10 ರೂ. ನಿಗದಿ ಮಾಡಿ ಚಾಲನೆ ನೀಡಿದ್ದರು. 248 ಕ್ಯಾಂಟೀನ್ ಆರಂಭವಾಗಬೇಕಿದ್ದರೂ ಪ್ರಸ್ತುತ 160 ಕ್ಯಾಂಟೀನ್‌ಗಳು ಜನತೆಗೆ ಸೇವೆ ನೀಡುತ್ತಿವೆ. ಆ ಮಾಹಿತಿ ಇನ್ಮುಂದೆ ಆನ್‌ಲೈನ್‌ನಲ್ಲೇ ದಾಖಲಿಸಬೇಕಿದೆ.
ಆನ್‌ಲೈನ್‌ನ ವಿಶೇಷತೆ?: ಪ್ರಸ್ತುತ ಕ್ಯಾಂಟೀನ್‌ಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಎಷ್ಟು ಜನರು ಆಗಮಿಸುತ್ತಾರೆ, ಎಷ್ಟು ಜನರು ಟೋಕನ್ ಪಡೆಯುತ್ತಾರೆ ಎನ್ನುವ ಮಾಹಿತಿ ನಿಖರವಾಗಿ ತಿಳಿಯುತ್ತಿಲ್ಲ. ಆದರೆ ಆನ್‌ಲೈನ್ ಸೇವೆಯಿಂದ ಪ್ರತಿ ಕ್ಯಾಂಟೀನ್‌ನಲ್ಲಿ ಯಂತ್ರದ ಮೂಲಕವೇ ವಿತರಿಸಲಾಗುತ್ತದೆ. ಮಷಿನ್‌ನಲ್ಲಿ ಜನತೆಗೆ ಒಂದು ಟೋಕನ್ ನೀಡುತ್ತಿದ್ದಂತೆ ಆನ್‌ಲೈನ್‌ನಲ್ಲಿ ಅದರ ಮಾಹಿತಿ ಸಂಗ್ರಹವಾಗುತ್ತದೆ. ರಾಜ್ಯದಲ್ಲಿ ಎಷ್ಟು ಕ್ಯಾಂಟೀನ್‌ನಲ್ಲಿ ಎಷ್ಟು ಜನ ಊಟ, ಉಪಾಹಾರ ಮಾಡಿದರು, ಯಾವ ಊಟ ತಯಾರಿಸಿದ್ದರು, ಕ್ಯಾಂಟೀನ್ ಸ್ಥಿತಿಗತಿಯೇನು ಎಂಬ ಮಾಹಿತಿ ದಾಖಲಾಗಲಿದೆ.
ಅಧಿಕಾರಿ ನಿತ್ಯ ಕ್ಯಾಂಟೀನ್‌ಗೆ ಭೇಟಿ- ಸಹಿ: ಕ್ಯಾಂಟೀನ್‌ನಲ್ಲಿ ಆಹಾರ ಸಿದ್ಧತೆ, ಶುಚಿತ್ವ ಹಾಗೂ ಗುಣಮಟ್ಟ ಬಗ್ಗೆ ಪರಿಶೀಲಿಸಲು ಆಯಾ ನಗರಸಭೆ, ಆಹಾರ ನಿರೀಕ್ಷಕರು ನಿತ್ಯ ಕ್ಯಾಂಟೀನ್‌ಗೆ ಆಗಮಿಸಿ ಪರಿಶೀಲಿಸಿ ಬಯೋಮೆಟ್ರಿಕ್ ಸಹಿ ಮಾಡಿದರೆ ಮುಂದಿನ ಪ್ರಕ್ರಿಯೆ ನಡೆಯಲಿದೆ. ಅ ಧಿಕಾರಿ ನಿತ್ಯ 3 ಬಾರಿ ಕ್ಯಾಂಟೀನ್‌ಗೆ ಭೇಟಿ ನೀಡುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
160 ಕ್ಯಾಂಟೀನ್‌ನಲ್ಲಿ ಸಿಸಿ ಕ್ಯಾಮೆರಾ: ಆರಂಭವಾಗಿರುವ 160 ಕ್ಯಾಂಟೀನ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಇಲಾಖೆ ಸೂಚಿಸಿದೆ. ಕೆಲವು ಕಡೆ ಅಳವಡಿಸಿದ್ದರೆ ಇನ್ನೂ ಕೆಲ ಕ್ಯಾಂಟೀನ್‌ನಲ್ಲಿ ಅಳವಡಿಸಿಲ್ಲ. ಅಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿನ ನಿಗಾ ವಹಿಸಲು ಕ್ಯಾಮೆರಾ ಸಹಕಾರಿಯಾಗಲಿದೆ. ಜತೆಗೆ ಸಿಬ್ಬಂದಿ ಕರ್ತವ್ಯದ ಜತೆ ಯಾವುದೇ ಅವಘಡ ನಡೆಯದಂತೆ ಜಾಗೃತಿ ವಹಿಸಲು ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿನ 160 ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಿದ್ದೇವೆ. ಇನ್ನು ಕ್ಯಾಂಟೀನ್ ಕಾರ್ಯ ನಿರ್ವಹಣೆ, ಟೋಕನ್ ಸಿಸ್ಟಮ್ ಸೇರಿ ಇತರೆ ಮಾಹಿತಿ ಆನ್‌ಲೈನ್‌ನಲ್ಲಿ ದಾಖಲಿಸುವ ಕುರಿತಂತೆ ಎರಡು ಸಭೆ ನಡೆಸಲಾಗಿದೆ. ಈ ಬಗ್ಗೆ ಕೆಲವೇ ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
-ರೇಣುಕಾ, ಇಂದಿರಾ ಕ್ಯಾಂಟೀನ್ ನೋಡಲ್ ಅಧಿಕಾರಿ, ಬೆಂಗಳೂರು
* ದತ್ತು ಕಮ್ಮಾರ