ಮೈಸೂರು: ಹೊಸ ವರ್ಷಾರಂಭಕ್ಕೆ ಮೈಸೂರು ನಗರದ 11 ಕಡೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆ. ಸರ್ಕಾರ ನಿಗದಿಪಡಿಸಿರುವ ಏಜೆನ್ಸಿ ವತಿಯಿಂದ ನಗರದಲ್ಲಿ ಈಗಾಗಲೇ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಆರಂಭಿಸಿದ್ದು,
ಪ್ರಿ-ಕಾಸ್ಟ್ ಸಾಮಗ್ರಿಗಳನ್ನು ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತಿರುವುದರಿಂದ ಒಂದು ಕ್ಯಾಂಟೀನ್ ನಿರ್ಮಾಣಕ್ಕೆ ಒಂದು ವಾರ ಕಾಲ ಬೇಕಾಗಿದ್ದು ತಿಂಗಳಾಂತ್ಯಕ್ಕೆ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ.
ಕ್ಯಾಂಟೀನ್ ನಿರ್ಮಾಣದ ನಂತರ ಮಹಾ ನಗರಪಾಲಿಕೆ ಅವುಗಳಿಗೆ ನೀರು, ವಿದ್ಯುತ್, ಒಳ ಚರಂಡಿ ಸಂಪರ್ಕ ಹಾಗೂ ಕಾಂಪೌಂಡ್ ವ್ಯವಸ್ಥೆ ಮಾಡಿಕೊಡಲಿದೆ. 2011ರ ಜನಗಣತಿ ಪ್ರಕಾರ ಮೈಸೂರು ನಗರದಲ್ಲಿ 11.5 ಲಕ್ಷ ಜನಸಂಖ್ಯೆ ಇರುವುದರಿಂದ 1 ಲಕ್ಷ ಜನಸಂಖ್ಯೆಗೆ ಒಂದು ಕ್ಯಾಂಟೀನ್‌ನಂತೆ ನಗರದ ವಿವಿಧ ಭಾಗಗಳಲ್ಲಿ 11 ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗುತ್ತಿದೆ.
ಹಸಿವು ಮುಕ್ತ ರಾಜ್ಯದ ಸಂಕಲ್ಪದೊಂದಿಗೆ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ಪಾಲಿಕೆ ವಾರ್ಡ್‌ಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದಲ್ಲಿ ಹಸಿದು ಬರುವ ಬಡಜನರಿಗೆ ಕೈಗೆಟುಕುವ ದರದಲ್ಲಿ ಊಟ- ತಿಂಡಿ ಒದಗಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿನ ಬಡ-ಮಧ್ಯಮ ವರ್ಗದ ಜನರು, ಕೂಲಿಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಕೈಗೆಟುಕುವ ದರದಲ್ಲಿ ಹಸಿವು ನೀಗಿಸುವ ಕೆಲಸವಾಗಲಿದೆ.
ಇಂದಿರಾ ಕ್ಯಾಂಟೀನ್‌ನಲ್ಲಿ 5ರೂ.,ಗೆ ಬೆಳಗಿನ ಉಪಾಹಾರ, 10 ರೂ.,ಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ದೊರೆಯಲಿದೆ. ಒಂದು ಹೊತ್ತಿಗೆ ಪ್ರತಿ ಕ್ಯಾಂಟೀನ್‌ಗಳಲ್ಲಿ 500 ಜನರಿಗೆ ಊಟ-ತಿಂಡಿ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಜ.1ಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುವುದು ಸರ್ಕಾರದ ಉದ್ದೇಶ. ಅದರಂತೆ ಸರ್ಕಾರ ನಿಗದಿಪಡಿಸಿರುವ ಏಜೆನ್ಸಿಯವರು ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಕಾಮಗಾರಿ ಮುಗಿದ ನಂತರ ಪಾಲಿಕೆ ವತಿಯಿಂದ ನೀರು, ವಿದ್ಯುತ್, ಒಳ ಚರಂಡಿ ಸಂಪರ್ಕ ಕಲ್ಪಿಸಲಾಗುವುದು.
-ಜಿ.ಜಗದೀಶ್, ಆಯುಕ್ತರು, ಮಹಾ ನಗರಪಾಲಿಕೆ
ಎಲ್ಲೆಲ್ಲಿ ಕ್ಯಾಂಟೀನ್?: ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಆವರಣ, ಕೆ.ಆರ್.ಆಸ್ಪತ್ರೆ ಆವರಣ, ಗ್ರಾಮಾಂತರ ಬಸ್ ನಿಲ್ದಾಣ ಬಳಿ, ಚಾಮರಾಜ ಪುರಂ ರೈಲು ನಿಲ್ದಾಣ, ಮೇಟಗಳ್ಳಿಯಲ್ಲಿ ಪಿ.ಕೆ.ಟಿ.ಬಿ ಆಸ್ಪತ್ರೆ ಆವರಣ, ಹೈವೇ ವೃತ್ತ, ಅಜೀಜ್ ನಗರ, ಡಾ.ರಾಜಕುಮಾರ್ ರಸ್ತೆ, ಆಲನಹಳ್ಳಿ ವೃತ್ತ, ಸುಯೇಜ್ ಫಾರಂ, ಶಾರದಾದೇವಿ ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.
* ಗಿರೀಶ್ ಹುಣಸೂರು