Advertisement
ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, 2017-18ನೇ ಸಾಲಿನಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ್, ಮೊದ ಲು ಒಂದೆರಡು ವರ್ಷಗಳ ಕಾಲ ಉತ್ತಮವಾಗಿ ನಡೆದಿ ದ್ದನ್ನು ಹೊರತು ಪಡಿಸಿದರೆ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಯಿತು.
Related Articles
Advertisement
ಜಿಲ್ಲಾ ಯೋಜನಾ ನಿರ್ದೇಶಕರ ಭೇಟಿ: ಇಂದಿರಾ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ನೀಡಲು ನಗರಾಭಿವೃದ್ಧಿ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ, ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ್, ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ವತ್ಛತೆ ಹಾಗೂ ನೈರ್ಮಲ್ಯ ನಿರ್ವಹಣೆ ಪರಿಶೀಲನೆ ನಡೆಸಿರುವ ಅವರು, ಇಂದಿರಾ ಕ್ಯಾಂಟೀನ್‌ಗಳ ಸಮರ್ಪಕವಾಗಿ ಕಾರ್ಯನಿರ್ವ ಹಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಜಿಲ್ಲೆಯ ಮೂರು ನಗರಸಭೆ ಹಾಗೂ ಒಂದು ಪುರಸಭೆ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸಂಬಂಧಿಸಿದಂತೆ ಯೋಜನಾ ನಿರ್ದೇಶಕರು ನೋಟೀಸ್ ಜಾರಿ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 600 ಮಂದಿಗೆ ಊಟ: ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ 600 ಮಂದಿಯವರೆಗೆ ಊಟದ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಬೆಳಗ್ಗೆ 400 ಮಂದಿಗೆ ತಿಂಡಿ, ರಾತ್ರಿ 200 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದಿರುವವರಿಗೆ ಅಧಿಕಾರಿಗಳು ಸೂಚಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ಬೆಳಿಗ್ಗೆ 7.30 ರಿಂದ 10.30ರ ವರೆಗೆ ಮೆನುವಿನಲ್ಲಿರುವಂತೆ ತಿಂಡಿ, ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಊಟ, ರಾತ್ರಿ 7.30 ರಿಂದ 10 ಗಂಟೆಯ ವರೆಗೆ ರಾತ್ರಿ ಊಟವನ್ನು ನೀಡುವಂತೆ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ನೂರು ಮಂದಿಗೆ ಊಟ ಸಿಕ್ಕರೆ ಹೆಚ್ಚು ಎಂಬಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ಇಂದಿರಾ ಕ್ಯಾಂಟೀನ್ ಸಮಸ್ಯೆ ಸುಧಾರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ಮತ್ತೆ ಗತವೈಭವನ್ನು ಪಡೆದುಕೊಂಡೀತೆ ಎಂದು ಕಾಯ್ದು ನೋಡಬೇಕಿದೆ.
ಜಿಲ್ಲೆಯಲ್ಲಿ ಕಳ್ಳಾಟಕ್ಕೆ ಬ್ರೇಕ್: ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ನಗರಾಭಿವೃದ್ಧಿ ಇಲಾಖೆ, ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಇಂದಿರಾ ಕ್ಯಾಂಟೀನ್‌ಗಳ ನೈರ್ಮಲ್ಯತೆ ಬಗ್ಗೆ ಗಮನ ವಹಿಸುವ ಜೊತೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ನಗರಸಭೆ, ಪುರಸಭೆ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಇದರಿಂದಾಗಿ ಇಂದಿರಾ ಕ್ಯಾಂಟೀನ್‌ಗಳ ಕಳ್ಳಾಟಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ನಿರಂತರವಾಗಿ ನಡೆಯುತ್ತಿವೆ. ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಗಮನವಹಿಸುವಂತೆ ಜಿಲ್ಲೆಯ ಎಲ್ಲಾ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. – ರಮೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ
ಬಡ ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ಊಟ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಪ್ರಾರಂಭಿಸಿದ ಇಂದಿರಾ ಕ್ಯಾಂಟೀನಿಂದ ಮಧ್ಯಾಹ್ನದ ಸಮಯದಲ್ಲಿ ಸಾಕಷ್ಟು ಜನತೆಗೆ ಅನುಕೂಲವಾಗುತಿತ್ತು. ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದ್ದು, ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. – ವಾಸೀಲ್ ಆಲಿಖಾನ್, ನಗರಸಭಾ ಸದಸ್ಯ, ಚನ್ನಪಟ್ಟಣ
– ಸು.ನಾ.ನಂದಕುಮಾರ್