Advertisement
ಆರ್ಥಿಕತೆ ಕೊರತೆ ಎದುರಿಸುತ್ತಿರುವ ಸಿಲಿಕಾನ್ ಸಿಟಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಗಾಗ್ಗೆ ನೀರಿನ ಸಮಸ್ಯೆ ಎದುರಾಗಿ ಬಿಲ್ ಪಾವತಿ ಆಗಿಲ್ಲ ಎಂಬ ಕಾರಣಕ್ಕೆ ಜಲಮಂಡಳಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಜತೆಗೆ ರುಚಿ ಮತ್ತು ಶುಚಿತ್ವ ಆಹಾರ ದೊರೆಯುತ್ತಿಲ್ಲ ಎಂಬ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಿ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿ ಹೋಗುತ್ತವೆಯೋ ಎಂಬ ಆಂತಕ ನಗರದಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಆಟೋ ಚಾಲಕರಲ್ಲಿ ಮನೆ ಮಾಡಿತ್ತು.
Related Articles
Advertisement
2017ರ ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್‌ಗಳು ಶುರುವಾದವು. ಶೇಕಡಾ 100ರಷ್ಟು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಬಿಬಿಎಂಪಿ ಈ ಯೋಜನೆ ಆರಂಭಿಸಿತು. 2019-20ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಹಣ ಒದಗಿಸಲಿಲ್ಲ. ಪಾಲಿಕೆ ಕ್ಯಾಂಟೀನ್‌ಗಳ ನಿರ್ವಹಣೆಗೆ ತಗಲುವ ವೆಚ್ಚದಲ್ಲಿ ಶೇ.50 ರಷ್ಟನ್ನಾದರೂ ಭರಿಸುವಂತೆ ಕೋರಿತ್ತು. ಸರ್ಕಾರದಿಂದ ನಿರೀಕ್ಷಿತ ಅನುದಾನ ಸಿಗಲೇ ಇಲ್ಲ. ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡಲು ಹಿಂದೇಟು ಹಾಕಿತು. ಆ ಹಿನ್ನೆಲೆಯಲ್ಲೇ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಬಿಬಿಎಂಪಿ 2022-23ರ ಬಜೆಟ್‌ನಲ್ಲಿ 50 ಕೋಟಿ ರೂ.ಮೀಸಲಿಟ್ಟಿತ್ತು.
40 ಲಕ್ಷ ರೂ. ನೀರಿನ ಬಿಲ್ ಬಾಕಿ: ಸಿಲಿಕಾನ್ ಸಿಟಿಯ ಎಂಟೂ ವಲಯಗಳಲ್ಲೂ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ನೀರಿನ ಬಿಲ್ ಬಾಕಿಯಿದೆ. ಜಲಮಂಡಳಿಗೆ ಸುಮಾರು 40 ಲಕ್ಷಕ್ಕೂ ಅಧಿಕ ನೀರಿನ ಬಿಲ್ ಪಾವತಿಸಬೇಕಾಗಿದೆ. ನೀರಿನ ಬಿಲ್ ಪಾವತಿಯಾಗಿಲ್ಲ ಎಂಬುದನ್ನು ಪಾಲಿಕೆ ಅಧಿಕಾರಿಗಳು ಖಚಿತ ಪಡಿಸುತ್ತಾರೆ. ಕ್ಯಾಂಟೀನ್ ಗಳಲ್ಲಿ ಕುಡಿಯುವ ನೀರಿನ ಕೊರತೆಯ ಬಗ್ಗೆ ನನಗೆ ದೂರುಗಳು ಬಂದಿವೆ. ಒಪ್ಪಂದದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀರು ಒದಗಿಸುವ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ನೀರಿನ ಬಿಲ್ ಪಾವತಿಸಬೇಕು. ಇದು ಗುತ್ತಿಗೆದಾರ ಮತ್ತು ಜಲಮಂಡಳಿ ನಡುವಿ ಒಪ್ಪಂದವಾಗಿದೆ ಎನ್ನುತ್ತಾರೆ.
ಕೆಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿವೆ. ಆದರೆ ಅವುಗಳ ಸಬಲೀಕರಣ ಕಾರ್ಯ ನಡೆಯಲಿದೆ. ಹೆಚ್ಚು ಅವಶ್ಯಕತೆ ಇರುವ ಪ್ರದೇಶಗಳಿಗೆ ಶಿಫ್ಟ್ ಮಾಡುವ ಆಲೋಚನೆ ಇದೆ. ಕೊಳಗೇರಿ ಪ್ರದೇಶಗಳಲ್ಲಿ ಎರಡೆರಡು ಇಂದಿರಾ ಕ್ಯಾಂಟೀನ್ ತೆರೆಯುವ ಚಿಂತನೆ ಇದೆ. –ತುಷಾರ್ ಗಿರಿನಾಥ್, ಪಾಲಿಕೆ ಮುಖ್ಯ ಆಯುಕ್ತ
-ದೇವೇಶ ಸೂರಗುಪ್ಪ