ಮಂಗಳೂರು: ಇಂಡಿಗೋ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದಿಂದ ರಾಜಧಾನಿ ಹೊಸದಿಲ್ಲಿಗೆ ಶುಕ್ರವಾರದಿಂದ ಪ್ರತಿನಿತ್ಯ ವಿಮಾನ ಸೇವೆಯನ್ನು ಆರಂಭಿಸಿದೆ.
ವಿಮಾನ 6ಉ 6303 ದಿಲ್ಲಿಯಂದ ಮಧ್ಯಾಹ್ನ 2.55ಕ್ಕೆ ಹೊರಟು ಮಂಗಳೂರಿಗೆ ಸಂಜೆ 6.05ಕ್ಕೆ ತಲುಪಲಿದೆ. ವಿಮಾನ 6ಉ 6304 ಸಂಜೆ 6.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 9.35ಕ್ಕೆ ದಿಲ್ಲಿ ತಲುಪಲಿದೆ.
ಶುಕ್ರವಾರ ದಿಲ್ಲಿಗೆ ತೆರಳಿದ ಇಂಡಿಗೋ ವಿಮಾನದಲ್ಲಿ 147 ಮಂದಿ ಪ್ರಯಾಣಿಸಿದ್ದರು. ಶನಿವಾರ ಮಂಗಳೂರಿನಿಂದ ಈ ವಿಮಾನದಲ್ಲಿ ಪ್ರಯಾಣಿಸಲು 170 ಮಂದಿ ಬುಕ್ಕಿಂಗ್ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರನ್‌ವೇ ಮರು ರಚನೆಗೆ (ರಿಕಾಪೆìಟಿಂಗ್) ಸಂಬಂಧಿಸಿ ಶುಕ್ರವಾರದಿಂದ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರವಿವಾರ ಮತ್ತು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ವಿಮಾನಗಳು ಸಂಜೆ 6ರಿಂದ ಬೆಳಗ್ಗೆ 9.30ರ ನಡುವೆ ಪರಿಷ್ಕೃತ ವೇಳಾಪಟ್ಟಿಯಲ್ಲಿ ಕಾರ್ಯಾಚರಿಸಲಿವೆ. ಹಾಗಿದ್ದರೂ ಇಂಡಿಗೋದ ವಿಮಾನ 6ಉ 172 (ಸೋಮವಾರ- ಶನಿವಾರ) ಕಾರ್ಯಾಚರಿಸುವುದಿಲ್ಲ.
ಇದು ರಿಕಾಪೆಟಿಂಗ್ ಕಾರ್ಯ ನಡೆಯದ ರವಿವಾರದಂದು ಮಾತ್ರವೇ ಕಾರ್ಯಾಚರಿಸಲಿದೆ. ವಿಮಾನ 6ಉ 172 ಮಂಗಳೂರಿನಿಂದ ಬೆಂಗಳೂರು ಮಾರ್ಗವಾಗಿ ಕೋಲ್ಕತಾಕ್ಕೆ ಸಂಚರಿಸುತ್ತದೆ. ರವಿವಾರದಂದು ಈ ವಿಮಾನ ಮಂಗಳೂರಿನಿಂದ ಮಧ್ಯಾಹ್ನ 12.15ಕ್ಕೆ ಹೊರಡಲಿದೆ. ಬೆಂಗಳೂರಿನಿಂದ ಈ ವಿಮಾನ ಮಧ್ಯಾಹ್ನ 2ಕ್ಕೆ ಹೊರಟು ಸಂಜೆ 4.35ಕ್ಕೆ ಕೋಲ್ಕತಾಕ್ಕೆ ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.