ಮುಂಬಯಿ : ನಿನ್ನೆ ಸೋಮವಾರ 1,421.90 ಅಂಕಗಳ ಮಹಾ ಜಿಗಿತವನ್ನು ಸಾಧಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ ಎತ್ತರದಿಂದ ಹಿಂದೆ ಸರಿದು ಇಂದು ಮಂಗಳವಾರದ ವಹಿವಾಟನ್ನು 382.87 ಅಂಕಗಳ ನಷ್ಟದೊಂದಿಗೆ 39,571.73 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 119.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,709.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಶೇರು ಪೇಟೆಯ ಇಂದಿನ ಹಿನ್ನಡೆಗೆ ವಹಿವಾಟುದಾರರು ಮತ್ತು ಹೂಡಿಕೆದಾರರಿಂದ ನಡೆದ ವ್ಯಾಪಕ ಲಾಭನಗದೀಕರಣದ ಶೇರು ಮಾರಾಟವೇ ಕಾರಣವೆಂದು ಪರಿಣತರು ಹೇಳಿದ್ದಾರೆ.
ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ ಮರಳಿ ಅಧಿಕಾರಕ್ಕೆ ಬರುವುದೆಂಬ ಧನಾತ್ಮಕತೆಯನ್ನು ಮುಂಬಯಿ ಶೇರು ಪೇಟೆ ಈಗಾಗಲೇ ಭರಪೂರ ಮೈಗೂಡಿಸಿಕೊಂಡಿದ್ದು ಸೂಚ್ಯಂಕಗಳ ಇನ್ನಷ್ಟು ಏರಿಕೆ ಅಸಂಭವ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದೇ ಇಂದಿನ ಹಿನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.
ಇಂದಿನ ಅತೀ ದೊಡ್ಡ ಲೂಸರ್ ಟಾಟಾ ಮೋಟರ್ ಶೇ.7.05ರ ಕುಸಿತವನ್ನು ಕಂಡಿತು. ಉಳಿದಂತೆ ಮಾರುತಿ, ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರ, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಪವರ್ ಗ್ರಿಡ್, ಹೀರೋ ಮೋಟೋ ಕಾರ್ಪ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್, ಎಸ್ ಬ್ಯಾಂಕ್, ಟಿಸಿಎಸ್ ಶೇರುಗಳು ಶೇ.3.25ರ ಕುಸಿತವನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,712 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 975 ಶೇರುಗಳು ಮುನ್ನಡೆ ಸಾಧಿಸಿದವು; 1,583 ಶೇರುಗಳು ಹಿನ್ನಡೆಗೆ ಗುರಿಯಾದವು; 154 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.