ಹೊಸದಿಲ್ಲಿ: ಚೀನದ 59 ಆ್ಯಪ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಸ್ವದೇಶಿ ನಿರ್ಮಿತ ಸಾಮಾಜಿಕ ಜಾಲತಾಣಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇದನ್ನು ಮನಗಂಡಿರುವ ಕೇಂದ್ರ ಸರಕಾರ, ಜನಪ್ರಿಯ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸ್ ಆ್ಯಪ್‌ಗೆ ಪರ್ಯಾಯವಾದ, ಭಾರತೀಯರೇ ಸಿದ್ಧಪಡಿಸಿರುವ ‘ಎಲಿಮೆಂಟ್ಸ್’ (ಮೊಬೈಲ್ ಅಪ್ಲಿಕೇಷನ್ (ಆ್ಯಪ್) ಅನ್ನು ಬಿಡುಗಡೆ ಮಾಡಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ರವಿವಾರ ಈ ಆ್ಯಪ್ ಬಿಡುಗಡೆ ಮಾಡಿದರು.
ಏನಿದರ ವಿಶೇಷ?: ಇದು ಕನ್ನಡ ಸೇರಿದಂತೆ ಭಾರತದ ಎಂಟು ಪ್ರಾಂತೀಯ ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲೀಷ್‌ನಲ್ಲಿಯೂ ಲಭ್ಯ. ಇದೊಂದು ಆಲ್- ಇನ್- ಒನ್ ಎನ್ನಬಹುದಾದ ಆ್ಯಪ್ ಆಗಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣವಾಗಿಯೂ, ಚಾಟಿಂಗ್‌ಗಾಗಿ, ಆಡಿಯೋ ಹಾಗೂ ವಿಡಿಯೋ ಕರೆಗಳಿಗಾಗಿ ಬಳಸಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಇದು ಲಭ್ಯವಿದೆ. ರವಿವಾರ ಸಂಜೆಯ ಹೊತ್ತಿಗೆ ಇದಾಗಲೇ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿತ್ತು.
ಯಾರಿದರ ತಯಾರಕರು?: ಖ್ಯಾತ ಆಧ್ಯಾತ್ಮ ಸಂಸ್ಥೆಯಾದ “ಆರ್ಟ್ ಆಫ್ ಲಿವಿಂಗ್’ನ ತಂತ್ರಜ್ಞಾನ ಶಾಖೆಯಾದ ಸುಮೇರು ಸಾಫ್ಟ್ವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಆ್ಯಪ್ ಅನ್ನು ತಯಾರಿಸಿದೆ. ರವಿವಾರ ಬೆಳಗ್ಗೆ ಈ ಆ್ಯಪ್ ಬಿಡುಗಡೆ ಮಾಡಿದ ವೆಂಕಯ್ಯ ನಾಯ್ಡು, “ಸುಮೇರು ಸಂಸ್ಥೆಯ 1000ಕ್ಕಿಂತಲೂ ಹೆಚ್ಚು ಸಿಬ್ಬಂದಿ ಈ ಆ್ಯಪ್ ಸಿದ್ಧಪಡಿಸಿದ್ದಾರೆ. ಈ ಸಿಬ್ಬಂದಿ, ಆರ್ಟ್ ಆಫ್ ಲಿವಿಂಗ್‌ನ ಸ್ವಯಂ ಸೇವಕರೂ ಆಗಿದ್ದಾರೆ” ಎಂದು ಅವರು ತಿಳಿಸಿದರು.
– ಆ್ಯಪ್ ತಯಾರಿಸಿರುವ ಆರ್ಟ್ ಆಫ್ ಲಿವಿಂಗ್‌ನ ಸುಮೇರು ಸಾಫ್ಟ್ವೇರ್ ಟೆಕ್ನಾಲಜೀಸ್ ಸಂಸ್ಥೆ
– ಕನ್ನಡ ಸೇರಿದಂತೆ ಭಾರತದ ಎಂಟು ಪ್ರಾಂತೀಯ ಭಾಷೆಗಳಲ್ಲಿ ಲಭ್ಯವಿರುವ ಆ್ಯಪ್
– ಸಾಮಾಜಿಕ ಜಾಲತಾಣವಾಗಿ, ಚಾಟಿಂಗ್, ಆಡಿಯೋ- ವೀಡಿಯೋ ಕರೆಯಾಗಿಯೂ ಬಳಕೆ ಸಾಧ್ಯ