ಒಡಿಶಾದ ಬಾಲಾಸೋರ್‌ನಲ್ಲಿ ಶುಕ್ರವಾರ 3 ರೈಲುಗಳ ನಡುವೆ ನಡೆದ ಭೀಕರ ರೈಲು ದುರಂತದಲ್ಲಿ ಕನಿಷ್ಠ 300 ಜನ ಮೃತಪಟ್ಟಿದ್ದು 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನು ದಶಕದ ಭೀಕರ ರೈಲು ದುರಂತ ಎಂಬುದಾಗಿಯೂ ಕರೆಯಲಾಗಿದೆ. ಆದರೆ ಈ ದುರಂತದ ಮೊದಲೂ ಭಾರತ ಹಲವು ಭೀಕರ ರೈಲು ದುರಂತಗಳನ್ನು ಕಂಡಿದೆ. 1981 ರಿಂದ 2023 ರ ವರೆಗೆ ಭಾರತದಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ಬಿಹಾರ ರೈಲು ದುರಂತ (ಜೂನ್ 1981)
1981ರಲ್ಲಿ ಬಿಹಾರದಲ್ಲಿ ನಡೆದ ರೈಲು ದುರಂತ ಭಾರತದ ಅತ್ಯಂತ ಕರಾಳ ರೈಲು ದುರಂತ ಎಂಬುದಾಗಿ ಕರೆಸಿಕೊಂಡಿದೆ. ಅಲ್ಲದೆ ಇದು ವಿಶ್ವದ ಎರಡನೇ ಅತ್ಯಂತ ದೊಡ್ಡ ರೈಲು ದುರಂತವೂ ಹೌದು. 1981 ರ ಜೂನ್ 6 ರಂದು ತನ್ನ ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಹೊತ್ತು ಮಾನ್ಸಿಯಿಂದ ಸಹಾರ್ಸಾಗೆ ಹೊರಟಿದ್ದ ರೈಲು ಭಾಗಮತಿ ಸೇತುವೆ ಯಲ್ಲಿ ಸುನಾಮಿಯ ಹೊಡೆತಕ್ಕೆ ಸಿಲುಕಿದ ಪರಿಣಾಮ ರೈಲಿನ 9 ಬೋಗಿಗಳ ಪೈಕಿ 7 ಬೋಗಿಗಳು ಸೇತುವೆಯಿಂದ ಕೆಳಕ್ಕೆ ಬಿದ್ದು ಕನಿಷ್ಠ 800-2,000 ಮಂದಿ ಮೃತಪಟ್ಟಿದ್ದರು. ಹಲವು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ವರುಣದ ಆರ್ಭಟದಿಂದಾಗಿ ಸಂಪೂರ್ಣ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಇದನ್ನು ಹೊರತುಪಡಸಿ 1981 ರಲ್ಲಿ ಭಾರತ ಹಲವು ರೈಲು ದುರಂತವನ್ನು ಕಂಡಿತ್ತು ಎಂಬುದು ಇನ್ನೊಂದು ಆಘಾತಕಾರಿ ಸಂಗತಿ.
ಪೆರುಮಾಣ್ ರೈಲು ದುರಂತ, ಕೇರಳ (ಜುಲೈ 1988)
ಜುಲೈ 8, 1988 ರ ಮಳೆಗಾಲದ ಸಂದರ್ಭ ಬೆಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಐಲ್ಯಾಂಡ್ ಎಕ್ಸ್‌ಪ್ರೆಸ್ ರೈಲಿನ 10 ಬೋಗಿಗಳು ಅಷ್ಟಮುಡಿ ಸರೋವರಕ್ಕೆ ಅಡ್ಡಲಾಗಿ ಕಟ್ಟಿಸಿರುವ ಪೆರುಮಾಣ್ ಸೇತುವೆ ಮೇಲಿಂದ ಮಳೆಯಿಂದ ತುಂಬಿ ತುಳುಕುತ್ತಿದ್ದ ಸರೋವರಕ್ಕೆ ಬಿದ್ದ ಪರಿಣಾಮ ಕನಿಷ್ಠ 100 ಮಂದಿ ಮೃತಪಟ್ಟಿದ್ದರು.
ಫಿರೋಝಾಬಾದ್ ರೈಲು ದುರಂತ (ಆಗಸ್ಟ್ 1995)
1995, ಆಗಸ್ಟ್ 20 ರ ಮಧ್ಯರಾತ್ರಿ ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ ಎರಡು ರೈಲುಗಳ ನಡುವೆ ನಡೆದ ಅಪಘಾತದಲ್ಲಿ ಕನಿಷ್ಠ 350 ಮಂದಿ ಮೃತಪಟ್ಟಿದ್ದರು. ಕಾನ್‌ಪುರದಿಂದ ಹೊರಟಿದ್ದ ʻಕಾಲಿಂದಿ ಎಕ್ಸ್‌ಪ್ರೆಸ್ʼ ರೈಲು ಮಾರ್ಗ ಮಧ್ಯೆ ನೀಲ್‌ಗಾಯ್‌ಗೆ ಡಿಕ್ಕಿ ಹೊಡೆದಿದ್ದರಿಂದ ಮುಂದೆ ಹೋಗಲು ಸಾಧ್ಯವಾಗದೇ ಹಳಿಯ ಮೇಲೆಯೇ ನಿಲ್ಲಬೇಕಾಯಿತು. ಪುರಿಯಿಂದ ಹೊರಟಿದ್ದ ʻಪುರುಷೋತ್ತಮ್ ಎಕ್ಸ್‌ಪ್ರೆಸ್ʼ ನಿಂತಿದ್ದ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.
ಗಾಯ್ಸಾಲ್ ದುರಂತ, ಪಶ್ಚಿಮ ಬಂಗಾಲ (ಆಗಸ್ಟ್ 1999)
1999 ರ ಆಗಸ್ಟ್ 2 ರಂದು ಪಶ್ಚಿಮ ಬಂಗಾಲದ ಗಾಯ್ಸಾಲ್ ಎಂಬ ದುರ್ಗಮ ಪ್ರದೇಶದಲ್ಲಿ ಸಿಗ್ನಲಿಂಗ್ ವೈಫಲ್ಯದಿಂದ ನಡೆದ ರೈಲು ಅಪಘಾತದಲ್ಲಿ ಕನಿಷ್ಠ 300 ಮಂದಿ ಸಾವನ್ನಪ್ಪಿದ್ದರು. ಗಾಯ್ಸಾಲ್ ಸ್ಟೇಷನ್‌ನಲ್ಲಿ ʻಬ್ರಹ್ಮಪುತ್ರ ಮೈಲ್ʼ ರೈಲಿಗೆ ಡೆಲ್ಲಿಯಿಂದ ಹೊರಟಿದ್ದ ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಹಳಿ ದುರಸ್ತಿಯಿಂದಾಗಿ 4 ಹಳಿಗಳ ಪೈಕಿ 3 ನ್ನು ಮುಚ್ಚಿದ್ದೇ ದುರಂತಕ್ಕೆ ಕಾರಣ.
ವೇಲುಗೊಂದ ರೈಲು ದುರಂತ, ಆಂಧ್ರ ಪ್ರದೇಶ (ಅಕ್ಟೋಬರ್ 2005)
2005 ರ ಅಕ್ಟೋಬರ್‌ನಲ್ಲಿ ಆಂಧ್ರ ಪ್ರದೇಶದ ವೇಲುಗೊಂದದಲ್ಲಿ ಮಳೆಯ ನೀರಿನಿಂದ ಮುಳುಗಿದ್ದ ಹಳಿಗಳ ಮೇಲೆ ರೈಲು ಸಂಚರಿಸಿದ ಪರಿಣಾಮ ದುರಂತ ಸಂಭವಿಸಿ ಕನಿಷ್ಠ 100 ಮಂದಿ ಮೃತಪಟ್ಟಿದ್ದರು.
ಫತೇಪುರ್, ಉತ್ತರ ಪ್ರದೇಶ (ಜುಲೈ 2011)
ಜುಲೈ 10, 2011 ರಂದು ಮಾಲ್ವಾನ್ ಬಳಿಯಲ್ಲಿ ಕೌರಾ-ಕಲ್ಕಾ ಮೈಲ್‌ನ ಸುಮಾರು 15 ಬೋಗಿಗಳು ಹಳಿತಪ್ಪಿ ಕನಿಷ್ಠ 70 ಮಂದಿ ಮೃತಪಟ್ಟಿದ್ದರು. ಅಪಘಾತದ ವೇಳೆ ಈ ರೈಲು ಹೌರಾದಿಂದ ಕಲ್ಕಾಗೆ ಸಂಚರಿಸುತ್ತಿತ್ತು.
ಅಮೃತ್‌ಸರ್ ದುರಂತ (ಅಕ್ಟೋಬರ್ 2018)
ದಸರಾ ಹಬ್ಬದ ವೇಳೆ ರಾವಣ ದಹನವನ್ನು ಕಾಣಲು ರೈಲು ಹಳಿಗಳ ಮೇಲೆ ನಿಂತಿದ್ದ ಜನರ ಮೇಲೆಯೇ ಪ್ಯಾಸೆಂಜರ್ ರೈಲು ಹರಿದಿದ್ದರಿಂದ ಕನಿಷ್ಠ 59 ಮಂದಿ ಮೃತರಾಗಿ 100 ಕ್ಕೂ ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ:
Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ