Advertisement

Team India’s Test Record; ಸೋಲನ್ನು ಮೀರಿಸಿದ ಗೆಲುವು

10:50 PM Sep 22, 2024 | Team Udayavani |

ಚೆನ್ನೈ: ಭಾರತ ತನ್ನ ಚೊಚ್ಚಲ ಟೆಸ್ಟ್‌ ಆಡಿದ್ದು 92 ವರ್ಷಗಳ ಹಿಂದೆ, 1932ರಲ್ಲಿ. ಇಂಗ್ಲೆಂಡ್‌ ಎದುರಿನ ಈ ಪಂದ್ಯ ಲಾರ್ಡ್ಸ್‌ನಲ್ಲಿ ನಡೆದಿತ್ತು. ನಾಯಕರಾಗಿದ್ದವರು ಕರ್ನಲ್‌ ಸಿ.ಕೆ. ನಾಯ್ಡು. ಈ ಪಂದ್ಯದಲ್ಲಿ ಭಾರತ 158 ರನ್ನುಗಳ ಸೋಲನುಭವಿಸಿತು. ಅಂದಿನಿಂದ ಭಾರತ ಹೆಚ್ಚೆಚ್ಚು ಸೋಲನ್ನೇ ಕಾಣುತ್ತ ಹೋಯಿತು. ಗೆಲುವಿಗೆ ಸೋಲನ್ನು ಮೀರಿ ನಿಲ್ಲಲು ಸಾಧ್ಯವಾಗಲೇ ಇಲ್ಲ.

Advertisement

ಇದೀಗ ಚೆನ್ನೈ ಗೆಲುವಿನೊಂದಿಗೆ ಭಾರತದ ಟೆಸ್ಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಗೆಲುವಿನ ಸಂಖ್ಯೆ ಸೋಲನ್ನು ಮೀರಿಸಿದೆ. ಭಾರತ ತನ್ನ 580 ಟೆಸ್ಟ್‌ಗಳಲ್ಲಿ ದಾಖಲಿಸಿದ 179ನೇ ಜಯ ಇದಾಗಿದೆ. ಸೋಲಿನ ಸಂಖ್ಯೆ 178.

ಸೋಲಿಗಿಂತ ಹೆಚ್ಚು ಗೆಲುವನ್ನು ದಾಖಲಿಸಿದ ಉಳಿದ ಟೆಸ್ಟ್‌ ರಾಷ್ಟ್ರಗ ಳೆಂದರೆ ಆಸ್ಟ್ರೇಲಿಯ (414 ಜಯ, 232 ಸೋಲು), ಇಂಗ್ಲೆಂಡ್‌ (397 ಜಯ, 325 ಸೋಲು), ದ. ಆಫ್ರಿಕಾ (179 ಜಯ, 161 ಸೋಲು), ಪಾಕಿ ಸ್ಥಾನ (148 ಜಯ, 144 ಸೋಲು).

ಭಾರತದ ಟೆಸ್ಟ್‌  ದಾಖಲೆ
ಪಂದ್ಯ: 580
ಜಯ: 179
ಸೋಲು: 178
ಡ್ರಾ: 222
ಟೈ: 01

ಅಗ್ರಸ್ಥಾನ ಕಾಯ್ದುಕೊಂಡ ಭಾರತ
ಈ ಜಯದೊಂದಿಗೆ ಭಾರತ 2023-25ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಭಾರತವೀಗ 86 ಅಂಕಗಳೊಂದಿಗೆ 71.67 ಗೆಲುವಿನ ಪ್ರತಿಶತ ದಾಖಲೆ (ಪಿಸಿಟಿ) ಹೊಂದಿದೆ. ಇದು 10 ಟೆಸ್ಟ್‌ಗಳಲ್ಲಿ ಭಾರತ ಸಾಧಿಸಿದ 7ನೇ ಗೆಲುವು. ಆದರೆ ಈ ಸೋಲಿನಿಂದ ಬಾಂಗ್ಲಾದೇಶ 6ನೇ ಸ್ಥಾನಕ್ಕೆ ಕುಸಿದಿದೆ (39.29). ಬಾಂಗ್ಲಾ ಈ ಅವಧಿಯ 7 ಟೆಸ್ಟ್‌ಗಳಲ್ಲಿ 4ನೇ ಸೋಲನುಭವಿಸಿತು. ಆಸ್ಟ್ರೇಲಿಯ 2ನೇ (62.50), ನ್ಯೂಜಿಲ್ಯಾಂಡ್‌ 3ನೇ (50.00) ಸ್ಥಾನದಲ್ಲಿದೆ. ಶ್ರೀಲಂಕಾ 4ನೇ ಸ್ಥಾನಿಯಾಗಿದೆ (42.86). ಶ್ರೀಲಂಕಾ-ನ್ಯೂಜಿಲ್ಯಾಂಡ್‌ ನಡುವಿನ ಗಾಲೆ ಟೆಸ್ಟ್‌ ಪಂದ್ಯದ ಬಳಿಕ ಈ ಯಾದಿಯಲ್ಲಿ ಪರಿವರ್ತನೆ ಸಂಭವಿಸುವ ಸಾಧ್ಯತೆ ಇದೆ.

Advertisement

ಕಾನ್ಪುರಕ್ಕೂ ವಿಜೇತ ತಂಡ
ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ಚೆನ್ನೈನ ಗೆಲುವಿನ ತಂಡವನ್ನೇ ಉಳಿಸಿಕೊಂಡಿದೆ. ಈ ಪಂದ್ಯ ಸೆ. 27ರಂದು ಆರಂಭವಾಗಲಿದೆ.

ಭಾರತ ತಂಡ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಸಫ‌ìರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಜಸ್‌ಪ್ರೀತ್‌ ಬುಮ್ರಾ, ಯಶ್‌ ದಯಾಳ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಬಾಂಗ್ಲಾ ವಿರುದ್ಧ ಅಜೇಯ
ಬಾಂಗ್ಲಾದೇಶದ ವಿರುದ್ಧ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿತು. 14 ಟೆಸ್ಟ್‌ಗಳಲ್ಲಿ 12ನೇ ಗೆಲುವು ಸಾಧಿಸಿತು. 2 ಟೆಸ್ಟ್‌ ಡ್ರಾಗೊಂಡಿವೆ.

 ವಾರ್ನ್ ಜತೆಗೆ ಅಶ್ವಿ‌ನ್‌
ಆರ್‌. ಅಶ್ವಿ‌ನ್‌ 37 ಸಲ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉಡಾಯಿಸಿ ಶೇನ್‌ ವಾರ್ನ್ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾದರು. ಮುತ್ತಯ್ಯ ಮುರಳೀಧರನ್‌ ಅಗ್ರಸ್ಥಾನದಲ್ಲಿದ್ದಾರೆ (67).

ಅತೀ ಹಿರಿಯ ಬೌಲರ್‌
ಆರ್‌. ಅಶ್ವಿ‌ನ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಕೆಡವಿದ ಭಾರತದ ಅತೀ ಹಿರಿಯ ಬೌಲರ್‌ (38 ವರ್ಷ, 2 ದಿನ). ಹಿಂದಿನ ದಾಖಲೆ ವಿನೂ ಮಂಕಡ್‌ ಹೆಸರಲ್ಲಿತ್ತು (37 ವರ್ಷ, 306 ದಿನ). ಅವರು 1955ರ ಪಾಕಿಸ್ಥಾನ ವಿರುದ್ಧದ ಪೇಶಾವರ ಟೆಸ್ಟ್‌ನಲ್ಲಿ ಈ ದಾಖಲೆಗೆ ಪಾತ್ರರಾಗಿದ್ದರು.

ಡಬಲ್‌ ಸಾಧಕ
ಅಶ್ವಿ‌ನ್‌ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ 5 ಪ್ಲಸ್‌ ವಿಕೆಟ್‌ಗಳ ಡಬಲ್‌ ಸಾಧಿಸಿದ ಹಿರಿಯ ಆಟಗಾರನೂ ಹೌದು. ಹಿಂದಿನ ಸಾಧಕ ಪಾಲಿ ಉಮ್ರಿಗರ್‌. ವೆಸ್ಟ್‌ ಇಂಡೀಸ್‌ ವಿರುದ್ಧದ 1962ರ ಪೋರ್ಟ್‌ ಆಫ್ ಸ್ಪೇನ್‌ ಟೆಸ್ಟ್‌ ಪಂದ್ಯದಲ್ಲಿ ಅವರು 172 ರನ್‌ ಬಾರಿಸುವ ಜತೆಗೆ 5 ವಿಕೆಟ್‌ ಉಡಾಯಿಸಿದ್ದರು. ಆಗ ಉಮ್ರಿಗರ್‌ ವಯಸ್ಸು 36 ವರ್ಷ, 7 ದಿನ.

 ಚೆನ್ನೈಯಲ್ಲಿ 2 ಸಲ…
ಅಶ್ವಿ‌ನ್‌ ಒಂದೇ ಅಂಗಳದಲ್ಲಿ ಆಡಲಾದ 2 ಟೆಸ್ಟ್‌ಗಳಲ್ಲಿ ಶತಕ ಹಾಗೂ 5 ಪ್ಲಸ್‌ ವಿಕೆಟ್‌ ಸಂಪಾದಿಸಿದ ವಿಶ್ವದ ಮೊದಲ ಕ್ರಿಕೆಟಿಗ (ಚೆನ್ನೈ). ಇಂಗ್ಲೆಂಡ್‌ ವಿರುದ್ಧದ 2021ರ ಚೆನ್ನೈ ಟೆಸ್ಟ್‌ ನಲ್ಲೂ ಅವರು ಈ ಸಾಧನೆಗೈದಿದ್ದರು.

 4ನೇ ಇನ್ನಿಂಗ್ಸ್‌ನಲ್ಲಿ…
ಅಶ್ವಿ‌ನ್‌ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ 7ನೇ ಸಲ 5 ಪ್ಲಸ್‌ ವಿಕೆಟ್‌ ಉರುಳಿಸಿ ವಾರ್ನ್ ಮತ್ತು ಮುರಳೀಧರನ್‌ ಅವರೊಂದಿಗೆ ಜಂಟಿ 2ನೇ ಸ್ಥಾನಿಯಾದರು. ರಂಗನ ಹೆರಾತ್‌ ಅಗ್ರಸ್ಥಾನದಲ್ಲಿದ್ದಾರೆ (12).

ಕುಂಬ್ಳೆಯನ್ನು ಮೀರಿಸಿದ ಅಶ್ವಿ‌ನ್‌
ಅಶ್ವಿ‌ನ್‌ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ 99 ವಿಕೆಟ್‌ ಉಡಾಯಿಸಿದ ಭಾರತದ ಬೌಲರ್‌ ಎನಿಸಿದರು. ಅನಿಲ್‌ ಕುಂಬ್ಳೆ 2ನೇ ಸ್ಥಾನಕ್ಕಿಳಿದರು (94 ವಿಕೆಟ್‌).

 ಬೋಥಂ ಬಳಿಕ ಜಡೇಜ
ರವೀಂದ್ರ ಜಡೇಜ ಟೆಸ್ಟ್‌ ಒಂದರಲ್ಲಿ 12 ಸಲ 50 ಪ್ಲಸ್‌ ರನ್‌ ಜತೆಗೆ 5ಕ್ಕೂ ಹೆಚ್ಚು ವಿಕೆಟ್‌ ಉರುಳಿಸಿದರು. ಈ ಸಾಧಕರ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. ಇಯಾನ್‌ ಬೋಥಂ ಅಗ್ರಸ್ಥಾನದಲ್ಲಿದ್ದಾರೆ (16).

ಶಕಿಬ್‌ ಹಿರಿಯ ಆಟಗಾರ
ಶಕಿಬ್‌ ಅಲ್‌ ಬಾಂಗ್ಲಾದೇಶದ ಪರ ಟೆಸ್ಟ್‌ ಆಡಿದ ಅತೀ ಹಿರಿಯ ಕ್ರಿಕೆಟಿಗನೆನಿಸಿದರು. ರವಿವಾರಕ್ಕೆ ಅವರು 37 ವರ್ಷ, 182 ದಿನ ಪೂರೈಸಿದರು. 2008ರಲ್ಲಿ ಎಡಗೈ ಸ್ಪಿನ್ನರ್‌ ಮೊಹಮ್ಮದ್‌ ರಫೀಕ್‌ 37 ವರ್ಷ, 180ನೇ ದಿನದಲ್ಲಿ ತಮ್ಮ ಕೊನೆಯ ಟೆಸ್ಟ್‌ ಆಡಿದ್ದು ಈವರೆಗಿನ ಬಾಂಗ್ಲಾ ದಾಖಲೆ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next