Advertisement

ವಿಕಸಿತ ಭಾರತದ ಕನಸು ಸಾಕಾರದತ್ತ ದಿಟ್ಟ ಹೆಜ್ಜೆ

12:10 AM Sep 16, 2024 | Team Udayavani |

ವಿಶ್ವ ಆರ್ಥಿಕ ಮಂದಗತಿಯ ನಡುವೆ ಭಾರತದ ಆರ್ಥಿಕತೆ ಇಡೀ ವಿಶ್ವಕ್ಕೆ ಆಶಾಕಿರಣವಾಗಿ ಗೋಚರಿಸಿದೆ. ಭಾರತದ ಆರ್ಥಿಕಾಭಿವೃದ್ಧಿ ವೇಗ ವಿಶ್ವದಲ್ಲೇ ನಂ. 1. ಭಾರತಕ್ಕೆ ಹೋಲಿಸಿದರೆ ವಿಶ್ವದ ಮಿಕ್ಕೆಲ್ಲ ದೇಶಗಳು ಆರ್ಥಿಕ ಪ್ರಗತಿಯಲ್ಲಿ ತುಂಬಾ ಹಿಂದಿವೆ.

Advertisement

2019ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿಯವರು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ಬೆಳೆಸುವ ಸಂಕಲ್ಪಕ್ಕೆ ಕರೆ ನೀಡಿ ಉತ್ತೇಜಿಸಿದರು. 2014ರಲ್ಲಿ ಭಾರತವು ವಿಶ್ವದಲ್ಲಿ 10ನೆಯ ದೊಡ್ಡ ಆರ್ಥಿಕತೆಯಾಗಿತ್ತು. ಆಗ ದೇಶದ ಜಿಡಿಪಿ 1.9 ಟ್ರಿಲಿಯನ್‌ ಡಾಲರ್‌ ಮಾತ್ರ. ತದನಂತರ ಕೊರೊನಾ ಮಹಾಮಾರಿಯು ಇಡೀ ವಿಶ್ವವನ್ನೇ ದಂಗು ಬಡಿಸಿತು. ಹಲವಾರು ಏಳುಬೀಳುಗಳು ಎದುರಾದರೂ ಸರಕಾರ ಆರ್ಥಿಕತೆಯನ್ನು ಮುನ್ನಡೆಸಲು ನಿರಂತರ ಶ್ರಮಿಸಿದುದರ ಫ‌ಲವಾಗಿ 2022ರಲ್ಲಿ ಬ್ರಿಟನ್‌ ಅನ್ನು ಭಾರತ ಹಿಂದಿಕ್ಕಿತು. ಸರಕಾರದ ಆರ್ಥಿಕ ನಿಲುವುಗಳು ಕೈಹಿಡಿದವು. ಪ್ರಸ್ತುತ ಭಾರತದ ಜಿಡಿಪಿ 3.9 ಟ್ರಿಲಿಯನ್‌ ಡಾಲರ್‌ ದಾಟಿದೆ. ವಿಶ್ವದಲ್ಲೇ ಮೂರನೆಯ ಅತೀದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಭಾರತೀಯ ಷೇರು ಮಾರುಕಟ್ಟೆಯು ವಿಶ್ವದ 5ನೆಯ ಅತೀ ದೊಡ್ಡ ವಿನಿಮಯ ಕೇಂದ್ರ. ಜಾಗತಿಕ ವಿದ್ಯಮಾನಗಳ ಸವಾಲುಗಳನ್ನು ಮೆಟ್ಟಿನಿಂತು ಜಗತ್ತಿನ 5ನೇ ಬಲಾಡ್ಯ ಆರ್ಥಿಕ ಶಕ್ತಿಯಾಗಿ ನಿಂತಿರುವುದು ಅಭೂತಪೂರ್ವ ಸಾಧನೆಯೇ ಸರಿ. ಹಣಕಾಸು ಸಚಿವಾಲಯದ ವರದಿ ಪ್ರಕಾರ ದೇಶದ ಜಿಡಿಪಿ ಮುಂದಿನ 3 ವರ್ಷಗಳಲ್ಲಿ 5 ಟ್ರಿಲಿಯನ್‌ ಡಾಲರ್‌, 2030ರ ವೇಳೆಗೆ 7 ಟ್ರಿಲಿಯನ್‌ ಡಾಲರ್‌ ತಲುಪುವ ನಿರೀಕ್ಷೆಯಿದೆ. ದೇಶದ ಆರ್ಥಿಕತೆಯ ಈ ವೇಗವು ವಿಕಸಿತ ಭಾರತದ ಕನಸಿನ ನಿರೀಕ್ಷೆಯನ್ನು ಜೀವಂತವಾಗಿರಿಸಿದೆ.

ಕೊರೊನೋತ್ತರ ದಿನಗಳಲ್ಲಿ ಜಾಗತಿಕ ಆರ್ಥಿಕತೆ ಅಸ್ಥಿರಗೊಂಡಿದೆ. ನಿಯಂತ್ರಣ ಮೀರಿ ಏರು ಹಾದಿಯಲ್ಲಿರುವ ಹಣದುಬ್ಬರ, ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳ ಸಹಿತ ಇನ್ನೂ ಹತ್ತು ಹಲವಾರು ಬಾಹ್ಯ ಮತ್ತು ಆಂತರಿಕ ಪರಿಣಾಮಗಳನ್ನು ತಡೆಗಟ್ಟಲು ಹಲವು ದೇಶಗಳು ಹರಸಾಹಸ ಪಡುತ್ತಿವೆ. ಜಾಗತಿಕ ಮಾರುಕಟ್ಟೆ ಯಲ್ಲಿ ಇನ್ನೂ ಪ್ರಕ್ಷುಬ್ಧತೆಯ ವಾತಾವರಣವಿದೆ. ಆದರೆ ಭಾರತವು ಹಲವಾರು ಆಘಾತಗಳ ಹೊರತಾಗಿಯೂ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಪ್ರಮುಖ ಜಾಗತಿಕ ಪ್ರತಿಸ್ವರ್ಧಿಗಳಿಗಿಂತಲೂ ವೇಗವಾಗಿ ಚೇತರಿಸಿಕೊಂಡಿರುವುದು ಗಮನಾರ್ಹ. ಈ ಚೇತರಿಕೆಗೆ ಭಾರತೀಯ ಆರ್ಥಿಕತೆಯಲ್ಲಿ ಅಂತರ್ಗತವಾಗಿರುವ “ದೇಶೀಯ ಶಕ್ತಿ’ ಕಾರಣವೆಂದು ಹೇಳಬಹುದು. ಜಾಗತಿಕ ಅನಿಶ್ಚಿತತೆಗಳ ನಡುವೆಯೂ ದೇಶೀಯ ಆರ್ಥಿಕತೆ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ಶಕ್ತಿಯನ್ನು ಹೊಂದಿದೆ ಎಂಬುದು ಸಾಬೀತಾಗಿದೆ.

ಜಾಗತೀಕರಣದ ಈ ದಿನಗಳಲ್ಲಿ ಜಾಗತಿಕ ವಿದ್ಯಮಾನಗಳಿಗನುಗುಣವಾಗಿ ದೇಶದ ಆರ್ಥಿಕತೆಯಲ್ಲಿ ಏರುಪೇರು ಇದ್ದದ್ದೇ. ಆರ್ಥಿಕತೆ ಮಾತ್ರವಲ್ಲ, ದೇಶದ ಆಂತರಿಕ ಭದ್ರತೆ, ಬಾಹ್ಯ ಬಾಂಧವ್ಯ ಇವ್ಯಾವುವೂ ಜಾಗತಿಕ ಆಗುಹೋಗುಗಳ ಪ್ರಭಾವದಿಂದ ಹೊರತಲ್ಲ. “ಯಾವ ದೇಶವೂ ನಮ್ಮ ಪಾಡಿಗೆ ನಾವಿರುತ್ತೇವೆ’ ಅನ್ನುವಂತಿಲ್ಲ. ಯಾವುದೇ ದೇಶದ ಸಂಕಷ್ಟ ದೂರದ ಇನ್ನಾವುದೋ ದೇಶದ ಮೇಲೂ ಪ್ರಭಾವ ಬೀರಬಲ್ಲದು. ದೇಶದಾಚೆಗಿನ ವಿದ್ಯಮಾನಗಳಷ್ಟೇ ಅಲ್ಲ, ದೇಶದೊಳಗಿನ ವಿದ್ಯಮಾನಗಳೂ ದೇಶಕ್ಕೆ ಸವಾಲಾಗಿ ಬಿಡುತ್ತವೆ.

ಪ್ರಸಕ್ತ ದೇಶವು ಸಾಧನೆಯ ಹಾದಿಯಲ್ಲಿ, ಇಡೀ ವಿಶ್ವದಲ್ಲಿ ಯಾಂತ್ರಿಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಮ್ಮಷ್ಟು ಬಳಸುವವರು ಯಾರೂ ಇಲ್ಲ ಎಂಬುದನ್ನು ಸಾಬೀತು ಪಡಿಸಿರುವ “ತರುಣ ದೇಶ’ವೆಂಬ ಖ್ಯಾತಿ ಗಳಿಸಿದೆ. ಈ ತಾರುಣ್ಯವನ್ನು ಬಂಡವಾಳ ಮಾಡಿಕೊಂಡು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡರೆ ಇನ್ನು 25 ವರ್ಷದಲ್ಲಿ ವಿಶ್ವದ ನಂ. 1 ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಅವಕಾಶಗಳು ನಮ್ಮೆದುರಿಗಿವೆ. ದೇಶದ 2024ರ ಅಂದಾಜು ಜನಸಂಖ್ಯೆ 142 ಕೋಟಿಯಲ್ಲಿ ಅರ್ಧದಷ್ಟು ಜನರ ವಯಸ್ಸು 29ರ ಕೆಳಗಿದೆ. 2047ರ ವೇಳೆಗೆ ಶೇ. 100ರ ಸಾಕ್ಷರತಾ ರಾಷ್ಟ್ರವಾಗಲಿದೆ. ಇವು ದೇಶದ ಆರ್ಥಿಕತೆಯನ್ನು ವೃದ್ಧಿಸುವ ಆಯಾಮಗಳಾಗಿವೆ. 2047 ಕ್ಕೆ ನಮ್ಮ ಆರ್ಥಿಕತೆಯು 30 ಟ್ರಿಲಿಯನ್‌ ಡಾಲರ್‌ ಆಗಲಿದೆಯೆಂಬ ಅಂದಾಜಿದೆ. ಆಗ ಪ್ರತೀ ವ್ಯಕ್ತಿಯ ತಲಾ ಆದಾಯವು ರೂ. 15 ಲಕ್ಷದಷ್ಟಾಗುತ್ತದೆ. ಈಗಿನ ಸರಾಸರಿ ತಲಾ ಆದಾಯ ರೂ. 2 ಲಕ್ಷ ಇದೆ. ಆರ್ಥಿಕ ಬೆಳವಣಿಗೆಯಾದರೆ ಎಲ್ಲವೂ ಆದಂತೆ ಎನ್ನುವುದು “ಅರ್ಧ ಸತ್ಯ’ ಅಷ್ಟೇ. ಅದೇ ಸಂದರ್ಭದಲ್ಲಿ ಜನರ ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಆಯಾಮಗಳಲ್ಲಿ ಅಭಿವೃದ್ಧಿ ಹಾಸು ಹೊಕ್ಕಾಗಬೇಕು. ಸಮುದಾಯಗಳ ಆರೋಗ್ಯ ಉನ್ನತ ಮಟ್ಟದಲ್ಲಿರಬೇಕು. ಪ್ರಜೆಗಳ ನೆಮ್ಮದಿಯ ಸೂಚ್ಯಂಕ ಹೆಚ್ಚಬೇಕು.

Advertisement

ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಎಲ್ಲರಿಗೂ ಸುಧಾರಿತ ವೈದ್ಯಕೀಯ ಸೇವೆ ದೊರೆಯಬೇಕು. ಆಹಾರ ಬೆಳೆಯುವ ರೈತ, ದೇಶ ಕಾಯುವ ಸೈನಿಕ, ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕ, ದೇಶದ ಉತ್ಪನ್ನ ರೂಪಿಸುವ ಶ್ರಮಿಕ ವರ್ಗಕ್ಕೆ ಆತ್ಮ ಗೌರವ ಮತ್ತು ಗಳಿಕೆಯ ನಿಟ್ಟಿನಲ್ಲಿ ಸಮೂಹ ಪ್ರಜ್ಞೆ ಜಾಗೃತಗೊಳ್ಳಬೇಕು. ದೇಶದ ಆರ್ಥಿಕತೆಯಲ್ಲಿನ ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯನ್ನು ಕಡಿಮೆಗೊಳಿಸಬೇಕು. ಇದು ದೇಶದ ವಿತ್ತೀಯ ನಿರ್ವಹಣೆಯಲ್ಲಿ ಸಾಲ ಮರುಪಾವತಿಯ ಸಾಮರ್ಥ್ಯವನ್ನು ಕಡಿಮೆ ಗೊಳಿಸುತ್ತದೆ. ದೇಶದ ಹಣಕಾಸು ಕ್ಷೇತ್ರವನ್ನು ಬಲಿಷ್ಠ, ಕ್ರಿಯಾಶೀಲ, ಸ್ಥಿರವಾದ ವಿತ್ತೀಯ ನೀತಿಯ ವಾತಾವರಣ ನಿರ್ಮಾಣ ಹಾಗೂ ಗ್ರಾಹಕ ಕೇಂದ್ರೀಕೃತವನ್ನಾಗಿ ಮಾಡಲು ಆರ್‌ಬಿಐ ನಿರಂತರ ವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ಸಂಕಷ್ಟ, ಯುದ್ಧಗಳ ಪರಿಣಾಮ ನೀಗಿಸುವಲ್ಲಿ ಹಾಗೂ ಹಣದುಬ್ಬರ ನಿರ್ವಹಣೆ ಮತ್ತು ಆರ್ಥಿಕಾಭಿವೃದ್ಧಿಯಲ್ಲಿ ಆರ್‌ಬಿಐ ತೆಗೆದುಕೊಂಡ ಪ್ರತೀ ಹೆಜ್ಜೆಗಳೂ ಅನನ್ಯ. ತನ್ಮೂಲಕ ಆರ್‌ಬಿಐ, ಆರ್ಥಿಕ ನಿರ್ವಹಣೆಯಲ್ಲಿ ವಿಶ್ವದಲ್ಲಿಯೇ ಸಮರ್ಥ ಕೇಂದ್ರ ಬ್ಯಾಂಕ್‌ ಎನಿಸಿಕೊಂಡಿದೆ.

ಕಳೆದ ದಶಕದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಗೆ ವೇಗ ಸಿಕ್ಕಿದುದರಿಂದ ಒಟ್ಟಾರೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣವಾಗಿದೆ. ಬ್ಯಾಂಕ್‌ಗಳ ಲಾಭ ಗಳಿಕೆಯು ಉನ್ನತ ಮಟ್ಟದಲ್ಲಿದೆ.

ಜಿಎಸ್‌ಟಿ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದೆ. ಇದೀಗ ಚಿಲ್ಲರೆ ಹಣದುಬ್ಬರದೊಂದಿಗೆ ಸಗಟು ಹಣದುಬ್ಬರವೂ ಇಳಿಮುಖವಾಗಿರುವುದರಿಂದ ಬಹುದಿನಗಳ ಸಮಸ್ಯೆಯಾದ ಹಣದುಬ್ಬರ ಪರಿಹಾರವಾಗುವುದರಲ್ಲಿದೆ. ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆಯಿರುವುದರಿಂದ ಭಾರತದಲ್ಲಿ ಬಂಡವಾಳದ ಒಳಹರಿವು ಹೆಚ್ಚುವ ನಿರೀಕ್ಷೆ ಇದೆ. ದೇಶದ ವಿನಿಮಯ ಮೀಸಲು ಸಂಗ್ರಹವು ದಾಖಲೆಯ 57.15 ಲಕ್ಷ ಕೋಟಿ ಡಾಲರ್‌ಗಳಷ್ಟಾಗಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇದು ಆರ್ಥಿಕ ಸ್ಥಿರತೆ ಮತ್ತು ದೃಢತೆಗೆ ಮತ್ತಷ್ಟು ಆಧಾರವಾಗಲಿದೆ.

ಸವಾಲುಗಳು: ಆರ್ಥಿಕಾಭಿವೃದ್ಧಿಯ ಬಲವರ್ಧನೆಗೆ ರೈತರು ಮತ್ತು ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಒತ್ತು ಕೊಡಬೇಕು. ನಮ್ಮದು ವಿಕಸಿತ ಭಾರತವಾಗಲು ಚೀನದ ಸಾಧನೆಯನ್ನು ಮೀರಿಸಲೇ ಬೇಕು.

ಆರ್ಥಿಕತೆಯನ್ನು ತ್ವರಿತಗತಿಯಲ್ಲಿ ವೃದ್ಧಿಸಬಲ್ಲ ಮತ್ತು ವಿಕಸಿತ ಭಾರತದ ಪರಿಕಲ್ಪನೆಯೊಂದಿಗೆ ಬಜೆಟ್‌ನಲ್ಲಿ ಗುರುತಿಸಲಾದ 9 ಆದ್ಯತೆಗಳಾದ ಕೃಷಿಯಲ್ಲಿನ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಶಕ್ತಿ ಮತ್ತು ಭದ್ರತೆ, ಮೂಲಸೌಕರ್ಯ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಮುಂದಿನ ಪೀಳಿಗೆಯ ಸುಧಾರಣೆಗಳು ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳ್ಳಬೇಕು. ಬ್ಯಾಂಕ್‌ಗಳಲ್ಲಿ ರೈಟ್‌ ಆಪ್‌ ಕಡಿಮೆಗೊಳಿಸಬೇಕು ಮತ್ತು ಅಂತಹ ಸಾಲಗಳ ಅಸಲು ಬಡ್ಡಿಯನ್ನು ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಬೇಕು.

ಸರಕಾರದ ನಿರೀಕ್ಷಿತ ಉದ್ದೇಶ ಈಡೇರಿ, ಗುರಿ ತಲುಪುವ ಜತೆಯಲ್ಲಿ ತಂತ್ರಜ್ಞಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದದ್ದೇ ಆದರೆ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ವಿಕಸಿತ ಭಾರತದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.

-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next