ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಸೆಪ್ಟೆಂಬರ್ ತಿಂಗಳ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ. ಪುರುಷರ ವಿಭಾಗದಲ್ಲಿ ಭಾರತದ ಇಬ್ಬರು ಆಟಗಾರರು ಈ ಪಟ್ಟಿಯಲ್ಲಿ ಸ್ಪರ್ಧೆಯಲ್ಲಿದ್ದಾರೆ. ಅವರೆಂದರೆ ಶುಭಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್. ಪಟ್ಟಿಯಲ್ಲಿರುವ ಮತ್ತೋರ್ವ ಆಟಗಾರ ಇಂಗ್ಲೆಂಡ್ ನ ಡೇವಿಡ್ ಮಲಾನ್.
ಪ್ರಸ್ತುತ ಚೆನ್ನೈನಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿರುವ ಶುಭಮನ್ ಗಿಲ್, ಏಷ್ಯಾ ಕಪ್ ನಲ್ಲಿ ವಿಶೇಷವಾಗಿ ಶ್ರೀಲಂಕಾದಲ್ಲಿ ನಡೆದ ಪಂದ್ಯಾವಳಿಯ ಸೂಪರ್ 4 ಹಂತದಲ್ಲಿ ಅಪ್ರತಿಮ ಫಾರ್ಮ್‌ನಲ್ಲಿದ್ದರು.
ಮೊಹಮ್ಮದ್ ಸಿರಾಜ್ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಫೈನಲ್ ನಲ್ಲಿ 5 ವಿಕೆಟ್ ಗಳನ್ನು ಕೀಳುವ ಮೂಲಕ ಸಂಚಲನ ಮೂಡಿಸಿದ್ದರು. ಈ ಮೂಲಕ ಬೌಲರ್ ಗಳ ಏಕದಿನ ರ್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನಕ್ಕೆ ಏರಿದರು. ಕೊಲಂಬೊದಲ್ಲಿ ಸಿರಾಜ್ 6 ವಿಕೆಟ್ ದಾಳಿಯ ಕಾರಣದಿಂದ ಶ್ರೀಲಂಕಾ ಕೇವಲ 50 ರನ್ ಗಳಿಗೆ ಆಲೌಟ್ ಆಗುತ್ತಿತ್ತು.
ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ ಅವರು ವಿಶ್ವಕಪ್ ಗೆ ಮೊದಲು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸರಣಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ:BWF ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದ ಚಿರಾಗ್ ಶೆಟ್ಟಿ – ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ
ವನಿತೆಯರ ವಿಭಾಗದಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟ್ಟಪಟ್ಟು, ದಕ್ಷಿಣ ಆಫ್ರಿಕಾದ ನದಿನೆ ಡಿ ಕ್ಲರ್ಕ್ ಮತ್ತು ಅದೇ ದೇಶದ ಲಾರಾ ವೊಲ್ವಾರ್ಡ್ಟ್ ಸ್ಥಾನ ಪಡೆದಿದ್ದಾರೆ. ಅಂತಿಮವಾಗಿ ಯಾರು ಪ್ರಶಸ್ತಿ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ.