ಜೊಹಾನ್ಸ್‌ಬರ್ಗ್:ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗ ಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಮಾತುಕತೆಯಲ್ಲೂ ಚೀನಾ ತನ್ನ ವಕ್ರಬುದ್ಧಿ ತೋರಿಸಿದೆ.
ಭಾರತದ ಕೋರಿಕೆಯ ಮೇರೆಗೆ ಈ ಮಾತುಕತೆ ನಡೆದಿತ್ತು ಎಂದು ಚೀನಾ ಹೇಳಿಕೊಂಡಿದೆ. ಇದಕ್ಕೆ ಗುರುವಾರ ಖಡಕ್ ಪ್ರತಿಕ್ರಿಯೆ ನೀಡಿರುವ ಭಾರತ, “ದ್ವಿಪಕ್ಷೀಯ ಮಾತುಕತೆಗೆ ಕೋರಿಕೆ ಸಲ್ಲಿಸಿದ್ದೇ ಚೀನಾ. ನಾವು ಆ ಕೋರಿಕೆಗೆ ಇನ್ನೂ ಒಪ್ಪಿಗೆಯನ್ನೇ ನೀಡಿಲ್ಲ’ ಎಂದು ಹೇಳಿದೆ.
ಉಭಯ ನಾಯಕರು ಬುಧವಾರ ಶೃಂಗದ ನೇಪಥ್ಯದಲ್ಲಿ ಅನೌಪಚಾರಿಕವಾಗಿ ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದರು. ಈ ಮಾತುಕತೆಯ ಕುರಿತು ವಿವರ ನೀಡಿದ್ದ ಚೀನಾ ವಿದೇಶಾಂಗ ಸಚಿವಾಲಯ, “ಬ್ರಿಕ್ಸ್ ಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ’ ಎಂದು ಹೇಳಿತ್ತು. ಈ ವಾದವನ್ನು ಭಾರತ ತಳ್ಳಿಹಾಕಿದ್ದು, ಕೋರಿಕೆ ಸಲ್ಲಿಸಿದ್ದ ಚೀನಾವೇ ಹೊರತು ಭಾರತವಲ್ಲ ಎಂದು ಸ್ಪಷ್ಟಪಡಿಸಿದೆ.
ವಿವಾದ ತ್ವರಿತ ಪರಿಹಾರಕ್ಕೆ ಒಪ್ಪಿಗೆ:
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಸೇರಿದಂತೆ ಭಾರತ-ಚೀನಾ ಗಡಿಯುದ್ದಕ್ಕೂ ಪರಿಹಾರವಾಗದೇ ಉಳಿದಿರುವ ವಿವಾದಗಳನ್ನು ತ್ವರಿತವಾಗಿ ಪರಿಹರಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದರು. ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳ ಅಧಿಕಾರಿಗಳಿಗೆ ಸೂಚಿಸಲು ಉಭಯ ನಾಯಕರು ಒಪ್ಪಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ತಿಳಿಸಿದ್ದಾರೆ.
ಇನ್ನೊಂದೆಡೆ, ಮೋದಿ ಹಾಗೂ ಜಿನ್‌ಪಿಂಗ್ ಅವರು ಭಾರತ-ಚೀನಾ ಸಂಬಂಧ ಹಾಗೂ ಉಭಯ ದೇಶಗಳ ಹಿತಾಸಕ್ತಿಗಳಿಗೆ ಸಂಬಂಧಿಸಿ ವಿಸ್ತೃತ ಮಾತುಕತೆ ನಡೆಸಿದ್ದಾರೆ ಎಂದು ಚೀನಾದ ಪ್ರಕಟಣೆ ತಿಳಿಸಿದೆ. ಅಲ್ಲದೇ, ಭಾರತ ಮತ್ತು ಚೀನಾ ಬಾಂಧವ್ಯ ವೃದ್ಧಿಯು ಈ ಪ್ರದೇಶದ ಹಾಗೂ ಜಗತ್ತಿನ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಜಿನ್‌ಪಿಂಗ್ ಅಭಿಪ್ರಾಯಪಟ್ಟಿದ್ದಾರೆ ಎಂದೂ ಹೇಳಿದೆ.