ನವದೆಹಲಿ:ಭಾರತ ತಾಂತ್ರಿಕವಾಗಿ ಆರ್ಥಿಕ ಹಿಂಜರಿತದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಆರ್ಥಿಕ ತಜ್ಞ ತಂಡ ಹೇಳಿದ್ದ ಎರಡು ವಾರಗಳ ನಂತರ ಇದೀಗ ಶುಕ್ರವಾರ(ನವೆಂಬರ್ 27, 2020) ಬಿಡುಗಡೆಗೊಂಡಿರುವ ಜಿಡಿಪಿ ಅಂಕಿಅಂಶ ಈ ಮಾತನ್ನು ಪುಷ್ಟೀಕರಿಸಿದೆ. 2020-21ನೇ ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಶೇ.7.5ಕ್ಕೆ ಕುಸಿತ ಕಂಡಿದೆ.
ತಾಂತ್ರಿಕವಾಗಿ ದೇಶದ ಜಿಡಿಪಿ ದರವು ಸತತ ಎರಡು ತ್ರೈಮಾಸಿಕದಲ್ಲಿ ಕುಸಿತ ಕಂಡರೆ ದೇಶ ಆರ್ಥಿಕ ಹಿಂಜರಿತ ಕಾಣಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ದರ ಶೇ.23.9ಕ್ಕೆ ಇಳಿಕೆಯಾಗಿತ್ತು.
ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.7.5ಕ್ಕೆ ಕುಸಿದಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶದಲ್ಲಿ ತಿಳಿಸಿದೆ.
ಜಿಡಿಪಿಯ ಪ್ರಸ್ತುತ ಮೌಲ್ಯ 47.22 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.8.2ರಷ್ಟಿರಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದರು.
ಇದನ್ನೂ ಓದಿ:ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು
2ನೇ ತ್ರೈಮಾಸಿಕದ ಜಿಡಿಪಿ ಅಂಕಿಅಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್, ನಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಕೋವಿಡ್ 19 ಸೋಂಕು ಭಾರತಕ್ಕೆ ಕಾಲಿಟ್ಟಿದ್ದು 2020ರ ಮಾರ್ಚ್ ನಲ್ಲಿ ಹೀಗಾಗಿ ಒಂದನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಮೈನಸ್ 23.9 ಇಳಿಕೆಯಾಗಿತ್ತು ಎಂದು ತಿಳಿಸಿದ್ದಾರೆ.