ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನ ಬ್ಯಾಡ್ಮಿಂಟನ್ ಕೂಟ ಸಿಂಗಲ್ಸ್ ನಲ್ಲಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಮಹಿಳೆಯರ ಸಿಂಗಲ್ಸ್ ನಂತೆ ಪುರುಷರ ಸಿಂಗಲ್ಸ್ ನಲ್ಲೂ ಭಾರತ ಚಿನ್ನ ಗೆದ್ದುಕೊಂಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಜಯ ಸಾಧಿಸಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಎನ್‌ಜಿ ಟ್ಜೆ ಯೋಂಗ್ ಅವರನ್ನು 19-21 21-9 21-16 ಸೆಟ್‌ಗಳಿಂದ ಸೋಲಿಸಿ ಪುರುಷರ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದರು.
ಈ ಗೆಲುವಿನೊಂದಿಗೆ ಭಾರತ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದುವರೆಗೆ 20ನೇ ಚಿನ್ನದ ಪದಕ ಪಡೆಯಿತು.
ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಲಕ್ಷ್ಯ ಸೇನ್ ನಂತರ ಅದ್ಯಭುತ ಕಮ್ ಬ್ಯಾಕ್ ಮಾಡಿದರು. ಮುಂದಿನೆರಡು ಸೆಟ್ ಗಳಲ್ಲಿ ಮಲೇಷ್ಯಾ ಆಟಗಾರನ ತಪ್ಪುಗಳನ್ನು ಬಳಸಿದ ಸೇನ್ ಸವಾರಿ ಮಾಡಿದರು. ಈ ಮೂಲಕ ಚೊಚ್ಚಲ ಕಾಮನ್ವೆಲ್ತ್ ಪದಕ ಪಡೆದರು.
ವಿಶ್ವದ 10ನೇ ರ್‍ಯಾಂಕಿನ ಲಕ್ಷ್ಯ ಸೇನ್ ಸಿಂಗಾಪುರದ ಜಿಯಾ ಹೆಂಗ್ ತೇಹ್ ಅವರನ್ನು 21-10, 18-21, 21-16 ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಫೈನಲಿಗೇರಿದ್ದರು.