Advertisement

ರುಸ್ತುಂ-2 ಡ್ರೋನ್‌ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

12:23 AM Oct 11, 2020 | mahesh |

ನಾಯಕನಹಟ್ಟಿ: ವಾಯುಪಡೆಗೆ ಶಕ್ತಿ ತುಂಬುವ ರುಸ್ತುಂ-2 ಡ್ರೋನ್‌ನ ಪರೀಕ್ಷಾರ್ಥ ಪ್ರಯೋಗವು ಶುಕ್ರವಾರ ಇಲ್ಲಿನ ಡಿಆರ್‌ಡಿಒ ಪ್ರದೇಶದ ಎಟಿಆರ್‌(ಏರೋನಾಟಿಕಲ್‌ ಟೆಸ್ಟ್‌ ರೇಂಜ್‌)ನಲ್ಲಿ ಯಶಸ್ವಿಯಾಗಿದೆ. ಚಾಲಕ ರಹಿತ ಈ ಯುದ್ಧ ಬಳಕೆಯ ಡ್ರೋನ್‌ ಸತತ 8 ಗಂಟೆಗಳ ಕಾಲ ಯಶಸ್ವಿ ಹಾರಾಟ ದಾಖಲಿಸಿದೆ. ನಾಯಕನಹಟ್ಟಿಯಿಂದ 8 ಕಿ.ಮೀ. ದೂರದಲ್ಲಿರುವ ದೇಶದ ಏಕೈಕ ಮಾನವ ರಹಿತ ವಿಮಾನ (ಯುಎವಿ) ಪರೀûಾ ಕೇಂದ್ರದಲ್ಲಿ ರುಸ್ತುಂ-1ರ ಪರೀಕ್ಷೆ ಯಶಸ್ವಿಯಾಗಿತ್ತು. ಶುಕ್ರವಾರ ಡಿಆರ್‌ಡಿಒ (ರಕ್ಷಣ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ನೆಲೆಯಿಂದ ಹೊರಟ ರುಸ್ತುಂ-2 ವಿಮಾನ ಇಲ್ಲಿನ ವೈಮಾನಿಕ ಕೇಂದ್ರದಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ್ದು ವಿಶೇಷವಾಗಿದೆ.

Advertisement

ಬೆಳಗ್ಗೆ 6:30ಕ್ಕೆ ಹೊರಟ ಡ್ರೋನ್‌ ಮಧ್ಯಾಹ್ನ 2:30ಕ್ಕೆ ನೆಲೆಗೆ ವಾಪಸಾಗಿದೆ. ಎಂಟು ಗಂಟೆಗಳ ಹಾರಾಟದ ಬಳಿಕವೂ ಒಂದು ಗಂಟೆಗೆ ಸಾಲುವಷ್ಟು ಇಂಧನ ಉಳಿದಿತ್ತು. ಈಗಾಗಲೇ ಸಿದ್ಧಗೊಳ್ಳುತ್ತಿರುವ ಮುಂದಿನ ಮಾದರಿಯ ರುಸ್ತುಂ-2 ಡ್ರೋನ್‌ಗಳು ನಿರಂತರ 18 ಗಂಟೆ ಹಾಗೂ 26 ಸಾವಿರ ಅಡಿ ಎತ್ತರವನ್ನು ತಲುಪುವ ಗುರಿ ಹೊಂದಲಾಗಿದೆ. ಈ ಗುರಿಯನ್ನು ತಲುಪಿದ ಬಳಿಕ ನಿರಂತರ ಪರೀಕ್ಷೆಗಳ ಬಳಿಕ ವಾಯುಸೇನೆ ಹಾಗೂ ನೌಕಾ ಸೇನೆಯ ಬತ್ತಳಿಕೆಗೆ ಸೇರಲಿವೆ. ವರ್ಷಾಂತ್ಯದ ವೇಳೆಗೆ ಈ ಸಾಧನೆ ಮಾಡುವ ಗುರಿಯನ್ನು ಡಿಆರ್‌ಡಿಒ ಹೊಂದಿದೆ.

ಏನಿದು ರುಸ್ತುಂ-2?
ರುಸ್ತುಂ-2 ಎಲೆಕ್ಟ್ರಾನಿಕ್‌ ಬುದ್ಧಿವಂತಿಕೆ, ವಾಯು ನೆಲೆಯಿಂದ ನಿರಂತರ ಸಂಪರ್ಕ ಹೊಂದಿ ಎಲ್ಲ ರೀತಿಯ ಸಂದೇಶಗಳನ್ನು ನಿರಂತರವಾಗಿ ಕಳಿಸುವ ಕ್ಷಮತೆ ಹೊಂದಿದೆ. ನಾನಾ ರೀತಿಯ ಶಸ್ತ್ರಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಇದಕ್ಕಿದೆ. ಇಸ್ರೇಲ್‌ ದೇಶದ ಹೀರಾನ್‌ ಡ್ರೋನ್‌ ಕಾರ್ಯಕ್ಷಮತೆಯನ್ನು ರುಸ್ತುಂ-2 ಹೊಂದಲಿದೆ. ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾಗಿರುವ ಡ್ರೋನ್‌ ದೇಶದ ಹೆಮ್ಮೆಯ ಮಾನವ ರಹಿತ ವಿಮಾನವಾಗಿದೆ. ಹೀಗಾಗಿ ಯುದ್ಧ ಭೂಮಿಯಲ್ಲಿ ದೇಶದ ಯಾವುದೇ ಸೈನಿಕರನ್ನು ಬಲಿ ಕೊಡದೆ ಮಾನವ ರಹಿತವಾಗಿ ಡ್ರೋನ್‌ ಬಳಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಭಾರತೀಯ ವಾಯುಸೇನೆ ಇದೇ ಮಾದರಿಯ ಇಸ್ರೇಲ್‌ ನಿರ್ಮಿತ ಡ್ರೋನ್‌ಗಳನ್ನು ಬಳಸುತ್ತಿದೆ. ರುಸ್ತುಂ-2 ಪ್ರಮುಖ ಹಂತ ತಲುಪಿರುವುದಕ್ಕೆ ಇಲ್ಲಿನ ವಾಯುನೆಲೆಯ ಅ ಧಿಕಾರಿಗಳು ಹಾಗೂ ಸಿಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ವಿಫಲವಾಗಿತ್ತು
2019ರ ಸೆ. 17ರಂದು ರುಸ್ತುಂ-2 ಪ್ರಾಯೋಗಿಕ ಹಾರಾಟ ನಡೆಸುವ ಸಂದರ್ಭ ಚಳ್ಳಕೆರೆ ಸಮೀಪದ ಜೋಡಿ ಚಿನ್ನೇನಹಳ್ಳಿ ಗ್ರಾಮದ ತೋಟವೊಂದರಲ್ಲಿ ಪತನ ಹೊಂದಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಕಹಿ ನೆನಪಿನ ಹಿನ್ನೆಲೆಯಲ್ಲಿ ರುಸ್ತುಂ-2 ಪ್ರಯೋಗ ವಿಳಂಬಗೊಂಡಿತ್ತು. ಆದರೆ ಈಗ ರುಸ್ತುಂ-2 ಯಶಸ್ವಿ ಹಾರಾಟ ನಡೆಸಿದ್ದು ಸಂಸ್ಥೆಯ ಸಿಬಂದಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next