Advertisement

ಸೂರತ್ ನಲ್ಲಿ ನಿರ್ಮಾಣವಾಗಿದೆ ದೇಶದ ಮೊದಲ ‘ಉಕ್ಕಿನ ರಸ್ತೆ’

01:08 PM Mar 27, 2022 | Team Udayavani |

ಹೊಸದಿಲ್ಲಿ: ಪ್ರತಿ ವರ್ಷ ದೇಶಾದ್ಯಂತ ವಿವಿಧ ಸ್ಥಾವರಗಳು ಉತ್ಪಾದಿಸುವ ಹತ್ತೊಂಬತ್ತು ದಶಲಕ್ಷ ಟನ್‌ ಗಳಷ್ಟು ಉಕ್ಕಿನ ತ್ಯಾಜ್ಯವು ಸಾಮಾನ್ಯವಾಗಿ ಭೂಮಿಯಡಿ ಸೇರುತ್ತದೆ. ಆದರೆ ಶೀಘ್ರದಲ್ಲೇ ಇವು ರಸ್ತೆಗಳ ನಿರ್ಮಾಣಕ್ಕೆ ಬಹುಮೂಲ್ಯ ಸಂಪನ್ಮೂಲವಾಗಬಹುದು. ಇಂತಹ ಪ್ರಯೋಗವೊಂದು ಗುಜರಾತ್ ರಾಜ್ಯದಲ್ಲಿ ನಡೆದಿದೆ.

Advertisement

ಸಂಶೋಧನೆಯ ಭಾಗವಾಗಿ ಮೊದಲ ಯೋಜನೆಯಡಿಯಲ್ಲಿ, ಗುಜರಾತ್‌ನ ಸೂರತ್ ನಗರದಲ್ಲಿ ಹಜಿರಾ ಕೈಗಾರಿಕಾ ಪ್ರದೇಶದಲ್ಲಿ ಉಕ್ಕಿನ ತ್ಯಾಜ್ಯದಿಂದ ಮಾಡಿದ ರಸ್ತೆಯನ್ನು ನಿರ್ಮಿಸಲಾಗಿದೆ.

ಈ ಯೋಜನೆಯನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ಉಕ್ಕು ಮತ್ತು ನೀತಿ ಆಯೋಗದ ಸಹಾಯದಿಂದ ನಿರ್ಮಿಸಲಾಗಿದೆ.

ಪ್ರಾಯೋಗಿಕ ಯೋಜನೆಯ ರಸ್ತೆಯು 1 ಕಿಲೋಮೀಟರ್ ಉದ್ದ ಮತ್ತು ಆರು ಲೇನ್‌ ಗಳನ್ನು ಹೊಂದಿದೆ. ಸಿಎಸ್ ಆರ್ ಐ ಪ್ರಕಾರ ರಸ್ತೆಯ ದಪ್ಪವೂ ಶೇ.30ರಷ್ಟು ಕಡಿಮೆಯಾಗಿದೆ. ಈ ಹೊಸ ವಿಧಾನವು ಮಳೆಗಾಲದಲ್ಲಿ ಉಂಟಾಗುವ ಯಾವುದೇ ಹಾನಿಯನ್ನು ತಡೆಯಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ:ಮಂಗಳೂರು ಕಂಬಳ: ಶಾಸಕ ಭರತ್ ಶೆಟ್ಟಿಯವರ ಕೋಣಗಳಿಗೆ ಪ್ರಥಮ ಬಹುಮಾನ

Advertisement

“ಗುಜರಾತ್‌ನ ಹಜಿರಾ ಬಂದರಿನಲ್ಲಿರುವ ಈ ಒಂದು ಕಿಲೋ ಮೀಟರ್ ಉದ್ದದ ರಸ್ತೆಯು ಹಲವಾರು ಟನ್ ತೂಕದ ಟ್ರಕ್‌ ಗಳ ಸಂಚಾರದಿಂದಾಗಿ ಕೆಟ್ಟ ಸ್ಥಿತಿಯಲ್ಲಿತ್ತು. ಆದರೆ ಒಂದು ಪ್ರಯೋಗದ ಅಡಿಯಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಉಕ್ಕಿನ ತ್ಯಾಜ್ಯದಿಂದ ಮಾಡಲಾಗಿದೆ, ಈಗ 1,000 ಗಳಿಗಿಂತ ಹೆಚ್ಚು ಟ್ರಕ್‌ ಗಳು, ಪ್ರತಿದಿನ 18 ರಿಂದ 30 ಟನ್‌ಗಳಷ್ಟು ತೂಕದೊಂದಿಗೆ ಸಾಗುತ್ತಿವೆ, ಆದರೆ ರಸ್ತೆಯು ಹಾಗೆಯೇ ಉಳಿದಿದೆ” ಎಂದು ಸಿಆರ್‌ಆರ್‌ಐ ಪ್ರಧಾನ ವಿಜ್ಞಾನಿ ಸತೀಶ್ ಪಾಂಡೆ ಹೇಳಿದ್ದಾರೆ.

ಈ ಪ್ರಯೋಗದಿಂದ, ಹೆದ್ದಾರಿಗಳು ಮತ್ತು ಇತರ ರಸ್ತೆಗಳು ಬಲಗೊಳ್ಳಬಹುದು ಮತ್ತು ವೆಚ್ಚವು ಸುಮಾರು 30 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎಂದು ಪಾಂಡೆ ಹೇಳಿದರು.

ಭಾರತದಾದ್ಯಂತ ಉಕ್ಕಿನ ಸ್ಥಾವರಗಳು ಪ್ರತಿ ವರ್ಷ 19 ಮಿಲಿಯನ್ ಟನ್ ಉಕ್ಕಿನ ತ್ಯಾಜ್ಯವನ್ನು ಉತ್ಪಾದಿಸುತ್ತವೆ ಮತ್ತು ಒಂದು ಅಂದಾಜಿನ ಪ್ರಕಾರ 2030 ರ ವೇಳೆಗೆ ಇದರ ಪ್ರಮಾಣವು 50 ಮಿಲಿಯನ್ ಟನ್‌ ಗಳಿಗೆ ಬೆಳೆಯಬಹುದು.

“ಉಕ್ಕಿನ ಸ್ಥಾವರಗಳು ಉಕ್ಕಿನ ತ್ಯಾಜ್ಯದ ಪರ್ವತಗಳಾಗಿ ಮಾರ್ಪಟ್ಟಿವೆ. ಇದು ಪರಿಸರಕ್ಕೆ ದೊಡ್ಡ ಅಪಾಯವಾಗಿದೆ, ಅದಕ್ಕಾಗಿಯೇ ನೀತಿ ಆಯೋಗದ ಸೂಚನೆಗಳ ಮೇರೆಗೆ ಉಕ್ಕಿನ ಸಚಿವಾಲಯವು ಹಲವು ವರ್ಷಗಳ ಹಿಂದೆ ಈ ತ್ಯಾಜ್ಯವನ್ನು ನಿರ್ಮಾಣಕ್ಕೆ ಬಳಸುವ ಯೋಜನೆಯನ್ನು ನಮಗೆ ನೀಡಿತ್ತು. ಸಂಶೋಧನೆ ನಡೆಸಿ ವಿಜ್ಞಾನಿಗಳು ಸೂರತ್‌ ನ ಎಎಮ್‌ಎನ್‌ಎಸ್ ಸ್ಟೀಲ್ ಪ್ಲಾಂಟ್‌ನಲ್ಲಿ ಉಕ್ಕಿನ ತ್ಯಾಜ್ಯವನ್ನು ಸಂಸ್ಕರಿಸಿದರು ಮತ್ತು ಉಕ್ಕಿನ ತ್ಯಾಜ್ಯದಿಂದ ನಿಲುಭಾರವನ್ನು (ballast) ಸಿದ್ಧಪಡಿಸಿದರು” ಎಂದು ಎಎಮ್‌ಎನ್‌ಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಎಂ ಮುಂದ್ರಾ ಹೇಳಿದ್ದಾರೆ.

ತನ್ನ ಮೊದಲ ಪ್ರಾಯೋಗಿಕ ಯೋಜನೆಯ ಯಶಸ್ಸಿನೊಂದಿಗೆ, ಭಾರತ ಸರ್ಕಾರವು ಭವಿಷ್ಯದಲ್ಲಿ ರಸ್ತೆಗಳನ್ನು ಬಲಪಡಿಸಲು ಹೆದ್ದಾರಿಗಳ ನಿರ್ಮಾಣದಲ್ಲಿ ಉಕ್ಕಿನ ತ್ಯಾಜ್ಯವನ್ನು ಬಳಸಲು ಯೋಜಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next