ನವದೆಹಲಿ: ಭಾರತೀಯ ಇತಿಹಾಸವನ್ನು ಪುನಃ ಬರೆಯಿರಿ, ಅದಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ ಬೆನ್ನಲ್ಲೇ, ದೇಶದ ಇತಿಹಾಸದಲ್ಲಾದ ತಪ್ಪುಗಳನ್ನು ಸರಿಪಡಿಸುತ್ತಿದ್ದೇವೆ. ಭಾರತದ ಇತಿಹಾಸ ಕೇವಲ ಗುಲಾಮಗಿರಿಯದ್ದಲ್ಲ, ಅದು ಯೋಧರ ಸಾಸಹಗಾಥೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಪುಕನ್ ಅವರ 400ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ:ವಿಡಿಯೋ…: ಕಾರಿನ ಮೇಲೊಂದು ಅಂಗಡಿಯ ಮಾಡಿ… ವಾಹ್! ಎಂಥಾ ಐಡಿಯಾ ಮಾರ್ರೆ
“ಭಾರತದ ಇತಿಹಾಸವೆಂದರೆ ಯೋಧರ ಇತಿಹಾಸ, ವಿಜಯದ ಇತಿಹಾಸ, ತ್ಯಾಗದ ಇತಿಹಾಸ, ನಿಸ್ವಾರ್ಥ ಮತ್ತು ಧೈರ್ಯದ ಇತಿಹಾಸವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ದುರಾದೃಷ್ಟ ಎಂಬಂತೆ ಸ್ವಾತಂತ್ರ್ಯದ ನಂತರವೂ ವಸಾಹತುಶಾಹಿ ಕಾಲದ ಸಂಚಿನ ಭಾಗವಾಗಿ ಸುಳ್ಳಿನ ಇತಿಹಾಸ ಬರೆಯುವುದನ್ನು ಮುಂದುವರಿಸಲಾಗಿತ್ತು ಎಂದರು.
ದೇಶದ ಸ್ವಾತಂತ್ರ್ಯದ ನಂತರ ಗುಲಾಮಗಿರಿ ಕಾರ್ಯಸೂಚಿಯನ್ನು ಬದಲಾಯಿಸಬೇಕಾದ ಅಗತ್ಯವಿತ್ತು. ಆದರೆ ಆ ರೀತಿ ಇತಿಹಾಸ ದಾಖಲಾಗಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು. ದೇಶದ ಪ್ರತಿಯೊಂದು ಮೂಲೆಗಳಲ್ಲಿಯೂ ಧೈರ್ಯಶಾಲಿ ಯುವಕ, ಯುವತಿಯರು ಹೋರಾಟ ನಡೆಸಿದ ಇತಿಹಾಸವಿದೆ. ಆದರೆ ಈ ಇತಿಹಾಸದಲ್ಲಿ ಅವರನ್ನೆಲ್ಲಾ ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಭಾರತದಲ್ಲಿ ವಸಾಹತುಶಾಯಿ ಮನಸ್ಥಿತಿಯನ್ನು ತೊಡೆದು ಹಾಕುವ ಮೂಲಕ ಬದಲಾವಣೆಯ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ತೆರೆಯಮರೆಯ, ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಗೌರವ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.