ಹೊಸದಿಲ್ಲಿ: ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ ಒಂದೇ ವಾರದಲ್ಲಿ ಭರ್ಜರಿ 23,000 ಕೋಟಿ ರೂ. ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ಗರಿಷ್ಠ 57.4 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಸೆ.20ಕ್ಕೆ ಮುಕ್ತಾಯವಾದ ವಾರದಲ್ಲಿ ವಿದೇಶಿ ವಿನಿಮಯ ನಿಧಿ ಗರಿಷ್ಠ ಪ್ರಮಾಣ ತಲುಪಿದೆ ಎಂದು ಆರ್‌ಬಿಐ ಹೇಳಿದೆ. ಸೆ.13ಕ್ಕೆ ಮುಕ್ತಾಯವಾದ ವಾರದಲ್ಲಿ ಇದು 57.2 ಲಕ್ಷ ಕೋಟಿ ರೂ.ನಷ್ಟಿತ್ತು. ಅಲ್ಲದೇ ಚಿನ್ನ ಮೀಸಲು ನಿಧಿಯಲ್ಲೂ ಸಹ 6,000 ಕೋಟಿ ರೂ. ಹೆಚ್ಚಳವಾಗುವ ಮೂಲಕ ಅದು 5.27 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಆರ್‌ಬಿಐ ಹೇಳಿದೆ.
ಆದರೆ ಉಳಿದ ದೇಶಗಳ ಅಂದರೆ ಯೂರೋ, ಪೌಂಡ್, ಯೆನ್ ಹಾಗೂ ಡಾಲರ್ ಬಳಕೆ ಮಾಡದ ದೇಶಗಳೊಂದಿಗಿನ ವಿದೇಶಿ ವಿನಿಮಯ ನಿಧಿಯಲ್ಲಿ ಕುಸಿತವಾಗಿದೆ ಎನ್ನಲಾಗಿದೆ. ವಿದೇಶಿ ಕರೆನ್ಸಿ ಗಳ ನಡುವೆ ಭಾರತ ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಆರ್‌ಬಿಐ ಮಧ್ಯಪ್ರವೇಶ ಮಾಡುತ್ತದೆ. ವಿದೇಶಿ ವಿನಿಮಯ ಮೀಸಲು ನಿಧಿ ಹೊಂದಿರುವ ರಾಷ್ಟ್ರಗಳಲ್ಲಿ ಚೀನ ಮೊದಲ ಸ್ಥಾನದಲ್ಲಿದ್ದು, 300 ಲಕ್ಷ ಕೋಟಿ ರೂ.ನಷ್ಟಿದೆ.
ಅಲ್ಲದೆ ಕಳೆದ ವಾರ ರೂಪಾಯಿ ಮೌಲ್ಯ 2 ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿತ್ತು. ಒಂದು ವಾರಕ್ಕೆ ಹೋಲಿಸಿದರೆ ರೂಪಾಯಿ ಮೌಲ್ಯ ಶೇ.0.4ರಷ್ಟು ಏರಿಕೆ ಕಂಡು, 83.48ಕ್ಕೆ ಏರಿಕೆ ಕಂಡಿತ್ತು.
ಸತತ 6 ವಾರ ಏರಿಕೆ
ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ ಸತತ 6 ವಾರಗಳಿಂದ ಏರಿಕೆ ಕಾಣುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಅದರಲ್ಲೂ ಕಳೆದ ವಾರ ಗರಿಷ್ಠ ಏರಿಕೆ ಕಂಡಿದೆ.
ಟಾಪ್ 5 ರಾಷ್ಟ್ರಗಳು
ಚೀನ 300 ಲಕ್ಷ ಕೋಟಿ ರೂ.
ಸ್ವಿಟ್ಸರ್ಲೆಂಡ್ 73 ಲಕ್ಷ ಕೋಟಿ ರೂ.
ಜಪಾನ್ 105 ಲಕ್ಷ ಕೋಟಿ ರೂ.
ಭಾರತ 57.4 ಲಕ್ಷ ಕೋಟಿ ರೂ.
ರಷ್ಯಾ: 49.7 ಲಕ್ಷ ಕೋಟಿ ರೂ.