Advertisement

ಮೋದಿ ಪ್ರಧಾನಿಯಾದ ಮೇಲೆ ಭಾರತದ ಗೌರವ ಹೆಚ್ಚಿದೆ: ಶೋಭಾ ಕರಂದ್ಲಾಜೆ

08:35 PM Jun 03, 2022 | Team Udayavani |

ಬೆಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ವಿದೇಶಗಳಲ್ಲಿ ಭಾರತಕ್ಕೆ ಹೆಚ್ಚಿನ ಗೌರವ ದೊರೆಯುತ್ತಿದೆ ಎಂದು ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು 8 ವರ್ಷಗಳ ಅಧಿಕಾರ ಅವಧಿ ಪೂರೈಸಿದ್ದಾರೆ. 2014 ರಲ್ಲಿ ಮೋದಿಯವರು ದೇಶದಲ್ಲಿ ವಿಕಾಸ ಆಗಬೇಕು. ವಿದೇಶದಲ್ಲಿ ಭಾರತಕ್ಕೆ ಗೌರವ ಸಿಗಬೇಕು. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ದೇಶದ ಸೈನ್ಯಕ್ಕೆ ಗೌರವ ಸಿಗಬೇಕು ಎಂಬ ವಿಷಯಗಳನ್ನು ಇಟ್ಟುಕೊಂಡು ದೇಶದ ಪ್ರವಾಸ ಮಾಡಿದ್ದರು. ಎಂಟು ವರ್ಷದಲ್ಲಿ ಮೋದಿ ಮಂತ್ರಿ ಮಂಡಲದ ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಇಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ವಿದೇಶಕ್ಕೆ ಹೋದರೆ ಅವರನ್ನು ಗೌರವದಿಂದ ನೋಡುತ್ತಿರಲಿಲ್ಲ. ಈಗ ನಮ್ಮ ಪ್ರಧಾನಿ ವಿದೇಶಕ್ಕೆ ಹೋದರೆ ಕೆಂಪು ಹಾಸಿನ ಸ್ವಾಗತ ದೊರೆಯುತ್ತದೆ. ವಿದೇಶದಲ್ಲಿ ಮೋದಿಗೆ ಗೌರವ ದೊರೆತರೆ ಅದು ಭಾರತಕ್ಕೆ ಸಿಕ್ಕ ಗೌರವ ಎಂದು ಹೇಳಿದರು.

ಸೈನ್ಯಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಸ್ವಾವಲಂಬಿ ಭಾರತದ ಮೂಲಕ ಇಲ್ಲಿಯೇ ಉತ್ಪಾದನೆ ಮಾಡುವ ಕೆಲಸ ಆಗುತ್ತಿದೆ. ದೇಶದ ಸೈನಿಕರಿಗೆ ವೈರಿಗಳ ವಿರುದ್ಧ ಗುಂಡು ಹೊಡೆಯುವ ಸ್ವಾತಂತ್ರ್ಯವನ್ನು ಮೋದಿಯವರು ಕೊಟ್ಟಿದ್ದಾರೆ. ಮನಮೋಹನ್‌ ಸಿಂಗ್‌ ಕಾಲದಲ್ಲಿ 10 ವರ್ಷ ಕೇವಲ ಭ್ರಷ್ಟಾಚಾರ ನಡೆಯಿತು.

ಈಗ ವಿದೇಶಿ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಿದ್ದಾರೆ. ದೇಶದಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. 12 ಕೋಟಿ ಉಜ್ವಲ ಗ್ಯಾಸ್‌ ವಿತರಣೆ, ಬಡವರ ಮನೆಗಳಿಗೆ ದೀನದಯಾಳ್‌ ಉಪಾಧ್ಯಾಯ ಯೋಜನೆ ಅಡಿಯಲ್ಲಿ ವಿದ್ಯುತ್‌ ನೀಡುವ ಕೆಲಸ ಮಾಡಿದ್ದಾರೆ ಎಂದರು.

ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ:
ಕೃಷಿಕರ ಆದಾಯ ದ್ವಿಗುಣ ಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಅದಕ್ಕಾಗಿ ರೈತರಿಗೆ ಯಾಂತ್ರೀಕರಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಹನಿ ನೀರಾವರಿ ಯೋಜನೆ, ಎಫ್ ಪಿ ಒ ಮೂಲಕ ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ. ಇದರಿಂದ ರೈತರ ಆದಾಯ ಹೆಚ್ಚಳವಾಗುತ್ತಿದೆ ಎಂದರು.

Advertisement

2013 ರ ವರೆಗೆ ಕೃಷಿಗೆ 23000 ಕೋಟಿ ರೂ. ಕೇಂದ್ರ ಬಜೆಟ್‌ ನಲ್ಲಿ ಇಡಲಾಗುತ್ತಿತ್ತು. ಮೋದಿಯವರು 1,32 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಅಲ್ಲದೇ ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ 11 ಕೋಟಿ ರೈತರಿಗೆ 1.80. ಲಕ್ಷ ಕೋಟಿ ರೂ. ನೇರ ಪಾವತಿ ಮೂಲಕ ರೈತರ ಅಕೌಂಟ್‌ ಗಳಿಗೆ ವರ್ಗಾವಣೆ ಮಾಡಲಾಗಿದೆ.

ಕೇಂದ್ರ ಸರ್ಕಾರ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಯುವಕರು ಕೃಷಿಯಲ್ಲಿ ತೊಡಗಿಕೊಂಡ ಪರಿಣಾಮ 3 ಮಿಲಿಯನ್‌ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆ ಮಾಡಲಾಗಿದೆ. ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಯಿತು ಎಂದು ಹೇಳಿದರು.

ಪದಗಳ ವ್ಯತ್ಯಾಸವಾದರೆ ಸರಿಪಡಿಸಲಿ:
ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ವ್ಯಕ್ತಿ ಅಥವಾ ಸರ್ಕಾರ ಬಸವಣ್ಣ ಹಾಗೂ ಕುವೆಂಪುಗೆ ಅವಮಾನ ಮಾಡುವುದಿಲ್ಲ. ಯಾವುದೇ ಪಕ್ಷದವರು ಬಸವಣ್ಣನವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕೆಲವು ಪದಗಳಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಲು ಕೆಲಸ ಆಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಖಂಡಿತವಾಗಿ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ಕೇಂದ್ರ ಕೃಷಿ ಖಾತೆಯ ಜವಾಬ್ದಾರಿ ನೀಡಿದ್ದಾರೆ. ದೇಶದಲ್ಲಿ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದೇನೆ. ವಿವಿಧ ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ ರಾಜಕಾರಣಕ್ಕೆ ಬರುವ ಮಾತುಗಳಿಗೆ ಯಾವುದೆ ಆಧಾರ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next