ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್ ಆಫ್ಟರ್ ಟ್ವೆಂಟಿ ಏಯ್ಟ್ ಇಯರ್ಸ್ .. ಪಾರ್ಟಿ ಬಿಗಿನ್ಸ್ ಇನ್ ಡ್ರೆಸ್ಸಿಂಗ್ ರೂಮ್ .. ಇದು ಭಾರತ 2011ರ ವಿಶ್ವ ಕಪ್ ಗೆದ್ದ ಸಮಯ. ಕಮೆಂಟರಿ ಬಾಕ್ಸ್ ನಲ್ಲಿ ಕುಳಿತಿದ್ದ ರವಿ ಶಾಸ್ತ್ರೀ ಈ ಮಾತುಗಳನ್ನು ಹೇಳುತ್ತಲೇ ಇಡೀ ಭಾರತವೇ ಹುಚ್ಚೆದ್ದು ಕುಣಿದಿತ್ತು. ಕ್ರಿಕೆಟ್ ಅನ್ನು ಧರ್ಮದಂತೆ ಆರಾಧಿಸುವ ಭಾರತ ದೇಶದಲ್ಲಿ ಶಾಸ್ತ್ರೀಯ ಈ ಮಾತುಗಳು ಮಂತ್ರಘೋಷಗಳಾಗಿದ್ದವು.
ಕ್ರಿಕೆಟ್ ಈಗ ಕೇವಲ ಚೆಂಡು ದಾಂಡಿನ ಆಟವಾಗಿ ಉಳಿದಿಲ್ಲ. ಮನೋರಂಜನಾತ್ಮಕವಾಗಿ, ವಾಣಿಜ್ಯದ ದೃಷ್ಟಿಯಲ್ಲಿ ಮುಂದುವರಿದಿದೆ. ಟಿವಿ ಯುಗ ಆರಂಭಕ್ಕೂ ಮೊದಲು ರೇಡಿಯೋದಲ್ಲಿ ಕೇವಲ ವೀಕ್ಷಕ ವಿವರಣೆಯ ಮೂಲಕ ಪಂದ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ನಂತರ ಟಿವಿಯಲ್ಲಿ ನೇರಪ್ರಸಾರದಲ್ಲಿ ಪಂದ್ಯ ವೀಕ್ಷಣೆಯೊಂದಿಗೆ ವಿವರಣೆಯೂ ಅಷ್ಟೇ ಮುದ ನೀಡುತ್ತದೆ.
ಟೋನಿ ಗ್ರೇಗ್, ಜೆಫ್ರಿ ಬಾಯ್ಕಾಟ್, ಡೇವಿಡ್ ಲಾಯ್ಡ್, ರಸೆಲ್ ಅರ್ನಾಲ್ಡ್, ನಾಸೀರ್ ಹುಸೇನ್, ಇಯಾನ್ ಬಿಷಪ್, ಮೈಕಲ್ ಅಥರ್ಟನ್ ಮುಂತಾದವರು ವಿಶ್ವ ಕ್ರಿಕೆಟ್ ನ ವೀಕ್ಷಕ ವಿವರಣೆಯಲ್ಲಿ ಹೆಸರು ಮಾಡಿದವರು. ವೀಕ್ಷಕ ವಿವರಣೆಯಲ್ಲಿ ಭಾರತೀಯರೂ ತನ್ನದೇ ಹೆಸರು ಮಾಡಿದ್ದು, ಆಯ್ದ ಕೆಲವರ ಪರಿಚಯ ಇಲ್ಲಿದೆ.
ಹರ್ಷ ಭೋಗ್ಲೆ
ಭಾರತೀಯ ಕ್ರಿಕೆಟ್ ಕಾಮೆಂಟರಿಯಲ್ಲಿ ಹರ್ಷ ಭೋಗ್ಲೆ ಚಿರಪರಿಚಿತ ಹೆಸರು. ಮೂಲತಃ ಹೈದರಾಬಾದ್ ನವರಾದ ಹರ್ಷ ತನ್ನ19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ ಆರಂಭಿಸಿದ್ದರು. ಅಂದು ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಷ ಇಂದು ಟಿವಿ ವೀಕ್ಷಕ ವಿವರಣೆಯಲ್ಲಿ ದೊಡ್ಡ ಹೆಸರು.
ಆಸ್ಟ್ರೇಲಿಯನ್ ಕ್ರಿಕೆಟ್ ಬ್ರಾಡ್ ಕಾಸ್ಟಿಂಗ್ ನಿಂದ ಕರೆ ಪಡೆದ ಮೊದಲ ಭಾರತೀಯ ಕಾಮೆಂಟೇಟರ್ ಹರ್ಷ ಭೋಗ್ಲೆ. ಉತ್ತಮ ಧ್ವನಿ, ವಿಶ್ಲೇಷಣೆ ಮಾಡುವ ಚಾಕಚಕ್ಯತೆ, ಭಾಷೆಯ ಮೇಲಿನ ಹಿಡಿತ ಹರ್ಷ ಭೋಗ್ಲೆಯನ್ನು ಉನ್ನತ ಸ್ಥಾನಕ್ಕೇರಿಸಿದೆ.
ರವಿ ಶಾಸ್ತ್ರೀ
ಅದು ಯುವರಾಜ್ ಸಿಂಗ್ ಸಿಡಿಸಿದ ಆರು ಸಿಕ್ಸರ್ ಆಗಲಿ, ಭಾರತದ ವಿಶ್ವಕಪ್ ಗೆಲುವಿನ ಕ್ಷಣವಾಗಲಿ ಭಾರತೀಯ ಕ್ರಿಕೆಟ್ ನ ಅತ್ಯಮೂಲ್ಯ ಸನ್ನಿವೇಶಗಳಲ್ಲಿ ಕಾಮೆಂಟರಿ ಮಾಡಿದವರು ರವಿ ಶಾಸ್ತ್ರೀ. ಕಂಚಿನ ಕಂಠ, ನಿರರ್ಗಳ ಮಾತು, ಇತರರಿಗಿಂತ ಭಿನ್ನವಾಗಿ ನಿಲ್ಲುವ ಕಾಮೆಂಟರಿ ಶೈಲಿಯಿಂದ ರವಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.
ರವಿ ಶಾಸ್ತ್ರೀ ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ಕಾರಣ ವೀಕ್ಷಕ ವಿವರಣೆಗೆ ಅವಕಾಶವಿಲ್ಲ. ರವಿ ಶಾಸ್ತ್ರೀ ಮತ್ತೆ ಯಾವಾಗ ಮೈಕ್ ಹಿಡಿದು ಬರುತ್ತಾರೆ ಎಂದು ಕಾಯುತ್ತಿದ್ದಾರೆ ಅವರ ಅಭಿಮಾನಿಗಳು.
ಸುನೀಲ್ ಗಾವಸ್ಕರ್
ದಿಗ್ಗಜ ಬ್ಯಾಟ್ಸಮನ್ ಸುನೀಲ್ ಗಾವಸ್ಕರ್ ಸದ್ಯ ಕಾಮೆಂಟರಿಯಲ್ಲಿ ತೊಡಗಿಸಿಕೊಂಡಿದ್ದಾರೆ. 1983 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿರುವ ಗಾವಸ್ಕರ್ ಲಿಟಲ್ ಮಾಸ್ಟರ್ ಎಂದು ಹೆಸರು ಮಾಡಿದವರು. ತನ್ನ ಕ್ರಿಕೆಟ್ ಅನುಭವವನ್ನು ಕಾಮೆಂಟರಿಯಲ್ಲಿ ಧಾರೆಯೆರೆಯುವ ಗಾವಸ್ಕರ್, ಇಂಗ್ಲೀಷ್ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಉತ್ತಮ ವಿವರಣೆ ನೀಡುತ್ತಾರೆ.
ಕಾಮೆಂಟರಿಯ ಜೊತೆಗೆ ಯುವ ಆಟಗಾರರಿಗೆ ಸಲಹೆಗಳನ್ನೂ ನೀಡುವ ದಿಗ್ಗಜ ಭಾರತದ ಬಹುಬೇಡಿಕೆಯ ವೀಕ್ಷಕ ವಿವರಕರಲ್ಲಿ ಓರ್ವ.
ಸೌರವ್ ಗಂಗೂಲಿ
ಟೀಂ ಇಂಡಿಯಾ ಮಾಜಿ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಮಟ್ಟದ ಕಾಮೇಂಟೇರ್ ಕೂಡಾ ಹೌದು. 2008ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ನಂತರ ವೀಕ್ಷಕ ವಿವರಣೆಗೆ ತೊಡಗಿದ ಸೌರವ್ ನಂತರದ ಮೂರು ವಿಶ್ವಕಪ್ ನಲ್ಲಿ ಅಧಿಕೃತ ವೀಕ್ಷಕ ವಿವರಣೆಗಾರನಾಗಿದ್ದಾರೆ.
ಕ್ರಿಕೆಟ್ ಬಗೆಗಿನ ವಿಶೇಷ ಜ್ಞಾನ, ಅಗಾಧ ಜ್ಞಾಪಕ ಶಕ್ತಿಯಿಂದ ‘’ದಾದಾ’’ ಕಾಮೆಂಟರಿ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಸದ್ಯ ಬಿಸಿಸಿಐ ಅಧ್ಯಕ್ಷನಾಗಿರುವ ಸೌರವ್ ಗಂಗೂಲಿ ವೀಕ್ಷಕ ವಿವರಣೆಯಲ್ಲಿ ಭಾಗವಹಿಸುವಂತಿಲ್ಲ.
ಸಂಜಯ್ ಮಾಂಜ್ರೇಕರ್
ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್. ಆದರೂ ವಿಶ್ವದ ಅಗ್ರ ಕಾಮೆಂಟೇಟರ್ ಗಳ ಪಟ್ಟಿಯಲ್ಲಿ ಸಂಜಯ್ ಸದಾ ಕಾಣಿಸಿಕೊಳ್ಳುತ್ತಾರೆ. ಮಾಜಿ ಬ್ಯಾಟ್ಸಮನ್ ಕೈಯಲ್ಲಿ ಮೈಕ್ ಹಿಡಿದು ಅಬ್ಬರಿಸಿದ್ದೇ ಹೆಚ್ಚು. ವಿಶ್ವಕಪ್ ನಲ್ಲಿ ಐಸಿಸಿ ಪ್ಯಾನೆಲ್ ಕಾಮೆಂಟೇರ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮಾಂಜ್ರೇಕರ್ ತನ್ನ ವಿಭಿನ್ನ ವಿಶ್ಲೇಷಣೆಯಿಂದ ಪ್ರಸಿದ್ದಿ ಪಡೆದವರು.
ಸದ್ಯ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಆಪಾದನೆಯಿಂದ ಬಿಸಿಸಿಐ ಸಂಜಯ್ ಮಾಂಜ್ರೇಕರ್ ರನ್ನು ತನ್ನ ಕಾಮೆಂಟೇಟರ್ಸ್ ಪಟ್ಟಿಯಿಂದ ಕೈ ಬಿಟ್ಟಿದೆ. ಅದೇನೆ ಇರಲಿ ಮಾಂಜ್ರೇಕರ್ ರ ವೀಕ್ಷಕ ವಿವರಣೆಯನ್ನು ಭಾರತೀಯರು ಮರೆಯುವಂತಿಲ್ಲ.