Advertisement

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌: ಫೈನಲ್‌ ಪ್ರವೇಶಿಸಿದ ಅನ್ನುರಾಣಿ

09:38 PM Jul 21, 2022 | Team Udayavani |

ಯೂಜೀನ್‌ (ಯುಎಸ್‌ಎ): ಜಾವೆಲಿನ್‌ ಎಸೆತಗಾರ್ತಿ ಅನ್ನುರಾಣಿ ಸತತ ಎರಡನೇ ಸಲ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅವರು 59.60 ಮೀ. ದೂರದ ಸಾಧನೆಗೈದರು.

Advertisement

ಫೌಲ್‌ನೊಂದಿಗೆ ಸ್ಪರ್ಧೆ ಆರಂಭಿಸಿದ ಅನ್ನು ರಾಣಿ, ದ್ವಿತೀಯ ಪ್ರಯತ್ನದಲ್ಲಿ 55.35 ಮೀ. ದೂರಕ್ಕೆಸೆದರು. ಬಳಿಕ ಈ ದೂರವನ್ನು 59.60 ಮೀಟರ್‌ಗೆ ಹೆಚ್ಚಿಸಿಕೊಂಡು “ಬಿ’ ವಿಭಾಗದ 5ನೇ ಸ್ಥಾನಿಯಾದರು. ಒಟ್ಟಾರೆಯಾಗಿ 8ನೇ ಸ್ಥಾನ ಪಡೆದರು. ಇದೇನೂ ಅವರ ಶ್ರೇಷ್ಠ ಸಾಧನೆಯೇನಲ್ಲ. ಆದರೆ ಫೈನಲ್‌ ಪ್ರವೇಶಕ್ಕೆ ಇದು ಸಾಕಾಯಿತು.

ರಾಷ್ಟ್ರೀಯ ದಾಖಲೆಯಾದ 63.82 ಮೀಟರ್‌ ದೂರವನ್ನು ದಾಖಲಿಸಲು ಅನ್ನು ರಾಣಿಗೆ ಸಾಧ್ಯವಾಗಲಿಲ್ಲ. ಮೇ ತಿಂಗಳಲ್ಲಿ ಜಮ್ಶೆಡ್‌ಪುರದಲ್ಲಿ ನಡೆದ “ಇಂಡಿಯಾ ಓಪನ್‌’ನಲ್ಲಿ ಈ ದಾಖಲೆ ನಿರ್ಮಿಸಿದ್ದರು. ಶನಿವಾರ ಬೆಳಗ್ಗೆ 6.50ಕ್ಕೆ ನಡೆಯುವ ಫೈನಲ್‌ನಲ್ಲಿ ಅನ್ನು ಪದಕವೊಂದರ ರಾಣಿ ಆಗಬಲ್ಲರೇ ಎಂಬುದು ಭಾರತೀಯರ ಕೌತುಕ.

2019ರ ದೋಹಾ ಚಾಂಪಿಯನ್‌ಶಿಪ್‌ನಲ್ಲೂ ಅನ್ನು ರಾಣಿ ಪದಕ ಸುತ್ತು ಪ್ರವೇಶಿಸಿದ್ದರು. ಅಲ್ಲಿ 8ನೇ ಸ್ಥಾನ ಲಭಿಸಿತ್ತು (61.12 ಮೀ.). 2017ರ ಲಂಡನ್‌ ಕೂಟದಲ್ಲಿ ಅರ್ಹತಾ ಸುತ್ತಿನಲ್ಲೇ 10ನೇ ಸ್ಥಾನಕ್ಕೆ ಜಾರಿದ್ದರಿಂದ ಫೈನಲ್‌ ಟಿಕೆಟ್‌ ಲಭಿಸಿರಲಿಲ್ಲ.

ಪ್ರಸಕ್ತ ಋತುವಿನಲ್ಲಿ ಅತ್ಯುತ್ತಮ ಸಾಧನೆಗೈದಿದ್ದ ಅಮೆರಿಕದ ಮ್ಯಾಗ್ಗಿ ಮಲೋನ್‌ ಫೈನಲ್‌ ಪ್ರವೇಶಿಸಲು ವಿಫಲರಾದುದೊಂದು ಅಚ್ಚರಿ. ಅವರು 54.19 ಮೀ. ದೂರದ ಸಾಧನೆಯೊಂದಿಗೆ “ಬಿ’ ವಿಭಾಗದಲ್ಲಿ 12ನೇ ಸ್ಥಾನಕ್ಕೆ ಕುಸಿದರು.

Advertisement

ಪಾರುಲ್‌ ಚೌಧರಿ ವಿಫಲ:

ವನಿತೆಯರ 5,000 ಮೀ. ರೇಸ್‌ನಲ್ಲಿ ಪಾರುಲ್‌ ಚೌಧರಿ ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು. ಹೀಟ್‌ ನಂ. ಎರಡರಲ್ಲಿ ಅವರು 17ನೇ ಹಾಗೂ ಒಟ್ಟಾರೆಯಾಗಿ 31ನೇ ಸ್ಥಾನಿಯಾದರು (15.54.03). ಇದು ಅವರ ವೈಯಕ್ತಿಕ ಸಾಧನೆಗಿಂತಲೂ ಕಳಪೆ ನಿರ್ವಹಣೆಯಾಗಿದೆ (15.36.03).

 ಇಂದು ನೀರಜ್‌ ಚೋಪ್ರಾ ಸ್ಪರ್ಧೆ :

ಟೋಕಿಯೊ ಒಲಿಂಪಿಕ್ಸ್‌ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ನೀರಜ್‌ ಚೋಪ್ರಾ ಶುಕ್ರವಾರ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಕಾಲಮಾನದಂತೆ ಈ ಸ್ಪರ್ಧೆ ಬೆಳಗ್ಗೆ 5.35ಕ್ಕೆ ಆರಂಭವಾಗಲಿದೆ. ಚೋಪ್ರಾ ಮೇಲೆ ಭಾರತ ದೊಡ್ಡ ನಿರೀಕ್ಷೆ ಇರಿಸಿದೆ. ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್‌ ಗಣರಾಜ್ಯದ ಜಾಕುಬ್‌ ವಲ್ಹೆಶ್‌, 2012ರ ಲಂಡನ್‌ ಒಲಿಂಪಿಕ್ಸ್‌ ಚಾಂಪಿಯನ್‌, ಟ್ರಿನಿಡಾಡ್‌ನ‌ ಕೆಶೋರ್ನ್ ವಾಲ್ಕಾಟ್‌ ಅವರೆಲ್ಲ ನೀರಜ್‌ ಚೋಪ್ರಾ ಒಳಗೊಂಡಿರುವ “ಎ’ ಗ್ರೂಪ್‌ನಲ್ಲಿದ್ದಾರೆ. ಗ್ರೆನಡಾದ ಹಾಲಿ ಚಾಂಪಿಯನ್‌ ಆ್ಯಂಡರ್ಸನ್‌ “ಬಿ’ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next