Advertisement

ಭಾರತದ ಸೋದರಿಯರಿಂದ ಚೀನಾ ರಾಖೀ ಬಹಿಷ್ಕಾರ!

06:00 AM Aug 06, 2017 | |

ನವದೆಹಲಿ: ಡೋಕ್ಲಾಂ ಗಡಿಯಲ್ಲಿ ಭಾರತ-ಚೀನಾ ನಡುವಿನ ಸಂಬಂಧ ಹದಗೆಟ್ಟಿದ್ದು, ಭಾರತದ ವಿರುದ್ಧ ಚೀನಾ ಕತ್ತಿ ಮಸೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದಿಸುವ ವಸ್ತುಗಳನ್ನು ಬಹಿಷ್ಕರಿಸುವ ಬಗ್ಗೆ ಸದ್ದಿಲ್ಲದೆ ಅಭಿಯಾನವೇ ಶುರುವಾಗಿದೆ. ಹೊಸ ಬೆಳವಣಿಗೆ ಏನೆಂದರೆ, ಈ ದೇಸಿ ಅಭಿಯಾನದ ಬಿಸಿ ಈಗ ರಕ್ಷಾ ಬಂಧನಕ್ಕೂ ತಟ್ಟಿದೆ.

Advertisement

ಈ ಬಾರಿ ರಕ್ಷಾ ಬಂಧನದ ದಿನ (ಆ.7) ಸಹೋದರರ ಕೈಗೆ ಕಟ್ಟುವ ರಾಖೀಗಳು “ದೇಸಿ ರಾಖೀ’ಗಳಾಗಿರಲಿವೆ. ರಾಖೀ ಕೊಳ್ಳಲು ಅಂಗಡಿಗೆ ಹೋಗುವ ಮಹಿಳೆಯರು, ನಿರ್ದಿಷ್ಟವಾಗಿ ದೇಸಿ ರಾಖೀಗಳನ್ನೇ ಕೊಡುವಂತೆ ಕೇಳುತ್ತಿದ್ದಾರೆ. ಚೀನಾದಲ್ಲಿ ರೂಪುಗೊಂಡ ರಾಖೀಗಳ ಬೆಲೆ ಕಡಿಮೆ ಇದ್ದರೂ, ಸಹೋದರಿಯರು ಅವುಗಳನ್ನು ಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.

ಪ್ರತಿ ವರ್ಷ ರಕ್ಷಾ ಬಂಧನ ಸಂದರ್ಭದಲ್ಲಿ ಭಾರತದ ಮಾರುಕಟ್ಟೆ, ಅಂಗಡಿ, ರಸ್ತೆ ಬದಿಗಳಲ್ಲಿ ಕಂಗೊಳಿಸುವ ರಾಖೀಗಳಲ್ಲಿ ಶೇ.70ಕ್ಕೂ ಹೆಚ್ಚು ಚೀನಾ ರೂಪಿತ ರಾಖೀಗಳೇ ಇರುತ್ತವೆ. ಈ ಬಾರಿ ಕೂಡ ನೆರೆ ರಾಷ್ಟ್ರದಿಂದ ಸಾಕಷ್ಟು ರಾಖೀಗಳು ಬಂದಿವೆ. ನೋಡಲು ಅತ್ಯಾಕರ್ಷಕವಾಗಿರುವ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವ ಚೀನಾ ರಾಖೀಗಳಿಗೆ ಈವರೆಗೆ ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಗಡಿಗೆ ಸಂಬಂಧಿಸಿದಂತೆ ಚೀನಾ ದರ್ಪ ತೋರುತ್ತಿರುವುದನ್ನು ಗಮನಿಸಿರುವ ಭಾರತೀಯರು, ಮೇಡ್‌ ಇನ್‌ ಚೀನಾ ವಸ್ತುಗಳನ್ನು ಬಹಿಷ್ಕರಿಸುತ್ತಿರುವುದು ಮಾತ್ರವಲ್ಲದೆ, ಅಲ್ಲಿ ತಯಾರಾದ ರಾಖೀಗಳನ್ನೂ ತಿರಸ್ಕರಿಸುತ್ತಿದ್ದಾರೆ.

ಕಾರಣ ಏನೇ ಆಗಿದ್ದರೂ ಈ ಬಾರಿಯ ರಕ್ಷಾಬಂಧನ ಸ್ಥಳೀಯ ರಾಖೀ ಉತ್ಪಾದಕರಿಗೆ ಲಾಭದಾಯಕವಾಗುತ್ತಿದೆ. ದೇಶೀಯವಾಗಿ ತಯಾರಾದ ರಾಖೀಗಳನ್ನು ಕೊಳ್ಳುವ ಮೂಲಕ ನಮ್ಮದೇ ಉತ್ಪಾದಕರಿಗೆ ಉತ್ತೇಜನ ನೀಡಲು ಭಾರತೀಯ ಸಹೋದರಿಯರು ಮನಸು ಮಾಡಿದ್ದಾರೆ. ಹೀಗಾಗಿ ಹಿಂದೆಂದಿಗಿಂತಲೂ ಪ್ರಸಕ್ತ ವರ್ಷ ದೇಸಿ ರಾಖೀಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಪರಿಣಾಮ, ಮಾರುಕಟ್ಟೆಯಲ್ಲಿ ದೇಸಿ ರಾಖೀಗಳು ಬಹುಬೇಗ ಮಾರಾಟವಾಗುತ್ತಿದ್ದು, ಚೀನಾ ಉತ್ಪನ್ನಗಳು ಬಿಕರಿಯಾಗದೆ ಉಳಿಯುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಖೀ ತಯಾರಿಸಿ ಪೂರೈಸುವಂತೆ ಸ್ಥಳೀಯ ಉತ್ಪಾದಕರಿಗೆ ಹೇಳಲಾಗುತ್ತಿದೆ ಎಂದು ದೆಹಲಿಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಕುಸಿದ ಪೂರೈಕೆ, ಹೆಚ್ಚಿದ ಬೆಲೆ:
ದೇಸಿ ರಾಖೀಗಳಿಗೆ ಬೇಡಿಕೆ ಹೆಚ್ಚಿರುವ ಬೆನ್ನಲ್ಲೇ ಮಾರುಕಟ್ಟೆಗೆ ಪೂರೈಕೆಯಾಗುವ ರಾಖೀಗಳ ಪ್ರಮಾಣ ಕೂಡ ಇಳಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ರಾಖೀಗಳು ಪೂರೈಕೆಯಾಗುತ್ತಿಲ್ಲ. ಅದೂ ಅಲ್ಲದೆ ದೇಸಿ ರಾಖೀಗಳಿಗೆ ಹೆಚ್ಚಿರುವ ಬೇಡಿಕೆಗೆ ಅನುಗುಣವಾಗಿ ಉತ್ಪನ್ನ ಪೂರೈಸಲು ಸ್ಥಳೀಯ ಉತ್ಪಾದಕರಿಗೆ ಕಷ್ಟವಾಗುತ್ತಿದೆ. ವೆಲ್ಲದರ ಪರಿಣಾಮ ಈ ಬಾರಿ ರಾಖೀಗಳ ಬೆಲೆ ಹೆಚ್ಚಾಗಿದೆ.

Advertisement

ಟ್ರಂಪ್‌ಗೆ 1001 ರಾಖೀ ರವಾನೆ
ಹರ್ಯಾಣದ ಕುಗ್ರಾಮವೊಂದರ ಮಹಿಳೆಯರಿಗೆ ಟ್ರಂಪ್‌ ಮೇಲೆ ಅದೇನು ಪ್ರೀತಿಯೋ, “ರಕ್ಷಾ ಬಂಧನ’ ಎಂದರೇನೆಂದು ಅರಿಯದ ಟ್ರಂಪ್‌ಗಾಗಿ ಸಾವಿರದೊಂದು ರಾಖೀ ರೂಪಿಸಿದ್ದಾರೆ! ಜೊತೆಗೆ ಪ್ರಧಾನಿ ಮೋದಿ ಅವರಿಗೂ 501 ರಾಖೀಗಳನ್ನು ಸಿದ್ಧಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರಿಗೆ ಕಳಿಸಿಕೊಡಲು 1001 ರಾಖೀ ರೂಪಿಸಿರುವುದು ಹರ್ಯಾಣದ ಮರೋರಾ ಗ್ರಾಮದ ಶಾಲಾ ಬಾಲಕಿಯರು ಮತ್ತು ಮಹಿಳೆಯರು. ವಿಶೇಷವೆಂದರೆ ಈ ಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಪ್ರಸ್ತುತ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ಮೋದಿ ಅವರನ್ನು “ಅಣ್ಣ’ಂದಿರು ಎಂದು ಪರಿಗಣಿಸಿರುವ ಗ್ರಾಮದ ಮಹಿಳೆಯರು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭಾವಚಿತ್ರವಿರುವ 1001 ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಒಳಗೊಂಡಿರುವ 501 ರಾಖೀಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳನ್ನು ಶುಕ್ರವಾರ ಕಾರ್ಗೊ ಮೂಲಕ ಕಳಿಸಿದ್ದು, ರಕ್ಷಾ ಬಂಧನದ ದಿನ (ಆ.7) ಟ್ರಂಪ್‌ ಕೈಸೇರಲಿವೆ,’ ಎಂದು ಸುಲಭ್‌ ಎಂಜಿಒ ಉಪಾಧ್ಯಕ್ಷೆ ಮೋನಿಕಾ ಜೈನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next