ಹೊಸದಿಲ್ಲಿ: ಭಾರತದಲ್ಲಿ ವಾಸಿಸುವವರು ಎಲ್ಲರೂ ಹಿಂದೂಗಳೇ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದೇಶದಲ್ಲಿ ಜೀವಿಸುವವರಿಗೆ ಅದೇ ಗುರುತು ಇದೆ ಎಂದು ಹೇಳಿದ್ದಾರೆ. ಮೂರು ದಿನಗಳ ಸರಣಿ ಉಪನ್ಯಾಸದ ಕೊನೆಯ ದಿನವಾದ ಬುಧವಾರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಹಿಂದೂಯಿಸಮ್ ಎಂಬ ಪದ ಪ್ರಯೋಗ ಸರಿಯಲ್ಲ. “ಹಿಂದುತ್ವ’ ಎನ್ನುವುದು ವಿಸ್ತೃತ ಅರ್ಥ ಹೊಂದಿದೆ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ಹೇಳಿದ ಪ್ರಕಾರ ನಿರಂತರ ಸತ್ಯ ಶೋಧನೆಯೇ ಹಿಂದುತ್ವ ಎಂದು ಭಾಗವತ್ ಹೇಳಿದ್ದಾರೆ
ಅಂತರ್ಜಾತಿ ವಿವಾಹಕ್ಕೆ ಆರ್‌ಎಸ್‌ಎಸ್‌ನ ವಿರೋಧ ಇಲ್ಲ ಎಂದು ಹೇಳಿದ ಭಾಗವತ್, ಅದು ಪುರುಷ ಮತ್ತು ಮಹಿಳೆ ನಡುವಿನ ಹೊಂದಾಣಿಕೆಗೆ ಸೇರಿದ್ದು ಎಂದು ಹೇಳಿದ್ದಾರೆ. ಅದಕ್ಕೆ ಸಹಮತ ಇದ್ದರೆ ಸಂಘದಲ್ಲಿಯೇ ಇದೆ ಎಂದು ಹೇಳಿದ್ದಾರೆ. ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.
ಗೋ ರಕ್ಷಣೆ ಇರಲಿ: ಗೋವುಗಳ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ಆದರೆ ಅದರ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸಂಘಟನೆ ಒಪ್ಪಿಕೊಳ್ಳುವುದಿಲ್ಲ ಎಂದು ಭಾಗವತ್ ಹೇಳಿದ್ದಾರೆ. ನಿಜವಾಗಿಯೂ ಗೋವುಗಳ ರಕ್ಷಣೆ ಮಾಡುವವರಿಂದ ಹಿಂಸೆ ಉಂಟಾಗುತ್ತಿಲ್ಲ. ಹೀಗಾಗಿ, ಈ ಬಗ್ಗೆ ಎರಡು ಧ್ವನಿಯಲ್ಲಿ ಮಾತನಾಡುವವರ ಧ್ವನಿ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ. ಅಪರಾಧ ನಡೆಸುವವರೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಇಂಥ ಕುಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಅಕ್ರಮವಾಗಿ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವುದಕ್ಕೆ ಆರ್‌ಎಸ್‌ಎಸ್‌ನ ವಿರೋಧವಿದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ ಭಾಗವತ್. ತೃತೀಯ ಲಿಂಗಿ ಸಮುದಾಯ ಸಮಾಜದಿಂದ ಹೊರತಾಗಿ ಇರಬಾರದು. ಅವರು ಮುಖ್ಯವಾಹಿನಿಯಲ್ಲಿರಬೇಕು ಎಂದಿದ್ದಾರೆ.
ಇಂಗ್ಲಿಷ್‌ಗೆ ವಿರೋಧವಿಲ್ಲ
ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯ ಮೇಲೆ ಆರ್‌ಎಸ್‌ಎಸ್ ವಿರೋಧ ಹೊಂದಿಲ್ಲ. ಅದು ದೇಶದಲ್ಲಿನ ಭಾಷೆಗೆ ಪರ್ಯಾಯ ವಾಗಿ ಇರಲು ಸಾಧ್ಯವಿಲ್ಲ ಎಂದಿದ್ದಾರೆ. “ಇಂಗ್ಲಿಷ್‌ನಲ್ಲಿ ಅತ್ಯುತ್ತಮವಾಗಿ ಮಾತನಾಡು ವವರು ಬೇಕಾಗಿದ್ದಾರೆ’ ಎಂದು ಹೇಳಿದ್ದಾರೆ.