ಬೆಂಗಳೂರು: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವಜನತೆ ಭಾರತೀಯತೆಯನ್ನು ಮರೆಯುತ್ತಿದ್ದಾರೆ ಎಂದು ಯಕ್ಷಗುರು, ಹಿರಿಯ ಕಲಾವಿದ ಬನ್ನಂಜೆ ಸಂಜೀವ ಸುವರ್ಣ ಕಳವಳ ವ್ಯಕ್ತಪಡಿಸಿದರು.
ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್‌ವತಿಯಿಂದ ಶನಿವಾರ ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕರಾವಳಿಯ ಖಾದ್ಯ ಮತ್ತು ಕ್ರೀಡಾ ಉತ್ಸವ “ನಮ್ಮೂರ ಹಬ್ಬ’ಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನವರಿಂದ ಬಳುವಳಿಯಾಗಿ ಬಂದ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಬಹುದೊಡ್ಡ ಕೆಲಸ ಆಗಬೇಕಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯೆ ನಳಿನಿ ಮಂಜುನಾಥ್ ಮಾತನಾಡಿ, ನಮ್ಮೂರ ಹಬ್ಬದ ಮೂಲಕ ಹಳ್ಳಿಯ ಸೊಗಡನ್ನು ಬೆಂಗಳೂರಿನಲ್ಲಿ ಪುನರ್‌ಸೃಷ್ಟಿಸಿರುವುದು ನಿಜಕ್ಕೂ ಆನಂದ ತಂದಿದೆ ಎಂದು ತಿಳಿಸಿದರು. ಮಾಜಿ ಉಪಮೇಯರ್ ಎಂ.ಲಕ್ಷ್ಮೀ ನಾರಾಯಣ, ನಿರ್ದೇಶಕ ಸಿ.ಕೆ.ಚಂದ್ರಶೇಖರ್, ಅಭಿನಂದನಾ ಸಾಂಸ್ಕೃತಿಕ ಟ್ರಸ್ಟಿನ ಶಂಕರ್‌ಕುಂದರ್, ರಾಘವೇಂದ್ರ ಕಾಂಚನ್ ಮೊದಲಾದವರು ಇದ್ದರು.
ಸಾಂಸ್ಕೃತಿಕ ವೈಭವ: ಕರಾವಳಿಯಿಂದ ತಂದ ತಾಜಾ ತರಕಾರಿಗಳು, ಅಪರೂಪದ ಗೃಹೋಪಯೋಗಿ ವಸ್ತುಗಳಿಗೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು. ಕರಾವಳಿಯಿಂದ ಬಂದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸಿದ ನೀರು ದೋಸೆ, ಹಾಲುಬಾಯಿ, ಕಡುಬು, ಗೋಲಿಬಜೆ, ಪತ್ರೊಡೆ, ಕೋರಿ ರೊಟ್ಟಿ, ಮೀನು ಹಾಗೂ ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳನ್ನು ಆಹ್ವಾದಿಸಿದ ಜನ ಖುಷಿಪಟ್ಟರು.
ಉಡುಪಿ ಯಕ್ಷಕೇಂದ್ರದಿಂದ ಯಕ್ಷ ಪದ ಧ್ವನಿ, ಪ್ರಶಾಂತ್ ಗ್ರೂಪ್ ಕಡಿಯಾಳಿ ಇವರಿಂದ ನೃತ್ಯೋತ್ಸವ, ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್ ನೇತೃತ್ವದಲ್ಲಿ ಜನಪ್ರಿಯ ಭಾವಗೀತೆ ಹಾಗೂ ಸಿನಿಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಿದರು.
ಜಯಂತ್ ಕಾಯ್ಕಿಣಿಗೆ ಕಿರೀಟ ಪ್ರಶಸ್ತಿ: ಇಂದು(ಭಾನುವಾರ) ನಮ್ಮೂರು ಹಬ್ಬದಲ್ಲಿ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿಯವರಿಗೆ ಕಿರೀಟ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬಯಲಾಟದಲ್ಲಿ ಕಂಬಳದ ಓಟ, ದೋಣಿ ಓಟ ಇನ್ನಿತರ ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳು, ವಯಸ್ಕರರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು ನಡೆಯಲಿದೆ.