Advertisement

ಭಾರತೀಯರ ಮನ ಗೆದ್ದಿದ್ದೇವೆ, ಅದೇ ದೊಡ್ಡ ಖುಷಿ: ಕೊಡಗಿನ ಕೋಚ್‌ ಅಂಕಿತಾ ಸುರೇಶ್‌

11:33 PM Aug 06, 2021 | Team Udayavani |

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಚರಿತ್ರಾರ್ಹ ಸಾಧನೆ ಮಾಡಿದೆ. ಕಂಚಿನ ಪದಕದ ಹೋರಾಟದಲ್ಲಿ ಬ್ರಿಟನ್‌ ಎದುರು ಸೋತರೂ ತನ್ನ ಅಸಾಮಾನ್ಯ ಆಟದಿಂದ ಸಮಸ್ತ ಭಾರತೀಯರ ಮನಗೆದ್ದಿದೆ. ಈ ಹಿನ್ನೆಲೆಯಲ್ಲಿ ಇಡೀ ಕ್ರೀಡಾಕೂಟದಲ್ಲಿ ಆಟಗಾರ್ತಿಯರು ತೋರಿದ ಛಾತಿಯನ್ನು ಮೆಚ್ಚಿಕೊಂಡಿರುವ ತಂಡದ ಸಹಾಯಕ ತರಬೇತುದಾರರಾದ, ನಮ್ಮ ಕೊಡಗಿನ ಅಂಕಿತಾ ಸುರೇಶ್‌ “ಉದಯವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Advertisement

– ಕಂಚಿನ ಪದಕ ಪಂದ್ಯದಲ್ಲಿ ಮಹಿಳಾ ತಂಡದ ಪ್ರದರ್ಶನ ನಿಮಗೆ ತೃಪ್ತಿ ತಂದಿದೆಯೇ?
ಅತ್ಯಂತ ತೃಪ್ತಿ ತಂದಿದೆ. ನಮ್ಮ ತಂಡ ಶಕ್ತಿಮೀರಿ ಹೋರಾಟ ಮಾಡಿತು. ಪಂದ್ಯದ ಒಂದು ಹಂತದಲ್ಲಿ ಬ್ರಿಟನ್‌ ಆಟಗಾರ್ತಿಯರು 0-2 ಮುನ್ನಡೆ ಸಾಧಿಸಿದ್ದಾಗ, ನಮ್ಮ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿ 3-2 ಮುನ್ನಡೆ ಕಂಡುಕೊಂಡಿತ್ತು. ದ್ವಿತೀಯಾರ್ಧದಲ್ಲೂ ಉತ್ತಮ ಪ್ರತಿರೋಧ ತೋರಿದರಾದರೂ ಗೆಲುವು ಸಾಧಿಸಲಾಗಲಿಲ್ಲ. ಆದರೆ, ನಮ್ಮ ಮಹಿಳೆಯರು ನೀಡಿದ ಒಟ್ಟಾರೆ ಪ್ರದರ್ಶನ ನನಗೆ ತೃಪ್ತಿ ತಂದಿದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಬಾರಿಯ ಒಲಿಂಪಿಕ್ಸ್‌ ನಲ್ಲಿ ಐತಿಹಾಸಿಕ ಸಾಧನೆ ಮಾಡಿ, ಸಮಸ್ತ ಭಾರತೀಯರ ಮನ ಗೆದ್ದಿದ್ದೇವೆ. ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ.

– ಭವಿಷ್ಯದಲ್ಲಿ ಮಹಿಳಾ ತಂಡದಿಂದ ಯಾವ ಮಟ್ಟದ ಪ್ರದರ್ಶನ ನಿರೀಕ್ಷಿಸಬಹುದು?
ನಮ್ಮ ವನಿತೆಯರಲ್ಲಿ ಕೆಚ್ಚಿದೆ, ಅಪಾರವಾದ ಆತ್ಮಶಕ್ತಿಯಿದೆ. ಅದೆಲ್ಲವೂ ಒಲಿಂಪಿಕ್ಸ್‌ನ ಮೂಲಕ ಜಗಜ್ಜಾಹೀರಾಗಿದೆ. ಆ ಶಕ್ತಿಗಳನ್ನು ನಾವೀಗ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ಮುಂಬರುವ ಕ್ರೀಡಾಕೂಟಗಳಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದೆ.

– ಕರ್ನಾಟಕದ ಯಾವುದೇ ಆಟಗಾರ್ತಿಯರು ಆಯ್ಕೆಯಾಗಿರಲಿಲ್ಲ. ತಂಡದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆಯೇ?
ಹಾಗೇನಿಲ್ಲ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಅತ್ಯುತ್ತಮ ಹಾಕಿ ಕ್ರೀಡಾಳುಗಳಿದ್ದಾರೆ. ರಾಷ್ಟ್ರೀಯ ಕ್ರೀಡೆಗೆ ಆವಾಸಸ್ಥಾನವಾಗಿ ನಮ್ಮ ಕೊಡಗು ರೂಪುಗೊಂಡಿದೆ. ಕನಿಷ್ಠ ಒಂದಿಬ್ಬರಾದರೂ ಒಲಿಂಪಿಕ್ಸ್‌ಗೆ ಆಯ್ಕೆಯಾಗುತ್ತಾರೆಂಬ ಭರವಸೆಯಿತ್ತು. ಆದರೆ ಇವರ ಅನುಪಸ್ಥಿತಿ ತಂಡದ ಮೇಲೆ ಒಟ್ಟಾರೆ ನಕಾರಾತ್ಮಕ ಪರಿಣಾಮ ಬೀರಿತು ಎನ್ನಲಾಗದು.

– ಪ್ರಧಾನಿ ಮೋದಿ ಹಾಗೂ ನವೀನ್‌ ಪಟ್ನಾಯಕ್‌ ಅವರು ಕೊಟ್ಟ ಬೆಂಬಲ ಹೇಗಿತ್ತು?

Advertisement

ಅವರಿಬ್ಬರ ಪ್ರೋತ್ಸಾಹವನ್ನು ಎಂದೆಂದಿಗೂ ಮರೆಯಲಾಗದು. ಸೆಮಿಫೈನಲ್‌ಗೆ ಕಾಲಿಟ್ಟ ಸಾಧನೆ ಮಾಡಿದಾಗ ಮೋದಿಯವರು ಫೋನ್‌ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕಂಚಿನ ಪಂದ್ಯವನ್ನು ಸೋತಾಗ ತಂಡಕ್ಕೆ ಆತ್ಮಸ್ಥೈರ್ಯ ತುಂಬಿದರು.
ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಪ್ರೋತ್ಸಾಹವನ್ನೂ ನಾವು ಮರೆಯಬಾರದು. ತಂಡಕ್ಕೆ ಪ್ರಾಯೋಜಕತ್ವ ನೀಡುವುದರಿಂದ ಹಿಡಿದು, ಪ್ರತಿಯೊಂದು ಸೋಲು-ಗೆಲುವಿನಲ್ಲೂ ನಮ್ಮನ್ನು ಹುರಿದುಂಬಿಸಿ ಮುಂದಕ್ಕೆ ಕಳುಹಿಸುತ್ತಿದ್ದಾರೆ. ಇಬ್ಬರಿಗೂ ನಾವು ಆಭಾರಿಯಾಗಿದ್ದೇವೆ.

– ಭಾರತೀಯ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?
ಆರಂಭದಿಂದಲೂ ನಮ್ಮನ್ನು ಬೆಂಬಲಿಸಿದ ಭಾರತೀಯ ಜನತೆ, ಮಾಧ್ಯಮಗಳಿಗೆ ಕೃತಜ್ಞತೆಗಳು. ಅವರ ಉತ್ತೇಜನವೇ ನಮ್ಮನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ನಿಮ್ಮ ಈ ಪ್ರೋತ್ಸಾಹದ ನುಡಿಗಳು ಕೇವಲ ನಮಗಷ್ಟೇ ಅಲ್ಲ, ನಿಮ್ಮ ಮಕ್ಕಳ ಕ್ರೀಡೋತ್ಸಾಹಕ್ಕೂ ಸಿಗಲಿ ಎಂದು ದೇಶದ ಎಲ್ಲ ಪೋಷಕರಲ್ಲಿ ಮನವಿ ಮಾಡಲು ಇಚ್ಛಿಸುತ್ತೇನೆ. ವೈದ್ಯರಾಗಿ, ಎಂಜಿನಿಯರ್‌ ಆಗಿ ಎಂದಷ್ಟೇ ಹೇಳುವ ಬದಲು ಅವರಲ್ಲಿ ಕ್ರೀಡಾಸಕ್ತಿಯಿದ್ದರೆ ಅದನ್ನು ಖಂಡಿತವಾಗಿಯೂ ಪ್ರೋತ್ಸಾಹಿಸಿ. ಕ್ರೀಡಾಳುಗಳಾಗಿ ಅವರು ವಿಶ್ವ ತಾರೆಯರಾಗಿ ಮಿಂಚುವ ಅವಕಾಶಗಳೂ ಇವೆ ಎಂದು ಹೇಳಬಯಸುತ್ತೇನೆ.

– ಚೇತನ್‌ ಓ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next