ಇಂಚಿಯಾನ್: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 5 ಪಂದ್ಯಗಳ ಹಾಕಿ ಸರಣಿಯ ಮಂಗಳವಾರದ ಪಂದ್ಯದಲ್ಲಿ ಭಾರತದ ವನಿತಾ ಹಾಕಿ ತಂಡವು ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕೊರಿಯಾ ತಂಡ ಎರಡನೇ ಪಂದ್ಯವನ್ನು ಉಳಿಸಿಕೊಳ್ಳಲು ಸಾಕಷ್ಟು ಸ್ಪರ್ಧೆ ನೀಡಿದರೂ ಪಂದ್ಯ ತನ್ನ ವಶವಾಗಿಸುವಲ್ಲಿ ಭಾರತ ಯಶಸ್ವಿಯಾಯಿತು.
ಭಾರತ ಪರ ಪೂನಂ ರಾಣಿ 6ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, ನಾಯಕಿ ರಾಣಿ 27ನೇ ನಿಮಿಷದಲ್ಲಿ ಮತ್ತು ಗುರ್ಜಿತ್ ಕೌರ್ 32ನೇ ನಿಮಿಷದಲ್ಲಿ ಗೋಲು ಸಿಡಿಸಿ ಕೊರಿಯಾ ತಂಡದೆದುರು ವಿಜಯದ ನಗೆ ಬೀರಿದರು. ಕೊರಿಯಾ ಪರ ಯೂರಿಮ್ ಲೀ 10ನೇ ನಿಮಿಷದಲ್ಲಿ ಮತ್ತು ಜುಂಜನ್ ಸೀ 31ನೇ ನಿಮಿಷದಲ್ಲಿ ಒಂದೊಂದು ಗೋಲು ಬಾರಿಸಿ ಎದುರಾಳಿ ತಂಡಕ್ಕೆ ಸ್ಪರ್ಧೆಯೊಡ್ಡಿದರು.
ಸೋಮವಾರ ನಡೆದ ಮೊದಲ ಪಂದ್ಯ ಗೆದ್ದು ಕೊರಿಯಾದೆದುರು 1-0 ಮುನ್ನಡೆಯಲ್ಲಿದ್ದ ಭಾರತ ಮಂಗಳವಾರ ಪಂದ್ಯಾರಂಭದಲ್ಲಿ ಆತ್ಮವಿಶ್ವಾಸದಲ್ಲೇ ಆಡಿತು. ಪಂದ್ಯ ಮುಂದುವರಿದಂತೆ ಭಾರತದ ವನಿತೆಯರು ಆಕ್ರಮಣಕಾರಿ ದಾಳಿ ನಡೆಸಲಾರಂಭಿಸಿದರು. ಇದರ ಫಲವಾಗಿ ಪೂನಂ ರಾಣಿಯವರಿಂದ ಮೊದಲ ಗೋಲು ಸಿಡಿಯಿತು. ಅನಂತರ ರಾಣಿ ಮತ್ತು ಕೌರ್ ಅವರಿಂದ ಸಿಡಿದ ಗೋಲುಗಳು ಎದುರಾಳಿಯಿಂದ ಅಂತರ ಕಾಯ್ದುಕೊಳ್ಳುವಲ್ಲಿ ನೆರವಾದವು.
ದಕ್ಷಿಣ ಕೊರಿಯಾ ತಂಡವೂ ಎದುರಾಳಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿತು. ಪಂದ್ಯದ ಆರಂಭದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳ ಅವಕಾಶ ಅದಕ್ಕೆ ದೊರೆತಿತ್ತು. ಅವುಗಳಲ್ಲಿ ಒಂದನ್ನು ಯೂರಿಮ್ ಲೀ ಗೋಲಾಗಿ ಪರಿವರ್ತಿಸಿದರು. ಆ ಬಳಿಕವೂ ಕೊರಿಯಾಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಭಾರತೀಯ ವನಿತೆಯರು ಗೋಲಿಗೆ ತಡೆಯೊಡ್ಡಿದರು.
ಇತ್ತಂಡಗಳ ನಡುವಿನ ಮೂರನೇ ಪಂದ್ಯ ಮಾ. 8ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ತನ್ನದಾಗಿಸಿಕೊಳ್ಳಲಿದೆ.