ನವದೆಹಲಿ: ಕಳೆದ ವರ್ಷ ಪ್ರಧಾನಿ ಮೋದಿ ದೇಶದ ಮೊದಲ ಗೊಂಬೆಗಳ ಉತ್ಸವವನ್ನು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಭಾರತದ ಗೊಂಬೆಗಳು-ಆಟಿಕೆಗಳ ಉತ್ಪಾದನೆಯಲ್ಲೂ ನಾವು ಆತ್ಮನಿರ್ಭರ ಸಾಧಿಸಬೇಕು. ನಮ್ಮ ಗೊಂಬೆಗಳು- ಆಟಿಕೆಗಳು ಇತರ ದೇಶಗಳಿಗೆ ರಫ್ತಾಗುವಂತಾಗಿ, ನಾವು ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಹಾಕಬೇಕು ಎಂದು ಕರೆ ನೀಡಿದ್ದರು.
ಅಲ್ಲದೆ, ತಮ್ಮ ಭಾಷಣದಲ್ಲಿ ಭಾರತದ ನಾನಾ ಪ್ರಾಂತ್ಯಗಳಲ್ಲಿರುವ ಬೊಂಬೆಗಳ ಮಹತ್ವವನ್ನು ಉಲ್ಲೇಖಿಸಿದ್ದ ಅವರು ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳ ಸಾಂಸ್ಕೃತಿಕ ಮಹತ್ವದ ಬಗ್ಗೆಯೂ ಹೇಳಿದ್ದರು.
ಅವರ ಮಾತುಗಳು ಸಾಕಾರವಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಪುರಾತನ ಸಂಪ್ರದಾಯ-ಸಂಸ್ಕೃತಿಗಳನ್ನು ಬಿಂಬಿಸುವ ಆಟಿಕೆಗಳು ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಖುಷಿಯ ಸಂಗತಿಯೆಂದರೆ ಗೊಂಬೆಗಳನ್ನು ಭಾರತ ಆಮದು ಮಾಡಿಕೊಳ್ಳುವ ಪ್ರಮಾಣ ಕುಸಿದಿದೆ. ಇದು ನೇರವಾಗಿ ಚೀನಕ್ಕೆ ನೀಡಿದ ಹೊಡೆತವಾಗಿದೆ.
ಅಧಿಕೃತ ಅಂಕಿಸಂಖ್ಯೆಗಳ ಪ್ರಕಾರ ಭಾರತದ ಆಮದು ಶೇ. 70ರಷ್ಟು ಕುಸಿದಿದೆ. ಅದೇ ರಫ್ತು ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಶೇ. 61.38ರಷ್ಟು ಏರಿದೆ. 2018ರಲ್ಲಿ ಭಾರತ 371 ಮಿಲಿಯನ್ ಡಾಲರ್ (2,951 ಕೋ.ರೂ.) ಮೊತ್ತದ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. 2021-22ರಲ್ಲಿ ಅದು 110 ಮಿಲಿಯನ್ ಡಾಲರ್‌ಗಳಿಗೆ (875 ಕೋಟಿ ರೂ.) ಕುಸಿಯಿತು.
ರಫ್ತು ಹೆಚ್ಚಳ: ಭಾರತೀಯ ಆಟಿಕೆಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶರದ್ ನೀಡಿದ ಮಾಹಿತಿಗಳ ಪ್ರಕಾರ; 2018-19ರಲ್ಲಿ ಭಾರತದ ಆಟಿಕೆಗಳ ರಫ್ತು ಪ್ರಮಾಣ 202 ಮಿಲಿಯನ್ ಡಾಲರ್ (1,600 ಕೋಟಿ ರೂ.) ಗಳಿತ್ತು. ಪ್ರಸ್ತುತ ಅದರ ಪ್ರಮಾಣ 326 ಮಿಲಿಯನ್ ಡಾಲರ್ (2,553 ಕೋ.ರೂ.) ಗಳಿಗೇರಿದೆ!
ಇದು ಭಾರತದ ಆಟಿಕೆಗಳಿಗೆ ವಿದೇಶದಲ್ಲೂ ಏರಿದ ಬೇಡಿಕೆಯನ್ನು ತೋರಿಸುತ್ತದೆ.