Advertisement

Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!

01:52 AM Dec 03, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯದ ಮೇಲಿನ ಹಿಂಸಾಚಾರ, ದಾಳಿ ಹೆಚ್ಚಿರುವಂತೆಯೇ ಭಾರತದಿಂದ ಢಾಕಾಕ್ಕೆ ತೆರಳಿದ್ದ ಹಿಂದೂ ಪ್ರವಾಸಿಗರೊಬ್ಬರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಭಾರತದಿಂದ ಯಾರೂ ಬಾಂಗ್ಲಾಕ್ಕೆ ಕಾಲಿಡಕೂಡದು ಎಂದು ದಾಳಿಕೋರರು ಬೆದರಿಸಿದ್ದಾರೆ ಎಂದೂ ತಿಳಿದುಬಂದಿದೆ.

Advertisement

ಪ. ಬಂಗಾಲದ ಕೋಲ್ಕತಾ ನಿವಾಸಿ ಸಾಯನ್‌ ಘೋಷ್‌ ಅವರು ನ. 23ರಂದು ಢಾಕಾದಲ್ಲಿರುವ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದರು. ತಾನು ನ. 26ರಂದು ಸ್ನೇಹಿತನೊಂದಿಗೆ ಐಸ್‌ಕ್ರೀಂ ಪಾರ್ಲರ್‌ಗೆ ತೆರಳಿದ್ದ ವೇಳೆ ಹಲವಾರು ಮುಸ್ಲಿಂ ಯುವಕರು ಸುತ್ತುವರಿದು ದಾಳಿ ನಡೆಸಿದರು ಎಂದು ಪ್ರಸ್ತುತ ಸ್ವದೇಶಕ್ಕೆ ಹಿಂದಿರುಗಿರುವ ಘೋಷ್‌ ಹೇಳಿದ್ದಾರೆ.

“ನಾನು ಭಾರತೀಯ ಮತ್ತು ಹಿಂದೂ ಎಂದು ತಿಳಿಯು ತ್ತಿದ್ದಂತೆ ನಮ್ಮನ್ನು ರಸ್ತೆಗೆ ಎಳೆತಂದು ಹಲ್ಲೆ ನಡೆಸಿ, ಹಣ, ಮೊಬೈಲ್‌ ಎಲ್ಲವನ್ನೂ ದೋಚಿದ್ದಾರೆ. ಭಾರತೀಯರು ಬಾಂಗ್ಲಾಗೆ ಬರುವ ಅಗತ್ಯ ಇಲ್ಲ ಎಂದು ಎಚ್ಚರಿಸಿದ್ದಾರೆ. ಘಟನೆಯಲ್ಲಿ ನನ್ನ ತಲೆ ಮತ್ತು ಮುಖಕ್ಕೆ ಗಾಯಗಳಾಗಿದ್ದು, ದೂರು ನೀಡಿದರೆ ಅಲ್ಲಿನ ಪೊಲೀಸರು ದೂರು ಸ್ವೀಕರಿಸಲಿಲ್ಲ.

ಆಸ್ಪತ್ರೆಯಲ್ಲೂ ಕೇವಲ ಪ್ರಥಮ ಚಿಕಿತ್ಸೆ ಮಾತ್ರ ನೀಡಿದರು’ ಎಂದು ಘೋಷ್‌ ಆರೋಪಿಸಿದ್ದಾರೆ. ಬಾಂಗ್ಲಾದಲ್ಲಿ ಭಾರತೀಯ ಪ್ರವಾಸಿಗರಿಗೆ ಸುರಕ್ಷೆ ಇಲ್ಲ, ಹಾಗಾಗಿ ಯಾರೂ ಅಲ್ಲಿಗೆ ಹೋಗದಿರುವುದೇ ಸೂಕ್ತ ಎಂದಿದ್ದಾರೆ.

ಸಾವಿರ ಸಂತರ ಪ್ರತಿಭಟನೆ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್‌ ಅವರ ಬಿಡುಗಡೆಗೆ ಆಗ್ರಹಿಸಿ ಒಂದು ಸಾವಿರಕ್ಕೂ ಅಧಿಕ ಸಂತರು ಸೋಮವಾರ ಪಶ್ಚಿಮ ಬಂಗಾಲದ ಉತ್ತರ 24 ಪರಗಣದ ಪೆಟ್ರಾಪೋಲ್‌ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತೀಯ ಸಂತ ಸಮಿತಿ ಈ ಪ್ರತಿಭಟನೆ ಹಮ್ಮಿಕೊಂಡಿತ್ತು.

Advertisement

ಬಾಂಗ್ಲಾ ಪರಿಸ್ಥಿತಿಯ ಬಗ್ಗೆ ಭಾರತದ ಸ್ಪಷ್ಟ ನಿಲುವು ಏನು ಎಂಬ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು. ಬಾಂಗ್ಲಾದಲ್ಲಿ ತೊಂದರೆಗೆ ಈಡಾಗಿರುವ ಭಾರತೀಯರನ್ನು ಕೂಡಲೇ ರಕ್ಷಿಸಿ ದೇಶಕ್ಕೆ ಮರಳಿ ಕರೆ ತರಬೇಕು.
-ಮಮತಾ ಬ್ಯಾನರ್ಜಿ, ಪ. ಬಂಗಾಲ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next