ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಭಾರತದ ಮೂವರು ಈಜುಪಟುಗಳಿಗೆ ದುಬಾೖಯಲ್ಲಿ ಎರಡು ತಿಂಗಳ ಅಭ್ಯಾಸ ನಡೆಸಲು ಸಾಯ್ ವ್ಯವಸ್ಥೆ ಮಾಡಿದೆ. ವೀರಧವಳ್ ಖಾಡೆ, ಶ್ರೀಹರಿ ನಟರಾಜನ್ ಮತ್ತು ಕುಶಾಗ್ರ ರಾವತ್ ಈ ಅವಕಾಶ ಪಡೆದಿದ್ದಾರೆ.
ಈ ಮೂವರು ದುಬಾೖನ “ಅಕ್ವಾ ನೇಶನ್ ಸ್ವಿಮ್ಮಿಂಗ್ ಅಕಾಡೆಮಿ’ಯಲ್ಲಿ ಇಬ್ಬರು ತರಬೇತುದಾರರ ಉಸ್ತುವಾರಿಯಲ್ಲಿ ಅಭ್ಯಾಸ ನಡೆಸುವರು. ಪ್ರಧಾನ ಕೋಚ್ ಆಗಿ ಎ.ಸಿ. ಜಯರಾಮನ್ ಆಯ್ಕೆಯಾಗಿದ್ದಾರೆ. ಸಹಾಯಕ ಕೋಚ್ ಪ್ರದೀಪ್ ಎಸ್. ಕುಮಾರ್ ಈಗಾಗಲೇ ದುಬಾೖಯಲ್ಲಿದ್ದಾರೆ. ಪ್ರತಿಯೋರ್ವ ಸ್ವಿಮ್ಮರ್‌ಗೂ ತಲಾ 35 ಲಕ್ಷ ರೂ. ವೆಚ್ಚವಾಗಲಿದೆ ಎಂದು ಸಾಯ್ ತಿಳಿಸಿದೆ.
ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್ಐ) ಶೀಘ್ರದಲ್ಲೇ ಇವರೆಲ್ಲರಿಗೆ ವೀಸಾ ವ್ಯವಸ್ಥೆ ಮಾಡಲಿದೆ. ಆಗಸ್ಟ್ ಕೊನೆಯ ವಾರದಲ್ಲಿ ಇವರೆಲ್ಲ ದುಬಾೖಗೆ ಪ್ರಯಾಣಿಸುವ ಸಾಧ್ಯತೆ ಇದೆ. ಕೋವಿಡ್ ನಿಂದಾಗಿ ಭಾರತದ ಈಜುಕೊಳಗಳು ಅಭ್ಯಾಸಕ್ಕೆ ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ಸಾಯ್ ದುಬಾೖಯನ್ನು ಆಯ್ಕೆ ಮಾಡಿಕೊಂಡಿದೆ.
ಖಾಡೆ 50 ಮೀ. ಫ್ರೀಸ್ಟೈಲ್‌ನಲ್ಲಿ, ನಟರಾಜನ್ 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು ರಾವತ್ 400 ಮೀ., 800 ಮೀ. ಹಾಗೂ 1,500 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಉಳಿದ ಮೂವರು ಈಜುಪಟುಗಳಲ್ಲಿ ಸಾಜನ್ ಪ್ರಕಾಶ್ ಥಾಯ್ಲೆಂಡ್‌ನಲ್ಲಿ, ಆರ್ಯನ್ ಮಾಖೀಜಾ ಮತ್ತು ಅದ್ವೆ„ತ್ ಪೆಜ್ ಯುಎಸ್‌ಎಯಲ್ಲಿ ಅಭ್ಯಾಸ ಮುಂದುವರಿಸಲಿದ್ದಾರೆ.
ಹೊಸ ಸ್ಫೂರ್ತಿ ಲಭಿಸಿದೆ
“ಐದು ತಿಂಗಳ ಬಳಿಕ ಈಜುಕೊಳಕ್ಕೆ ಧುಮುಕಲು ಕಾದು ನಿಂತಿದ್ದೇನೆ. ಕ್ಯಾಂಪ್ ಆರಂಭಗೊಳ್ಳಲಿದೆ ಎಂಬ ಸುದ್ದಿ ಕಿವಿಗೆ ಬಿದ್ದೊಡನೆಯೇ ರೋಮಾಂಚನಗೊಂಡಿದ್ದೇನೆ, ಇದರಿಂದ ಹೊಸ ಸ್ಫೂರ್ತಿ ಪಡೆದಂತಾಗಿದೆ’ ಎಂದು ಕುಶಾಗ್ರ ರಾವತ್ ಪ್ರತಿಕ್ರಿಯಿಸಿದ್ದಾರೆ.