Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾ ಸಾಧನೆ..

07:58 AM Feb 09, 2021 | Team Udayavani |

ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತ ತನ್ನದೇ ಆಗಿರುವ ಛಾಪನ್ನು ಮೂಡಿಸುತ್ತಾ ಬಂದಿದೆ. ಕ್ರಿಕೆಟ್, ಬ್ಯಾಡ್ಮಿಂಟನ್, ಹಾಕಿ, ಅತ್ಲೆಟಿಕ್ಸ್, ಬಾಕ್ಸಿಂಗ್ ಸೇರಿದಂತೆ ಇನ್ನೂ ಹಲವಾರು ಕ್ರೀಡಾ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಕೆಚ್ಚೆದೆಯ ಪ್ರದರ್ಶನವನ್ನು ನೀಡುವ ಮೂಲಕ ವಿಶ್ವ ಕ್ರೀಡಾಕೂಟಗಳಲ್ಲಿ ಭಾರತದ ತ್ರಿವರ್ಣ ಅರಳುವಂತೆ ಮಾಡಿದ್ದಾರೆ. ಆದರೆ ಭಾರತದಲ್ಲಿರುವ ಜನಸಂಖ್ಯೆಗೆ ಹೋಲಿಸಿದಲ್ಲಿ ಮತ್ತು ಇಲ್ಲಿನ ವೈವಿಧ್ಯತೆಗಳಿಗೆ ಹೋಲಿಸಿದಾಗ ವಿಶ್ವಮಟ್ಟದಲ್ಲಿ ಭಾರತದ ಕ್ರೀಡಾ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗಿರುವ ಕಹಿ ಸತ್ಯವಾಗಿದೆ.

Advertisement

ಆದರೆ ಈ ಎಲ್ಲಾ ಮಿತಿಗಳ ನಡುವೆಯೂ ಹಲವಾರು ದಶಕಗಳಿಂದ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಮತ್ತು ಪ್ರತಿಷ್ಠಿತ ಟೂರ್ನಮೆಂಟ್ ಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಎತ್ತಿ ಹಿಡಿದಿರುವ ಮತ್ತು ಎತ್ತಿಹಿಡಿಯುತ್ತಿರುವ ಮಹಾನ್ ಕ್ರೀಡಾಪಟುಗಳ ಕುರಿತಾಗಿ ನೋಡುವುದಾದರೆ…

ಧ್ಯಾನ್ ಚಂದ್ ರಿಂದ ಹಿಡಿದು ಇತ್ತೀಚಿನ ಹಿಮಾದಾಸ್ ವರೆಗೆ, ನಾರ್ಮನ್ ಪ್ರಿಚರ್ಡ್ ರಿಂದ ಪಿ ವಿ ಸಿಂಧೂವರೆಗೆ ಕ್ರೀಡಾ ಲೋಕದಲ್ಲಿ ಭಾರತದ ತ್ರಿವರ್ಣ ಧ್ವಜ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಿದೆ. ಮಣ್ಣಿನ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಹಾಕಿ, ಕ್ರಿಕೆಟ್, ಸ್ನೂಕರ್, ಟೆನ್ನಿಸ್, ಬ್ಯಾಡ್ಮಿಂಟನ್ ಗಳಲ್ಲಿ ಭಾರತ ಸಾಧನೆ ಪ್ರಮುಖವಾದುದು.

ವಿಶ್ವ ಮಟ್ಟದಲ್ಲಿ ಕ್ರೀಡಾ ಸಾಧನೆಯನ್ನು ಪ್ರಮುಖವಾಗಿ ಅಳೆಯುವುದು ಒಲಿಂಪಿಕ್ಸ್ ಮೂಲಕ. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಮಹಾಕೂಟದಲ್ಲಿ ಭಾರತವು ಭಾಗವಹಿಸುತ್ತದೆ. ಭಾರತ ಒಲಿಂಪಿಕ್ಸ್ ಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು 1900 ರಲ್ಲಿ. ಪ್ಯಾರಿಸ್ ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತದಿಂದ ಪ್ರತಿನಿಧಿಸಿದ್ದು ಓರ್ವ ಮಾತ್ರ ಅವರೇ ನಾರ್ಮನ್ ಪ್ರಿಚರ್ಡ್. ವಿಶೇಷವೆಂದರೆ ನಾರ್ಮನ್ ಎರಡು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 1928ರಿಂದ 1952ರವರೆಗೆ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಸತತ ಚಿನ್ನಕ್ಕೆ ಗೋಲ್ ಹೊಡೆದಿತ್ತು. ಹಾಕಿ ದಂತಕಥೆ ಧ್ಯಾನ್ ಚಾಂದ್ ನೆರವಿನಿಂದ ಭಾರತ ವಿಶ್ವ ಹಾಕಿಯ ಅಧಿಪತಿಯಾಗಿ ಮೆರೆದಾಡಿದ್ದು ಈಗ ಇತಿಹಾಸ. ಹೀಗೆ ಆರಂಭವಾದ ಭಾರತದ ಒಲಿಂಪಿಕ್ಸ್ ಸಾಧನೆ ಮುಂದೆ ಸ್ವಲ್ಪ ನಿರಾಶಾದಾಯಕವಾಗಿ ಮುಂದುವರಿಯಿತು ಎನ್ನಬಹುದು.

ಇತ್ತೀಚಿನ ಹಲವು ಒಲಿಂಪಿಕ್ಸ್ ನಲ್ಲಿ ಭಾರತ ಸಾಧನೆ ಅಷ್ಟಕಷ್ಟೇ ಅನ್ನಬಹುದು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ಚಿನ್ನಕ್ಕೆ ಗುರಿಯಿಟ್ಟಿದ್ದು ಬಿಟ್ಟರೆ,  ಕೆಲವು ಕೂಟಗಳಲ್ಲಿ ಬೆಳ್ಳಿ- ಕಂಚು ಪದಕ ಗೆದ್ದ ಸಾಧನೆಯನ್ನು ನಮ್ಮ ಕ್ರೀಡಾಪಟುಗಳು ಮಾಡಿದ್ದರೆ.

Advertisement

ಕ್ರೀಡಾ ಲೋಕದಲ್ಲಿ ಭಾರತದ ಸಾಧನೆ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಎಂಬಂತೆ ಹೆಚ್ಚುತ್ತಿದೆ. ಅದು ಕ್ರಿಕೆಟ್ ಇರಲಿ, ಟೆನ್ನಿಸ್ ಇರಲಿ ಅಥವಾ ಇತರ ಅತ್ಲೆಟಿಕ್ ಕ್ರೀಡೆಯೇ ಇರಲಿ. ಭಾರತದಲ್ಲಿ ಅತೀ ಹೆಚ್ಚು ಇಷ್ಟಪಡುವ ಕ್ರಿಕೆಟ್ ನಲ್ಲಿ ಕೂಡಾ ಟೀಂ ಇಂಡಿಯಾ ಪಾರುಪತ್ಯ ಸಾಧಿಸಿದ್ದು, ದೇಶ ವಿದೇಶಗಳಲ್ಲಿ ಜಯಗಳಿಸುತ್ತಿದೆ.

ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ತಂಡ ಕೊನೆಯದಾಗಿ ಒಲಿಂಪಿಕ್ಸ್ ಚಿನ್ನ ಗೆದ್ದಿದ್ದು 1980ರಲ್ಲಿ. ಹಾಕಿಯಲ್ಲಿ ಕಳೆದು ಹೋದ ಗತವೈಭವವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿರುವ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಮುಂದಿನ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿವೆ.

ಟೆನ್ನಿಸ್ ನಲ್ಲಿ ಭಾರತದ ಸಾಧನೆ ಕಡಿಮೆಯೇನಲ್ಲ. ಸಾನಿಯಾ ಮಿರ್ಜಾ, ಮಹೇಶ್ ಭೂಪತಿ, ಲಿಯಾಂಡರ್ ಪೇಸ್, ಕರ್ನಾಟಕದ ರೋಹನ್ ಬೋಪಣ್ಣ ಮುಂತಾದವರು ಟೆನ್ನಿಸ್ ಕೋರ್ಟ್ ನಲ್ಲಿ ಭಾರತದ ಶಕ್ತಿಯನ್ನು ತೋರಿದವರು. ಇತ್ತೀಚೆಗೆ ನಡೆದ ಅಮೇರಿಕನ್ ಓಪನ್ ಕೂಟದಲ್ಲಿ ರೋಜರ್ ಫೆಡರರ್ ಎದುರು ಭಾರತದ ಯುವ ಆಟಗಾರ ಸುಮಿತ್ ಪಂಗಾಲ್ ತೋರಿದ ಸಾಹಸ ಪ್ರದರ್ಶನ ಕಡಿಮೆಯೇನಲ್ಲ.

ಬ್ಯಾಡ್ಮಿಂಟನ್ ಲೋಕದಲ್ಲಿ ಭಾರತ ಸದ್ಯದ ಫೇವರೇಟ್ ದೇಶ. ಪಿ ವಿ ಸಿಂಧೂ, ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್, ಚಿರಾಗ್ ಶೆಟ್ಟಿ ಮುಂತಾದವರು ಸದ್ಯದ ವಿಶ್ವದರ್ಜೆಯ ಬ್ಯಾಡ್ಮಿಂಟನ್ ಆಟಗಾರರು. ಈ ಹಿಂದೆ ಪುಲ್ಲೇಲ ಗೋಪಿಚಂದ್, ಪ್ರಕಾಶ್ ಪಡುಕೋಣೆ ಏರಿದಂತಹ ಎತ್ತರವನ್ನು ಇವರುಗಳು ಏರುತ್ತಿದ್ಧಾರೆ. ಕಳೆದ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಪಿ ವಿ ಸಿಂಧೂ ಮುಂದಿನ ಬಾರಿ ಚಿನ್ನಕ್ಕೆ ಗುರಿ ಮುತ್ತಿಕ್ಕುವುದು ಖಂಡಿತ.

ಕುಸ್ತಿ- ಬಾಕ್ಸಿಂಗ್ ಕ್ಷೇತ್ರದಲ್ಲೂ ಭಾರತದ ಸಾಧನೆ ಅಧ್ವಿತೀಯ. ಮೂರು ಮಕ್ಕಳ ತಾಯಿ ಮೇರಿ ಕೋಮ್ ಬಾಕ್ಸಿಂಗ್ ಕಿಕ್ ಈಗಲೂ ಅಷ್ಟೇ ಪರಿಣಾಮಕಾರಿ. ಯೋಗೀಶ್ವರ್ ದತ್, ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್, ಪೋಗಟ್ ಸಹೋದರಿಯರು ಹೀಗೆ ಕುಸ್ತಿ ಮತ್ತು ಬಾಕ್ಸಿಂಗ್ ನಲ್ಲಿ ಭಾರತದ ಸಾಧನೆ ಅಪಾರ.

ಭಾರತದ ಫುಟ್ ಬಾಲ್ ದಂತಕಥೆಗಳಾದ ಬೈಚುಂಗ್ ಭುಟಿಯಾ ಮತ್ತು ಸುನೀಲ್ ಛೆತ್ರಿ ಹಲವಾರು ಸಾಧನೆ ಮಾಡಿದ್ದಾರೆ. ಆದರೆ ಸರಿಯಾದ ಬೆಂಬಲ ಸಿಗದೆ ಪರದಾಡಿದವರು. ಸುನೀಲ್ ಛೆತ್ರಿ ರಾಷ್ಟ್ರೀಯ ತಂಡದ ಪರ ಅತೀ ಹೆಚ್ಚು ಗೋಲ್ ಹೊಡೆದ ಎರಡನೇ ಆಟಗಾರ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಶ್ವ ಫುಟ್ ಬಾಲ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೊ.

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಸ್ಟ್ರಿಂಟರ್ ಹಿಮಾ ದಾಸ್, ಸ್ನೂಕರ್ ಪಟು ಪಂಕಜ್ ಅಡ್ವಾಣಿ, ಜಿಮ್ನಾಸ್ಟಿಕ್ ಪ್ರತಿಭೆ ದೀಪಾ ಕರ್ಮಾಕರ್, ಮಹಿಳಾ ಕ್ರಿಕೆಟ್ ನ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್, ಓಟಗಾರ ಮೊಹಮ್ಮದ್ ಅನಾಸ್, ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಕ್ರೀಡಾಪಟುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇತರ ಕೂಟಗಳಲ್ಲಿ ಭಾರತವೆಷ್ಟೇ ಸಾಧನೆ ಮಾಡಿದರೂ ಒಲಿಂಪಿಕ್ಸ್ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಸಾಧನೆ ಕಡಿಮೆಯೇ. ಭಾರತದಂತಹ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ದೇಶಕ್ಕೆ ಇದು ಕಷ್ಟದ ಕೆಲಸವೇನಲ್ಲ. ಆದರೆ ಬರ್ಮುಡಾ, ಐವರಿ ಕೋಸ್ಟ್, ಪರುಗ್ವೆ, ಸೆನಗಲ್ ಮುಂತಾದ ದೇಶಗಳಿಗೆ ಹೋಲಿಸಿದಾಗ ಒಲಂಪಿಕ್ಸ್ ಅಂಗಳದಲ್ಲಿ ನಮ್ಮ ಸಾಧನೆ ಅಷ್ಟಕಷ್ಟೇ.

ಕ್ರಿಕೆಟ್ ಹೊರತಾದ ಕ್ರೀಡೆಗಳಿಗೆ ಭಾರತದಲ್ಲಿ ಪ್ರೋತ್ಸಾಹದ ಕೊರತೆಯಿದೆ. ಸರಿಯಾದ ಗುಣಮಟ್ಟದ ತರಬೇತಿಯ ಕೊರತೆಯಿದೆ. ವಿಶ್ವ ಕೂಟಗಳಿಗೆ ಅರ್ಹತೆ ಪಡೆದ ಕ್ರೀಡಾಪಟುಗಳಿಗೆ ಸರಿಯಾದ ಹಣಕಾಸಿನ ನೆರವು ಸಿಗುತ್ತಿಲ್ಲ. ಹೀಗಾಗಿ ಪ್ರತಿಭಾನ್ವಿತರು ಕೂಡಾ ಅವಕಾಶವಂಚಿತರಾಗುತ್ತಾರೆ. ಸರಕಾರ ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಂಡರೆ ಒಲಿಂಪಿಕ್ಸ್ ನಂತಹ ಕೂಟಗಳಲ್ಲಿ ಕೂಡ ಭಾರತದ ಕ್ರೀಡಾಪಟುಗಳು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next