Advertisement

ಗುರುತ್ವ ದಾಟಿ ಅನಂತದೆಡೆಗೆ ವ್ಯೋಮ ಗುರು

06:05 AM Jul 25, 2017 | Team Udayavani |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ಕೊಟ್ಟ ಪ್ರೊ. ಉಡುಪಿ ರಾಮಚಂದ್ರರಾವ್‌ (85) ಸೋಮವಾರ ಬೆಳಗಿನಜಾವ ಕೊನೆ ಉಸಿರೆಳೆದರು.

Advertisement

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅದರ ಉಪಗ್ರಹ ಕಾರ್ಯಕ್ರಮಕ್ಕೆ ಹೆಚ್ಚು ಕಡಿಮೆ “ಹೃದಯ’ವೇ ಆಗಿದ್ದ ರಾವ್‌ ಕಳೆದ ಕೆಲವು ಸಮಯಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ವಿಜ್ಞಾನಿ ಡಾ.ವಿಕ್ರಂ ಸಾರಾಬಾಯಿ ಹಾಗೂ ಸತೀಶ್‌ ಧವನ್‌ ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರೊ.ಯು.ಆರ್‌.ರಾವ್‌ ಅವರು ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪತ್ನಿ ಯಶೋಧ ಆರ್‌.ರಾವ್‌, ಪುತ್ರ ಡಾ.ಮದನ್‌ ರಾವ್‌, ಪುತ್ರಿ ಡಾ.ಮಾಲಾರಾವ್‌ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದರು.

ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಚಿಕಿತ್ಸೆ ಪಡೆದಿದ್ದರು. ಜುಲೈ 11ರಂದು ಖಾಸಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿದ್ದು, ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಕಳೆದ ನಾಲ್ಕು ದಿನದಿಂದ ರಾವ್‌ ಅವರ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿದ್ದು, ಮಾತನಾಡುವ ಶಕ್ತಿಯನ್ನೂ  ಕಳೆದುಕೊಂಡಿದ್ದರು. ಸೋಮವಾರ ಬೆಳಗಿನ ಜಾವ 2.50ರ ಸುಮಾರಿಗೆ ಕೊನೆಯುಸಿರೆಳೆದರು.

ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಇಂದಿರಾನಗರದ ಅವರ ಮನೆಯಲ್ಲೇ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಇಸ್ರೋ ಸ್ಯಾಟಲೈಟ್‌ ಸೆಂಟರ್‌ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಅಂತಿಮ ದರ್ಶನ ಪಡೆದರು. ಹೆಬ್ಟಾಳದಲ್ಲಿ ಸರ್ಕಾರದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು.

Advertisement

ಉಪಗ್ರಹ ಕಾರ್ಯಕ್ರಮ ಕ್ಷೇತ್ರದಲ್ಲಿ ಭಾರತದ ಭೀಷ್ಮ ಎಂದೇ ಕರೆಸಿಕೊಂಡಿದ್ದ ಯು.ಆರ್‌.ರಾವ್‌ ಅವರು, ದೇಶದ ಮೊದಲ ಉಪಗ್ರಹ ಆರ್ಯಭಟದಿಂದ ಹಿಡಿದು 2020-21ರಲ್ಲಿ ಉಡಾವಣೆಯಾಗಲಿರುವ ಆದಿತ್ಯ(ಸೌರ ವೀಕ್ಷಣಾ ಯೋಜನೆ)ಉಪಗ್ರಹದ ನಿರ್ಮಾಣದ ವರೆಗೂ ಇಸ್ರೋ ಜತೆ ಸೇರಿ ನೀಡಿರುವ ಕೊಡುಗೆ ಅಪಾರ. ಉಪಗ್ರಹ ನಿರ್ಮಾಣ ಹಾಗೂ ಉಡಾವಣೆಯಲ್ಲಿನ ಸಮಸ್ಯೆಯನ್ನು ಪತ್ತೆ ಹಚ್ಚಿ, ನವೀನ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುಲ್ಲಿ ತನ್ನದೇ ಸಿದ್ಧಾಂತವನ್ನು ರಾವ್‌ ಅಳವಡಿಸಿಕೊಂಡಿದ್ದರು.  ಉಡಾವಣೆ ವಿಫ‌ಲವಾದರೆ, ಅದರ ಎಲ್ಲಾ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಿದ್ದರು ಮತ್ತು ಯಶಸ್ವಿಯಾದಾಗ ಸಂತಸ ಹಾಗೂ ಗೆಲುವನ್ನು ಸಮೂಹವಾಗಿ ಆಚರಿಸಲು ನಿರ್ದೇಶಿಸುತ್ತಿದ್ದರು.

ಗಣ್ಯರ ಅಂತಿಮ ದರ್ಶನ
ಯು.ಆರ್‌.ರಾವ್‌ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಇಸ್ರೋ ಅಧ್ಯಕ್ಷ ಕಿರಣ್‌ ಕುಮಾರ್‌, ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ರಾಧಾಕೃಷ್ಣನ್‌, ಕೆ.ಕಸ್ತೂರಿ ರಂಗನ್‌, ಐಸ್ಯಾಕ್‌ ಸಂಸ್ಥೆಯ ನಿರ್ದೇಶಕ ಡಾ.ಅಣ್ಣಾ ದೊರೈ, ವಿಧಾನಪರಿಷತ್‌ ಸದಸ್ಯ ಡಾ.ರಾಮಚಂದ್ರಗೌಡ, ನಗರ ಜಿಲ್ಲಾಧಿಕಾರಿ ವಿ.ಶಂಕರ್‌, ಸಚಿವರಾದ ಎಂ.ಕೃಷ್ಣಪ್ಪ, ಪ್ರಿಯಾಂಕ ಖರ್ಗೆ, ಶಾಸಕ ಎನ್‌.ರಘು, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಮೊದಲಾದ ಗಣ್ಯರು ಇಂದಿರಾನಗರದ ರಾವ್‌ ಅವರ ಮನೆಗೆ ಭೇಟಿ  ನೀಡಿ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.

ಯು.ಆರ್‌.ರಾವ್‌ ದೇಶದ ಸುಪ್ರಸಿದ್ದ ಬಾಹ್ಯಾಕಾಶ ವಿಜ್ಞಾನಿಯಾಗಿದ್ದರು. ವೈಜ್ಞಾನಿಕ ಅಷ್ಟೇ ಅಲ್ಲದೇ ವೈಚಾರಿಕವಾಗಿಯೂ ಚಿಂತನಾಶೀಲರಾಗಿದ್ದರು. ನಾನು ಅವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಜತೆಯಾಗಿದ್ದೆ. ಕನ್ನಡಿಗರೊಬ್ಬರು ಈ ಸ್ಥಾನಕ್ಕೆ ಏರಿರುವುದು ನಮ್ಮೆಲ್ಲರ ಹೆಮ್ಮೆ. ಬಾಹ್ಯಾಕಾಶ ಕ್ಷೇತ್ರದ ಧ್ರುವತಾರೆಯನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ.
– ಸಿಎಂ ಸಿದ್ದರಾಮಯ್ಯ.

ನನಗೆ ಯು.ಆರ್‌.ರಾವ್‌ ಜತೆಗೆ ನಾಲ್ಕು ದಶಕಗಳ ಒಡನಾಟ. ಬಾಹ್ಯಾಕಾಶ ಕ್ಷೇತ್ರದ ಭೀಷ್ಮ ಪಿತಾಮಹರಾಗಿ ಗುರುತಿಸಿಕೊಂಡವರು. ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಅವರ ಪರಿಚಯವಾಗಿತ್ತು. ರಾಕೆಟ್‌ ಉಡಾವಣೆ ಮತ್ತಿತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ಅವರೇ ಪ್ರೇರಣೆಯಾಗಿದ್ದರು. ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದೇ ನಮ್ಮ ಹೆಮ್ಮೆ.
– ಸುರೇಶ್‌, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮಾಜಿ ನಿರ್ದೇಶಕ

ಇಸ್ರೋದಲ್ಲಿ ಕೇವಲ 7 ಎಂಜಿನಿಯರ್‌ಗಳು ಇದ್ದಾಗ ಅದನ್ನು ಮುನ್ನೆಡಸಲು ಆರಂಭಿಸಿದ ರಾವ್‌ ನಂತರ ಅದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆಯುವವರೆಗೂ ಜತೆಗಿದ್ದರು. ಪ್ರತಿ ಉಪಗ್ರಹ ಉಡಾವಣೆಯಲ್ಲೂ ಅವರ ಆಲೋಚನೆ ಮತ್ತು ಕೈಚಳಕ ಇದ್ದೇ ಇತ್ತು. ರಾಕೆಟ್‌ ಉಡಾವಣೆಗೆ ಸಂಬಂಧಿಸಿದಂತೆ ತುಂಬ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದರು. ತಿರುವನಂತಪುರಂನ ವಿಕ್ರಂ ಸಾರಾಬಾಯಿ ಕೇಂದ್ರದಲ್ಲಿ ಒಟ್ಟಿಗೆ ಕೆಲಸ ಮಾಡುತಿದ್ದೆವು. ಅವರದ್ದು ಸಂಪೂರ್ಣ ತ್ಯಾಗಮಯ ಜೀವನ. ಅವರಿಗೆ ನಾಯಕರನ್ನು ಸೃಷ್ಟಿಮಾಡುವ ಶಕ್ತಿ ಇತ್ತು. ಅವರು ನಂಬಿಕೊಂಡಿದ್ದ ಸಿದ್ಧಾಂತದ ಆಧಾರದಲ್ಲಿ ಮಾಡುತ್ತಿದ್ದ ಕೆಲಸ ಎಲ್ಲರಿಗೂ ಸ್ಫೂರ್ತಿಯಾಗಿದೆ.
-ಡಾ.ಪಿ.ಎಸ್‌.ಗೋಯಲ್‌,  ಐಸಾಕ್‌ನ ಮಾಜಿ ನಿರ್ದೇಶಕ

ಇಸ್ರೋದಲ್ಲಿ ಕಾರ್ಯ ಆರಂಭಿಸುವ ಮುಂಚೆಯೇ ರಾವ್‌ ಅವರ ಗೆಳೆತನವಿತ್ತು. ಇಪ್ಪತ್ತು ಜನರಿಂದ ಆರಂಭವಾದ ಇಸ್ರೋ ಇಂದು ಬೃಹದಾಕಾರವಾಗಿ ಬೆಳೆದಿದ್ದರೆ ಅದರಲ್ಲಿ ರಾವ್‌ ಪಾಲು ಅಪಾರವಾಗಿದೆ. ನಿವೃತ್ತಿಯ  ನಂತರವೂ ಬಹಳ ಚುರುಕಾಗಿ ಇಸ್ರೋ ಜತೆ ಒಡನಾಟ ಹೊಂದಿದ್ದರು. ನಮಗೆ ಯಾವಾಗ ಏನು ಸಮಸ್ಯೆ ಬಂದರೂ  ರಾವ್‌ ಅವರನ್ನು ಸಂಪರ್ಕಿಸುತ್ತಿದ್ದೇವು. ಅವರನ್ನು ಕಳೆದುಕೊಂಡಿದ್ದು ದೇಶಕ್ಕೆ ಅತಿದೊಡ್ಡ ನಷ್ಟ.
– ಆರ್‌.ಅರ್ವಮುದನ್‌, ಹಿರಿಯ ವಿಜ್ಞಾನಿ

ಅವರನ್ನು ನೆನೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಎಂದಿಗೂ ಅವರು ನಮ್ಮ ಜತೆಗಿದ್ದಾರೆ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ರಾವ್‌ ಅವರೇ ಕಾರಣ. ಅವರ ಅಗಲಿಕೆ ದೇಶಕ್ಕೂ ದೊಡ್ಡ ನಷ್ಟ. ರಾವ್‌ ಅವರು ದೇಶ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗೆ ಸಣ್ಣ ಶಬ್ದದಿಂದ ಬಣ್ಣಿಸಲು ಆಗದು. ಅವರು ಮಾಡಿರುವ ಕೆಲಸಗಳೇ ಅದನ್ನೆಲ್ಲ ವಿವರಿಸುತ್ತದೆ.
-ಕೆ.ಕಸ್ತೂರಿ ರಂಗನ್‌, ಇಸ್ರೋ ಮಾಜಿ ಅಧ್ಯಕ್ಷರು

ಯು.ಆರ್‌.ರಾವ್‌ ಜತೆ ಕೆಲಸ ಮಾಡುವುದೇ ಹೆಮ್ಮೆ ಮತ್ತು ಪ್ರೇರಣೆಯಾಗಿತ್ತು. ಹಲವು ಕಷ್ಟಕರ ಯೋಜನೆ ಹಾಗೂ ಸನ್ನಿವೇಶಗಳನ್ನು ಅವರು ಎದುರಿಸಿದ್ದರು. ಯೋಜನೆ ವಿಫ‌ಲವಾದಾಗ ಎಂದೂ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಚಂದ್ರಯಾನ-1, ಮಾರ್ಸ್‌ರ್‌ ಬೀಟರ್‌ ಮೊದಲಾದ ದೇಶದ ಪ್ರಮುಖ ಬಾಹ್ಯಾಕಾಶ ಯೋಜನೆಯಲ್ಲಿ ಇವರೇ ಪ್ರಮುಖ ಪಾತ್ರವಹಿಸಿದ್ದರು. ಚಂದ್ರಯಾನ-1 ಮೊದಲಬಾರಿಗೆ ವಿಫ‌ಲವಾದಾಗ ಅದರ ಸಂಪೂರ್ಣ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದರು. 2020-21 ಉಡಾವಣೆಯಾಗಲಿರುವ ಆದಿತ್ಯ ಉಪಗ್ರಹದ ಪರಿಕಲ್ಪನೆ ಹುಟ್ಟುಹಾಕಿದವರಲ್ಲಿ ಇವರು ಒಬ್ಬರು. ಉಪಾಗ್ರಹ ಕ್ಷೇತ್ರದಲ್ಲಿ ಹಿಂದೆ ನಡೆದಿರುವ ಸಾಧನೆ ಮತ್ತು ಮುಂದಿನ ಸಂಶೋಧನೆಯಲ್ಲಿ ಯು.ಆರ್‌.ರಾವ್‌ ಪಾತ್ರ ಇದ್ದೆ ಇರುತ್ತೆ.
– ಡಾ. ಎಸ್‌.ವಿ.ಶರ್ಮ, ಉಪ ನಿರ್ದೇಶಕ(ಎಸ್‌ಪಿ)ಐಸ್ಯಾಕ್‌.

ಇಸ್ರೋ ಇಷ್ಟರ ಮಟ್ಟಿಗೆ ಬೆಳೆದಿರುವುದಕ್ಕೆ ಯು.ಆರ್‌. ರಾವ್‌ ಅವರ ಕಾಣಿಕೆ ಸಾಕಷ್ಟಿದೆ. ಅಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ರಾವ್‌ ಅವರು ಜೀವನದ ಪ್ರತಿ ಕ್ಷಣವನ್ನು ದೇಶ ಹಾಗೂ ಇಸ್ರೋಗಾಗಿಯೇ ಮೀಸಲಿಟ್ಟಿದ್ದರು.
-ವೆಂಕಟೇಶ ಶರ್ಮಾ, ಇಸ್ರೋ ಜಂಟಿ ನಿರ್ದೇಶಕ

ರಾವ್‌ ಅವರಿಗೆ ಕ್ರಿಕೆಟ್‌ ಎಂದರೆ  ಬಲು ಇಷ್ಟ
ವಿಜ್ಞಾನ, ಸಂಶೋಧನೆಯಲ್ಲೇ ತೊಡಗಿಕೊಂಡಿರುವ ಅವರು ಕ್ರಿಕೆಟ್‌ ತುಂಬಾ ಇಷ್ಟ ಪಡುತ್ತಿದ್ದರು. ಭಾರತ- ಪಾಕಿಸ್ತಾನ ಪಂದ್ಯವನ್ನಂತೂ ಮಿಸ್‌ ಮಾಡದೇ ನೋಡುತ್ತಿದ್ದರು. ಬಿಡುವಿನ ಸಂದರ್ಭದಲ್ಲಿ ಕ್ರಿಕೆಟ್‌ನ ಬಗ್ಗೆಯೂ ಮಾತಾಡಿದ್ದು ಉಂಟು. ಒತ್ತಡದ ಬದುಕಿನಲ್ಲಿ ಮನಸ್ಸಿಗೆ ರಿಲ್ಯಾಕ್ಸ್‌ ಮಾಡಿಕೊಳ್ಳಲು ಆರ್ಟ್‌ ವರ್ಕ್ಸ್ ಹವ್ಯಾಸ  ಬೆಳೆಸಿಕೊಂಡಿದ್ದರು. ಅತ್ಯಂತ ಮೃದು ಹಾಗೂ ಸೂಕ್ಷ್ಮ ಸ್ವಭಾವದ ಅವರು ಯಾವತ್ತು, ಯಾವುದೇ ವಿಷಯದಲ್ಲೂ ಕೋಪದಿಂದ ವರ್ತಿಸಿದವರಲ್ಲ. ಅತ್ಯುನ್ನತ ಸ್ಥಾನದಲ್ಲಿದ್ದರೂ, ಅಹಂಕಾರ ಲವಲೇಸವೂ ಇರಲಿಲ್ಲ. ಅವರೊಬ್ಬ ಗ್ರೇಟ್‌ ಪರ್ನಾಲಿಟಿ, ಅವರ ಬಗ್ಗೆ ಮಾತನಾಡಲು ನಾವು ತುಂಬಾ ಚಿಕ್ಕವರು. ಗ್ರೇಟ್‌ ಪರ್ನಾಲಿಟಿ ಹಾಗೂ ಅವರ ವಿಲ್‌ಪವರ್‌ ವರ್ಣಿಸಲು ಸಾಧ್ಯವಿಲ್ಲ. ಕಳೆದ 23 ವರ್ಷದಿಂದ ಅವರ ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಎಂದು ಈರಣ್ಣ ಗದ್ಗದಿತರಾದರು.

ಮಿನಿ ಲೆùಬರಿ ಮಾಡಿಕೊಂಡಿದ್ದರು :
ವಿಜ್ಞಾನದ ಜತೆಗೆ ತಮ್ಮ ಅಭಿರುಚಿಯ ವಿವಿಧ ಕ್ಷೇತ್ರದ ಪುಸ್ತಕದ ಸಂಗ್ರಹದ ಜತೆಗೆ ಓದುವ ಹವ್ಯಾಸವನ್ನು  ಹೊಂದಿದ್ದ ರಾವ್‌ ಅವರು ತಮ್ಮ ಕಚೇರಿಯಲ್ಲಿ ಮಿನಿ ಗ್ರಂಥಾಲಯವನ್ನು ಮಾಡಿಕೊಂಡಿದ್ದರು. ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಸಂಶೋಧನೆಯ ಪ್ರಬಂಧ, ಪುಸ್ತಕವನ್ನು ಸಂಗ್ರಹಿಸುತ್ತಿದ್ದರು. ಅದರ ಜತೆಗೆ ತಮಗೆ ಬಂದಿರುವ ಪ್ರಶಸ್ತಿ ಪುರಸ್ಕಾರಗಳನ್ನು ಅಲ್ಲಿಯೇ ಜೋಡಿಸಿಟ್ಟಿದ್ದಾರೆ.

ನನ್ನ ಮಗ ಅಂತರ್ಜಲದ ಮಟ್ಟ ಬರಿಗಣ್ಣಿನಲ್ಲೇ ಊಹಿಸುತ್ತಿದ್ದ ಹಾಗೂ ಭೂಕಂಪದ ಮುನ್ಸೂಚನೆಯೂ ತಿಳಿಸುತಿದ್ದ. ಈ ಬಗ್ಗೆ ಇರುವ ಸಂಶಯ ಬಗೆಹರಿಸಿಕೊಳ್ಳಲು ಇಸ್ರೋ ಕಚೇರಿಗೆ ಹೋಗಿದ್ದೆವು. ಆಗ ಯು.ಆರ್‌.ರಾವ್‌ ಅವರು ಅಧ್ಯಕ್ಷರಾಗಿದ್ದರು. ನಮ್ಮನ್ನು ಒಳಗೆ ಕರೆಸಿ, ಸುಮಾರು ಅರ್ಧಗಂಟೆಗಳ ಕಾಲ ಸಂಪೂರ್ಣವಾಗಿ ನಮ್ಮ ಮಾತುಗಳನ್ನು ಆಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆ ನೀಡಿದರು. ರಾವ್‌ ಅವರು ಇಸ್ರೋ ಅಧ್ಯಕ್ಷರಾಗಿದ್ದರೂ, ನಮ್ಮಂತರ ಸಾಮಾನ್ಯ ಜನರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸಿದ್ದು ಅವರ ದೊಡ್ಡಗುಣ ಎಂದು ಅಂತಿಮ ದರ್ಶನಕ್ಕೆ ಬಂದಿದ್ದ 83 ವರ್ಷದ ಶ್ಯಾಮಣ್ಣ ತಮ್ಮ ಸಣ್ಣ ಅನುಭವ ಹಂಚಿಕೊಂಡು ಭಾವುಕರಾದರು.

ನಾವು ಬಾಹ್ಯಾಕಾಶ ಕಾರ್ಯಕ್ರಮವನ್ನು ಹಾಕಿಕೊಂಡಾಗಲೆಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪ್ರಮಾಣದ ಒತ್ತಡಗಳು ಬರುತ್ತವೆ. ಈ ಒತ್ತಡ ಬಂದಾಗಲೆಲ್ಲಾ ನಾನು ಖುಷಿ ಪಡುತ್ತೇನೆ. ಇದಕ್ಕೆ ಕಾರಣ, ಅವರು ಒತ್ತಡ ಹಾಕಿದಾಗಲೆಲ್ಲಾ ನಾವು ಸ್ವದೇಶಿಯವಾಗಿಯೇ ತಂತ್ರಜ್ಞಾನ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದೆವು. ನಮ್ಮ ಸಮಸ್ಯೆಗೆ ನಾವೇ ಪರಿಹಾರವನ್ನೂ ಕಂಡುಕೊಳ್ಳುತ್ತಿದ್ದೆವು.
– ಯು.ಆರ್‌. ರಾವ್‌, ಬಾಹ್ಯಾಕಾಶ ವಿಜ್ಞಾನಿ.

Advertisement

Udayavani is now on Telegram. Click here to join our channel and stay updated with the latest news.

Next