Advertisement

ಯೋಧರು ದೇಶದ ಆಸ್ತಿ : ಎಂ.ಸಿ. ನಾಣಯ್ಯ

07:10 AM Sep 09, 2017 | Team Udayavani |

ಮಡಿಕೇರಿ: ಗಡಿ ಕಾಯುವ ಯೋಧರು ಈ ರಾಷ್ಟ್ರದ ಆಸ್ತಿ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಬಣ್ಣಿಸಿದ್ದಾರೆ. ಯೋಧರನ್ನು ಸ್ಮರಿಸಿಕೊಳ್ಳುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೆಂದು ಅವರು ಹೇಳಿದ್ದಾರೆ. ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ವತಿಯಿಂದ  ನಗರದ ಕೊಡವ ಸಮಾಜದಲ್ಲಿ ನಡೆದ ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರ ಸ್ಮರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಯಾವುದೇ ಪ್ರದೇಶ, ಜಾತಿ ಅಥವಾ ಜನಾಂಗಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ನಮ್ಮ ರಾಷ್ಟ್ರದ ಆಸ್ತಿಯಾಗಿದ್ದಾರೆ ಎಂದರು.
 
ದೇವಯ್ಯ ವೀರ ಸೇನಾನಿಯಾಗಿ ಪಾಕಿಸ್ತಾನದ ವಿರುದ್ಧ ತನ್ನ ಹಳೆಯ ವಿಮಾನದಲ್ಲಿ ಶತ್ರು ದೇಶದ ವಿರುದ್ಧ ಹೋರಾಟ ನಡೆಸಿದರು. ಶತ್ರುಗಳಿಂದ ತಪ್ಪಿಸಿಕೊಂಡು ಬರಬಹುದಾದ ಅವಕಾಶಗಳಿದ್ದರೂ ಉಳಿದ ಯೋಧರನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದರು. ಈ ಘಟನೆ 23 ವರ್ಷಗಳ ಅನಂತರ ಭಾರತೀಯರಿಗೆ ತಿಳಿಯುವಂತಾಯಿತು ಎಂದು ನಾಣಯ್ಯ ಸ್ಮರಿಸಿಕೊಂಡರು. 

ಇಂದು ಕೂಡ ಸೇನೆಯಲ್ಲಿ ಕೊಡಗು ರೆಜಿಮೆಂಟ್‌ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರು ಪರಸ್ಪರ ಸೋದರತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸೇನೆಯಲ್ಲಿರುವ ಯೋಧರಿಗೂ ಕೂಡ ಯುದ್ಧದಂತಹ ವಾತಾವರಣ ಸೃಷ್ಟಿಯಾಗುವುದು ಬೇಕಿಲ್ಲ ಎಂದು ಅಭಿಪ್ರಾಯಪಟ್ಟರು. 

ಸೈನಿಕ ಶಾಲೆಯಲ್ಲಿ ಆದ್ಯತೆ ನೀಡಲಿ 
30, 40 ರ ದಶಕದಲ್ಲಿ ಕೊಡಗಿನ ಪ್ರತಿ ಕುಟುಂಬದಲ್ಲೂ 2, 3 ಮಂದಿ ಸೇನೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕ್ರಮೇಣ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಕೊಡಗಿನ ಸೈನಿಕ ಶಾಲೆಯಲ್ಲಿ ಕೊಡಗಿನ ಮಕ್ಕಳ ಸೇರ್ಪಡೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಹೀಗಾದಲ್ಲಿ ಕೊಡಗಿನಲ್ಲಿ ಸೈನಿಕ ಶಾಲೆಯ ಸ್ಥಾಪನೆಯಿಂದ ಕೊಡಗಿನವರಿಗೆ ಆಗುವ ಪ್ರಯೋಜನವೇನು ಎಂದು ನಾಣಯ್ಯ ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನವರು ಇತರೆಡೆಗೆ ತೆರಳುವಾಗ ಕೊಡಗಿನವರು ಎಂದು ಗುರುತಿಸಿಕೊಳ್ಳುವುದೇ ಹೆಮ್ಮೆಯ ವಿಷಯ. ಈ ಗೌರವವನ್ನು  ನಮ್ಮ ಹಿರಿಯರು ಸಂಪಾದಿಸಿದ್ದು, ಅದನ್ನು ನಾವು ಮುಂದೆ ಉಳಿಕೊಂಡು ಹೋಗಬೇಕಿದೆ ಎಂದರು. 

Advertisement

ಮತ್ತೂಬ್ಬ ವಿಧಾನ ಪರಿಷತ್‌ ಸದಸ್ಯರಾದ ಸುನೀಲ್‌ ಸುಬ್ರಮಣಿ ಮಾತನಾಡಿ, ದೇಶಪ್ರೇಮವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕು. ಕೊಡಗಿನವರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು  ತಮ್ಮಲ್ಲಿನ ಸಮಸ್ಯೆಗಳನ್ನು  ಬಗೆಹರಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.  ಜಿಲ್ಲಾಧಿಕಾರಿ ಡಾ.ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜ ಅವರು ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಯುವ ಪೀಳಿಗೆಗೆ ಮುಂದೆ ಸೇನೆಗೆ ಸೇರಲು ಮಾರ್ಗದರ್ಶನವಾಗಲಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸೀಮಿತವಾಗದೇ ಹೆಚ್ಚಾಗಿ ನಡೆಯುವಂತೆ ಆಗಬೇಕು. ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ಹೊರಬಂದು ವೀರಯೋಧರ ಬಗ್ಗೆ ತಿಳಿದುಕೊಳ್ಳಬೇಕು. 1965ರ ಯುದ್ಧ ಹಾಗೂ  ಕೊಡಗಿನ ಮಹಾವೀರ ಪುಸ್ತಕ ಸೈನಿಕರ ಬಗ್ಗೆ ತಿಳಿಸಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕರಣೀಯವಾಗಬೇಕು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next