Advertisement

ಸ್ವದೇಶಕ್ಕೆ ಭಾರತೀಯ ಶಿಲ್ಪಗಳು

08:15 AM Aug 21, 2017 | Team Udayavani |

ಹೊಸದಿಲ್ಲಿ: ಚೋಳರ ಕಾಲದ ಶ್ರೀದೇವಿ, ಮೌರ್ಯರ ಕಾಲದ ಟೆರ್ರಾಕೋಟಾ ಮಾದರಿಯ ಮಹಿಳಾ ಸಂವೇದನೆಗಳನ್ನು ಪ್ರತಿಬಿಂಬಿಸುವ ಶಿಲ್ಪಗಳು ಸಹಿತ 24ಕ್ಕೂ ಹೆಚ್ಚು ಪ್ರಾಚೀನ ಶಿಲ್ಪಗಳು ವಿದೇಶಗಳಿಂದ ಮತ್ತೆ ತವರು ಭಾರತ ಸೇರಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ 2014ರಿಂದ ನಡೆಸಿದ ಪ್ರಯತ್ನದ ಫ‌ಲವಾಗಿ ಇದು ಸಾಧ್ಯವಾಗಿದೆ ಎಂದು ಸ್ವತಃ ಸರ್ಕಾರ ಹೇಳಿಕೊಂಡಿದೆ.

Advertisement

ಗಮನಾರ್ಹ ಸಂಗತಿ ಏನೆಂದರೆ ಬಾಹುಬಲಿ ಹಾಗೂ ನಟರಾಜ ಸಹಿತ 16 ವಿವಿಧ ರೀತಿಯ 16 ಶಿಲ್ಪಗಳನ್ನು ಅಮೆರಿಕದಿಂದಲೂ, 5 ಶಿಲ್ಪಗಳನ್ನು ಆಸ್ಟ್ರೇಲಿಯಾದಿಂದಲೂ ತಲಾ ಒಂದನ್ನು ಕೆನಡಾ, ಜರ್ಮನಿ ಮತ್ತು ಸಿಂಗಾಪುರಗಳಿಂದಲೂ ತರಿಸಿಕೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ. ಇವೆಲ್ಲವೂ 2014ರಿಂದ 2017ರ ಅವಧಿಯಲ್ಲಿ ಈ ಎಲ್ಲ ದೇಶಗಳೂ ಭಾರತೀಯ ಶಿಲ್ಪಗಳನ್ನು ಸ್ವಇಚ್ಚೆಯಿಂದ ಮರಳಿಸಿದ್ದು, ಅವೆಲ್ಲವನ್ನೂ ಭಾರತಕ್ಕೆ ತರಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಅಲ್ಲದೆ, ಇನ್ನೂ 13 ಶಿಲ್ಪಗಳು ಸ್ವಿಜರ್ಲೆಂಡ್‌ ಸೇರಿ ಉಳಿದ ರಾಷ್ಟ್ರಗಳಿಂದ ಬರಲಿವೆ. ಲೋಹಗಳಿಂದ ಕೂಡಿರುವ ಶಿಲ್ಪಗಳೂ ಇದ್ದು, ಎಲ್ಲವೂ ಪುರಾತನ ಶಿಲ್ಪಗಳಾಗಿವೆ. ತಾಮ್ರದಿಂದ ರಚಿಸಲಾದ ಸಂತ ಮಣ್ಣಿಕ್ಕಾವಚಾಕರ್‌, ಗಣೇಶ, ಬಾಹುಬಲಿ, ಪಾರ್ವತಿಯ ವಿಗ್ರಹ ಗಳು ಆಕರ್ಷಣೀಯವಾಗಿವೆ. ಆಸ್ಟ್ರೇಲಿಯಾ ಮರಳಿಸಿರುವ ವಿಗ್ರಹಗಳಲ್ಲಿ ಬುದ್ಧನ ಟೆರ್ರಾಕೋಟಾ ಶಿಲ್ಪ ಹೆಚ್ಚಿನ ಮೌಲ್ಯದ್ದು. ರಾಜ ತಾಂತ್ರಿಕ ಮಾರ್ಗದಲ್ಲಿ ಇವುಗಳನ್ನು ಭಾರತಕ್ಕೆ ತರಿಸಿಕೊಳ್ಳುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next