ನವದೆಹಲಿ: ಎರಡು ರೈಲುಗಳ ಮುಖಾಮುಖಿ ಡಿಕ್ಕಿಯನ್ನು ತಡೆಯಲು ಭಾರತೀಯ ರೈಲ್ವೆ, “ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್’ (ಎಟಿಪಿ) ಪರಿಕಲ್ಪನೆಯ ಆಧಾರದಲ್ಲಿ ಅಭಿವೃದ್ಧಿಪಡಿಸಿರುವ “ಕವಚ್’ ತಂತ್ರಜ್ಞಾನದ ಪ್ರಾತ್ಯಕ್ಷಿಕೆಗೆ ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಾಕ್ಷಿಯಾಗಿದ್ದಾರೆ.
ಸಿಕಂದ್ರಾಬಾದ್‌ನಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರ ವಿಡಿಯೋವನ್ನು ವೈಷ್ಣವ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಹಳಿಯಲ್ಲಿ ಒಂದು ಕಡೆಯಿಂದ ರೈಲು, ಅದಕ್ಕೆ ಎದುರಾಗಿ ಒಂದು ಲೋಕೋಮೋಟಿವ್ (ರೈಲು ಇಂಜಿನ್) ಓಡಿಸಲಾಯಿತು. ರೈಲಿನಲ್ಲಿ ಖುದ್ದು ಸಚಿವರು, ಚಾಲಕರ ಕ್ಯಾಬಿನ್‌ನಲ್ಲಿ ಚಾಲಕರು, ತಂತ್ರಜ್ಞರು ಹಾಗೂ ಅಧಿಕಾರಿಗಳ ಜೊತೆಗೆ ನಿಂತಿದ್ದರು.
ಸಚಿವರಿದ್ದ ರೈಲು ಹಾಗೂ ಎದುರುಗಡೆಯಿಂದ ಬರುತ್ತಿದ್ದ ರೈಲುಗಳು ಗರಿಷ್ಠ ವೇಗದಲ್ಲಿ ಓಡುವಂತೆ ನೋಡಿಕೊಳ್ಳಲಾಗಿತ್ತು.
ಇನ್ನೇನು ರೈಲುಗಳು ಹತ್ತಿರಕ್ಕೆ ಬರುತ್ತಿವೆ ಎಂದಾಗ ಸಚಿವರಿದ್ದ ರೈಲು ಹಾಗೂ ಎದುರುಗಡೆಯಿಂದ ಬಂದ ರೈಲುಗಳ ವೇಗ ನಿಧಾನವಾಗಿ ಕಡಿಮೆಯಾಗುತ್ತಾ ಬಂದಿತು. ಆಗ, ಸಚಿವರು, ಪಕ್ಕದಲ್ಲಿದ್ದ ಚಾಲಕರನ್ನು ಉದ್ದೇಶಿಸಿ, “”ಡ್ರೈವರ್ ಸಾಹೇಬರೇ, ನೀವು ಬ್ರೇಕ್ ಹಾಕುತ್ತಿಲ್ಲ ತಾನೇ?” ಎಂದು ಕೇಳಿದರು. ಅದಕ್ಕೆ ಡ್ರೈವರ್ “ಇಲ್ಲ ಸರ್’ ಎಂದು ಉತ್ತರಿಸಿದರು.
ಹೀಗೇ ನಿಧಾನವಾಗಿ ಚಲಿಸಿದ ಎರಡೂ ರೈಲುಗಳು ಸುಮಾರು 360 ಮೀಟರ್ ದೂರದಲ್ಲಿದ್ದಾಗೇ ಪೂರ್ತಿಯಾಗಿ ನಿಂತವು. ತಕ್ಷಣವೇ ಸಚಿವರು ಸಂಸತದಿಂದ ಚಪ್ಪಾಳೆ ತಟ್ಟಿ, ಪಕ್ಕದಲ್ಲಿದ್ದ ತಂತ್ರಜ್ಞರುಗಳ ಬೆನ್ನು ತಟ್ಟಿ “ಥಮ್ಸ್ ಅಪ್’ ಚಿಹ್ನೆ ತೋರಿದರು. ಇಡೀ ವಿಡಿಯೋವನ್ನು ಸಚಿವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.