Advertisement

Indian Railways: ಈ ವರ್ಷಾಂತ್ಯಕ್ಕೆ ಬರಲಿದೆ…ಹೈಡ್ರೋಜನ್‌ ರೈಲು!

01:21 AM Oct 19, 2024 | Team Udayavani |

ಈ ವರ್ಷದ ಕೊನೆಯಲ್ಲಿ ದೇಶದ ಮೊದಲ ಹೈಡ್ರೋಜನ್‌ ಚಾಲಿತ ರೈಲು ಓಡಾಟ ಆರಂಭಿಸಲಿದೆ. ಇದರ ಯಶಸ್ಸಿನ ಬಳಿಕವೇ ಮತ್ತಷ್ಟು ರೈಲುಗಳು ದೇಶದ ಹಲವೆಡೆ ಸಂಚರಿಸಲಿವೆ. ಬಹುಶಃ ಕೆಲವು ವರ್ಷಗಳಲ್ಲೇ ಡೀಸೆಲ್‌ ಚಾಲಿತ ಹಾಗೂ ವಿದ್ಯುತ್‌ ಚಾಲಿತ ರೈಲುಗಳೂ, ವಾಹನಗಳೂ ಕಣ್ಮರೆಯಾಗಬಹುದು. ಭವಿಷ್ಯದಲ್ಲಿ ಹೈಡ್ರೋಜನ್‌ ಪ್ರಮುಖ ಇಂಧನವಾಗಬಹುದು. ಇದರ ಮೊದಲ ಹೆಜ್ಜೆಯಾಗಿ ಭಾರತ ಹೈಡ್ರೋಜನ್‌ ರೈಲುಗಳ ಯೋಜನೆ ಆರಂಭಿಸಿದ್ದು, ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಏನಿದು ಹೈಡ್ರೋಜನ್‌ ರೈಲು?
ಹೈಡ್ರೋಜನ್‌ ಅನ್ನು ಪ್ರಾಥಮಿಕ ಇಂಧನವಾಗಿ ಬಳಸಿಕೊಂಡು ಈ ರೈಲುಗಳು ಸಂಚರಿಸುತ್ತವೆ. ಹೈಡ್ರೋಜನ್‌ ಇಂಧನ ಕೋಶಗಳಲ್ಲಿ ಆಕ್ಸಿಜನ್‌ ಹಾಗೂ ಹೈಡ್ರೋಜನ್‌ ಪರಮಾಣು­ಗಳನ್ನು ಒಗ್ಗೂಡಿಸುವ ಮೂಲಕ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯುತ್‌ ಜತೆಗೆ ನೀರು, ಅಲ್ಪ ಪ್ರಮಾಣದ ಶಾಖ ಉತ್ಪಾದನೆಯಾಗುತ್ತದೆ. ಹೀಗೆ ಉತ್ಪಾದನೆಯಾದ ವಿದ್ಯುತ್‌ ಅನ್ನು ಉಪಯೋಗಿಸಿ ರೈಲುಗಳು ಸಂಚರಿಸುತ್ತವೆ. ಈ ರೈಲುಗಳಲ್ಲಿ ಹೈಡ್ರೋಜನ್‌ ನೇರ ಇಂಧನವಾಗಿರದೇ, ಇಂಧನ ವಾಹಕವಾಗಿರಲಿದೆ.

ಬಜೆಟ್‌ನಲ್ಲಿ ಹೈಡ್ರೋಜನ್‌ ರೈಲು ಘೋಷಣೆ
ಹೈಡ್ರೋಜನ್‌ ಫಾರ್‌ ಹೆರಿಟೇಜ್‌(ಪರಂಪರೆಗಾಗಿ ಹೈಡ್ರೋಜನ್‌) ಯೋಜನೆಯಡಿ ಹೈಡ್ರೋಜನ್‌ ಚಾಲಿತ ರೈಲು ಗಳನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2023ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಕೆಲವು ಆಯ್ದ ಪಾರಂಪರಿಕ ಸ್ಥಳಗಳು, ನೈಸರ್ಗಿಕ ಸೂಕ್ಷ್ಮ ಸ್ಥಳಗಳು ಹಾಗೂ ಗುಡ್ಡ-ಗಾಡು ಪ್ರದೇಶ ಗಳಲ್ಲಿ ಮಾಲಿನ್ಯರಹಿತ ರೈಲು ಚಾಲನೆಗಾಗಿ ಈ ಯೋಜನೆ ಯನ್ನು ಜಾರಿ ಮಾಡಲಾಯಿತು. ಜರ್ಮನಿ ಜತೆಗೂಡಿ ಈ ಹೈಡ್ರೋಜನ್‌ ರೈಲುಗಳ ತಯಾರಿಕೆಯನ್ನು ಆರಂಭಿಸಿದ ಭಾರತವು ಇದೀಗ ಅದರ ಅಂತಿಮ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಹಳಿಗಳ ಮೇಲೆ ನಾವು ಹೈಡ್ರೋಜನ್‌ ಚಾಲಿತ ರೈಲುಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ಸಂಚರಿಸುವ ದಿನಗಳು ದೂರವೇನೂ ಇಲ್ಲ.

ವರ್ಷಾಂತ್ಯಕ್ಕೆ ಪರೀಕ್ಷಾರ್ಥ ರೈಲು ಸಂಚಾರ
ಇದೇ ಡಿಸೆಂಬರ್‌ ತಿಂಗಳನಿಂದ ಹೈಡ್ರೋಜನ್‌ ರೈಲುಗಳ ಪರೀûಾರ್ಥ ಓಡಾಟ ಆರಂಭಿಸಲು ಕೇಂದ್ರ ಸರಕಾರ‌ ಸಜ್ಜಾಗಿದೆ. ಹರಿಯಾಣದ ಜಿಂದ್‌- ಸೋನಿಪತ್‌ ಮಾರ್ಗದಲ್ಲಿ ಮೊದಲಿಗೆ ಪುಟಾಣಿ ರೈಲನ್ನು ಪ್ರಾಯೋಗಿಕವಾಗಿ ಓಡಿಸಲಾಗುವುದು. ಇದರ ಸಾಧಕ-ಬಾಧಕ ನೋಡಿ ಮುಂದಿನ ಯೋಜನೆಗೆ ಹೆಜ್ಜೆ ಇಡಲಾಗುವುದು. ಜರ್ಮನಿಯ ಟಿಯುಡಿ- ಎಸ್‌ಯುಡಿ ಜತೆಗೆ ಒಪ್ಪಂದ ಮಾಡಿಕೊಂಡಿರುವ ರೈಲ್ವೇ ಇಲಾಖೆ, ಈ ಸಂಸ್ಥೆ ಯಿಂದ ರೈಲಿನ ಆಡಿಟ್‌ ನಡೆಸಲು ತೀರ್ಮಾನಿಸಿದೆ. ರೈಲಿನ ಮೂಲ ಮಾದರಿ (ಪ್ರೋಟೋಟೈಪ್‌) ಚೆನ್ನೈಯ ರೈಲ್ವೇ ಕೋಚ್‌ ಫ್ಯಾಕ್ಟರಿಯಲ್ಲಿ ನಿರ್ಮಾಣ ಮಾಡ ಲಾಗುತ್ತಿದೆ. ಇದಲ್ಲದೇ ಈ ರೈಲುಗಳಿಗಾಗಿ ಹೈಡ್ರೋಜನ್‌ ಇಂಧನ ಕೋಶ ಗಳನ್ನೊಳಗೊಂಡ 5 ನಿರ್ವಹಣ ವಾಹನಗಳನ್ನೂ ಸಿದ್ಧಪಡಿಸಲಾಗುತ್ತಿದ್ದು, ಪ್ರತಿ ಘಟಕಕ್ಕೂ 10 ಕೋಟಿ ರೂ. ವೆಚ್ಚ ಮಾಡಲಾಗಿದೆ.

8 ಪಾರಂಪರಿಕ ತಾಣಗಳಿಗೆ ರೈಲು ಸೇವೆ
ಈ ಹೈಡ್ರೋಜನ್‌ ರೈಲುಗಳ ಯಶಸ್ವಿ ಸಂಚಾರಕ್ಕಾಗಿ ಸಿಸ್ಟಮ್‌ ಇಂಟಿಗ್ರೇಶನ್‌ ಯುನಿಟ್‌ ಬ್ಯಾಟರಿ ಹಾಗೂ ಫ್ಯೂಯಲ್‌ ಯುನಿಟ್‌ ಸಿಂಕ್ರೋನೈಸೇಶನ್‌ ಪರೀಕ್ಷೆ ನಡೆಸಲಾಗಿದೆ ಎಂದು ರೈಲ್ವೇ ಸಚಿವಾಲಯ ಹೇಳಿದೆ. ಪ್ರವಾಸೋದ್ಯಮದಲ್ಲಿ ಈ ರೈಲುಗಳು ಅತೀದೊಡ್ಡ ಮೈಲುಗಲ್ಲಾಗಲಿದೆ. ಆರಂಭಿಕ ಹಂತ ದಲ್ಲಿ ದೇಶದ 8 ಪಾರಂಪರಿಕ ತಾಣಗಳಲ್ಲಿ ಈ ರೈಲು ಓಡಿಸಲಾ ಗುವುದು ಎಂದು ಸರಕಾರ‌ ತಿಳಿಸಿದೆ. ಅದರಂತೆ ಮಾಥೆರಾನ್‌ ಹಿಲ್‌, ಡಾರ್ಜಿಲಿಂಗ್‌ ಹಿಮಾಲಯ, ಕಲ್ಕಾ ಶಿಮ್ಲಾ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾNç, ಪಾತಪಲ್ಪಾನಿ ಕಲಾಕುಂಡ್‌, ನೀಲಗಿರಿ ಮೌಂಟೇನ್‌ ರೈಲ್ವೇಸ್‌, ಮಾರ್ವಾರ್‌-ಗೋರಂ ಘಾಟ್‌ ಪ್ರದೇಶಗಳಲ್ಲಿ 8 ಈ ರೈಲು ಸಂಚರಿಸಲಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನವೂ ದೊರೆಯಲಿದೆ.

Advertisement

ಹೈಡ್ರೋಜನ್‌ ಹಬ್‌ ಆಗಲು ಮೊದಲ ಹೆಜ್ಜೆ
ಭವಿಷ್ಯದ ಇಂಧನ ಎಂದು ಹೈಡ್ರೋಜನ್‌ ಅನ್ನು ಪರಿಗಣಿಸಲಾ ಗಿದೆ. ಭಾರತವು ಅತೀ ಹೆಚ್ಚು ಹೈಡ್ರೋಜನ್‌ ಉತ್ಪಾದನೆ, ಬಳಕೆ, ಸಂಗ್ರಹ ಮಾಡಿ ಹೈಡ್ರೋಜನ್‌ನ ದೊಡ್ಡ ಕೇಂದ್ರ ಎನಿಸಿಕೊಳ್ಳಲು ಮುಂದಡಿ ಇಟ್ಟಿದೆ. ವಿಶ್ವದ ಹಲವು ದೊಡ್ಡ ರಾಷ್ಟ್ರಗಳು ಈಗಾಗಲೇ ಹೈಡ್ರೋಜನ್‌ ಅನ್ನು ಎಷ್ಟು ರೀತಿಯಲ್ಲಿ ಇಂಧನ ವಾಗಿ ಬಳಸಬಹುದೆಂಬ ಬಗ್ಗೆ ಸಂಶೋಧನೆಯಲ್ಲಿ ತೊಡಗಿವೆ. ಈ ಸಾಲಿಗೆ ಭಾರತವೂ ಸೇರ್ಪಡೆಯಾಗಿದ್ದು, ಹೈಡ್ರೋಜನ್‌ ಸದುಪಯೋಗ ಪಡೆಯುತ್ತಿರುವ ರಾಷ್ಟ್ರಗಳ ಸಾಲಲ್ಲಿ ಮುಂಚೂ ಣಿಯಲ್ಲಿದೆ. ಆರಂಭಿಕ ಹಂತದಲ್ಲಿ ನಿರ್ವಹಣೆ ಹೆಚ್ಚಿದ್ದು, ರೈಲು ಗಳು ಕಡಿಮೆಯಿರುವ ಕಾರಣ ವೆಚ್ಚ ಅಧಿಕವಾಗಿರಲಿದ್ದು ಬಳಿಕ ರೈಲುಗಳ ಸಂಖ್ಯೆ ಹೆಚ್ಚಾಗುತ್ತಾ ಖರ್ಚು ಕಡಿಮೆ ಆಗಲಿದೆ. ನಿರ್ವಹಣ ವೆಚ್ಚ ಹೆಚ್ಚಿರುವ ಕಾರಣ ಈಗಿನ ಡೀಸೆಲ್‌, ವಿದ್ಯುತ್‌ ಚಾಲಿತ ರೈಲುಗಳಿಗಿಂತ ಇವು ಕೊಂಚ ದುಬಾರಿಯಾಗಿರಲಿವೆ.

ಹರಿಯಾಣದ ಜಿಂದ್‌ನಲ್ಲಿ ಇಂಧನ ಘಟಕವೂ ಆರಂಭ
ದೇಶದ ಮೊದಲ ಹೈಡ್ರೋಜನ್‌ ರೈಲು ಸಂಚರಿಸಲಿರುವ ಜಿಂದ್‌ನಲ್ಲಿ ಇಂಧನ ತುಂಬುವ ಘಟಕವನ್ನೂ ಸ್ಥಾಪಿಸಲು ಸರಕಾರ‌ ಯೋಜಿಸಿದೆ. ಜಿಂದ್‌ನಲ್ಲಿ 1 ಮೆಗಾವ್ಯಾಟ್‌ ಪಾಲಿಮರ್‌ ಎಲೆಕ್ಟ್ರೋಲೈಟ್‌ ಮೆಂಬ್ರೇನ್‌ ಎಲೆಕ್ಟ್ರೋ ಲೈಸರ್‌ ಸ್ಥಾಪಿಸಿ ಅದರ ಮೂಲಕ ರೈಲಿಗೆ ಹೈಡ್ರೋಜನ್‌ ಒದಗಿಸಲಾಗು ವುದು. ಈ ಎಲೆಕ್ಟ್ರೋಲೈಸರ್‌ ನಿರಂತರ ಕಾರ್ಯ ನಿರ್ವಹಿಸಲಿದ್ದು, ದಿನಕ್ಕೆ 430 ಕೆ.ಜಿ.ಯಷ್ಟು ಹೈಡ್ರೋಜನ್‌ ಉತ್ಪಾದಿಸಲಿದೆ. 3 ಟನ್‌ನಷ್ಟು ಹೈಡ್ರೋಜನ್‌ ಸಂಗ್ರಹಿಸಬಲ್ಲ ಘಟಕ ಇದಾಗಿರಲಿದ್ದು, ಇದರೊಂದಿಗೆ ಕಂಪ್ರಸ್ಸರ್‌, ಪ್ರೀ-ಕೂಲ್‌ ಇಂಟಿಗ್ರೇಟೆಡ್‌ 2 ಡಿಸ್ಪೆನ್ಸರ್‌ ಇರಲಿವೆ. ಇವು ರೈಲುಗಳಿಗೆ ತ್ವರಿತವಾಗಿ ಇಂಧನ ತುಂಬಲು ಸಹಾಯ ಮಾಡಲಿದೆ.

ಅನುಕೂಲಗಳೇನು?
-ಹೈಡ್ರೋಜನ್‌ ರೈಲು ಸಾಂಪ್ರದಾಯಿಕ ರೈಲುಗಳಂತೆ ಇಂಗಾಲ ಮತ್ತಿತರ ರಾಸಾಯನಿಕ ಅನಿಲ ಹೊರಹಾಕಲ್ಲ.
-ರೈಲಿನಿಂದ ಕೇವಲ ನೀರಿನ ಆವಿ ಮಾತ್ರ ಹೊರಬರುತ್ತದೆ. ಹಾಗಾಗಿ ಪರಿಸರ ಸ್ನೇಹಿ ರೈಲು ಎನಿಸಲಿದೆ.
-ವಿದ್ಯುತ್‌ ಕೋಶದಲ್ಲಿನ ಸಂಗ್ರಹಣ ಸಾಮರ್ಥ್ಯದಿಂದಾಗಿ ಸುದೀರ್ಘ‌ ಸಂಚಾರ, ಗ್ರಾಮಾಂತರ ಪ್ರದೇಶಗಳ ಪ್ರಯಾಣಕ್ಕೆ ಅನುಕೂಲಕರ.
-ಡೀಸೆಲ್‌, ವಿದ್ಯುತ್‌ ಚಾಲಿತ ರೈಲಿ ನಂತೆ ಹೆಚ್ಚು ಶಬ್ದ ಉಂಟು ಮಾಡದೇ ನಿಶ್ಶಬ್ದವಾಗಿ ಸಂಚರಿಸುವುದರಿಂದ
ಶಬ್ದ ಮಾಲಿನ್ಯವೂ ಕಡಿಮೆ.
-ವಿದ್ಯುತ್‌ ವಾಹಕ ಹಳಿಗಳು ಹಾಗೂ ವಿದ್ಯುತ್‌ ವಾಹಕವಲ್ಲದ ಹಳಿಗಳು ಎಲ್ಲ ರೀತಿಯ ಹಳಿಗಳಲ್ಲೂ ಸಂಚರಿಸುವ ಸಾಮರ್ಥ್ಯ.

ಸವಾಲುಗಳೇನು?
-ಹೈಡ್ರೋಜನ್‌ ಉತ್ಪಾದನೆ, ಸಂಗ್ರ­ಹಣೆ, ವಿತರಣೆಗಾಗಿ ಪ್ರತ್ಯೇಕ ಘಟಕ, ಮೂಲಸೌಕರ್ಯ ಸ್ಥಾಪನೆ ಅಗತ್ಯ
-ನವೀಕರಿಸಬಹುದಾದ ಮೂಲಗಳಿಂದ ಪಡೆದರೂ, ಪಳೆಯುಳಿಕೆ ಮೂಲಗಳನ್ನೂ ಅವಲಂಬಿಸಬೇಕಾದ ಅನಿವಾರ್ಯತೆ
-ಪಳೆಯುಳಿಕೆ ಮೂಲದಿಂದ ಹೈಡ್ರೋ­ ಜನ್‌ ಪಡೆದಾಗ ಇದರಿಂದ ಇಂಗಾಲ ಹೊರಸೂಸುವಿಕೆಯ ಕಳವಳ
-ಹೈಡ್ರೋಜನ್‌ ಇಂಧನ ಕೋಶಗಳ ಸುರಕ್ಷಿತ ನಿರ್ವಹಣೆ ಮುಖ್ಯ. ಹೈಡ್ರೋಜನ್‌ ಸುಡುವ ಅನಿಲವಾದ ಕಾರಣ ಸುರಕ್ಷ ಕ್ರಮಗಳು ಅಗತ್ಯ.
-ರೈಲುಗಳ ತಯಾರಿಗೆ ಆರಂಭಿಕ ವೆಚ್ಚ ಹೆಚ್ಚು, ಡೀಸೆಲ್‌ ಅಥವಾ ವಿದ್ಯುತ್‌ನಂತೆ ಸುಲಭದಲ್ಲಿ ಸಿಗದೇ ಇರುವ ಇಂಧನವಾದ ಕಾರಣ ವೆಚ್ಚ ಅಧಿಕ.

ಜರ್ಮನಿಯಲ್ಲಿ ಮೊದಲ ಹೈಡ್ರೋಜನ್‌ ರೈಲು
ವಿಶ್ವದಲ್ಲೇ ಮೊದಲ ಬಾರಿಗೆ ಜರ್ಮನಿಯಲ್ಲಿ ಹೈಡ್ರೋಜನ್‌ ರೈಲು ಸಂಚಾರ ಆರಂಭಿಸಿತು. ಜರ್ಮನಿಯಿಂದ ಆರಂಭವಾದ ಕೊರಾ ಡಿಯಾ ಐಲಿಂಟ್‌ ರೈಲು ವಿಶ್ವದ ಮೊದಲ ಹೈಡ್ರೋಜನ್‌ ಚಾಲಿತ ರೈಲು ಎನಿಸಿದೆ. ಬ್ರೆಮೆವೊರ್ಡೆ- ಲೋವರ್‌ ಸ್ಯಾಕೊನಿ ಮಾರ್ಗದಲ್ಲಿ ಇದು 2022ರ ಆಗಸ್ಟ್‌ನಲ್ಲಿ ಸಂಚಾರ ಆರಂಭಿಸಿತು. ಹೈಡ್ರೋಜನ್‌ ಇಂಧನವಾಗಿ ಬಳಸಿ ಪ್ರಯಾಣಿಕರನ್ನು ಹೊತ್ತೂಯ್ದ ಮೊದಲ ವಾಣಿಜ್ಯ ರೈಲು ಇದು.

ಬೇರೆ ಯಾವ ದೇಶದಲ್ಲಿ ಈ ರೈಲುಗಳಿವೆ?
ಜರ್ಮನಿ ಮಾತ್ರವಲ್ಲದೇ ಚೀನ, ಫ್ರಾನ್ಸ್‌, ಸ್ವೀಡನ್‌ನಲ್ಲಿ ಹೈಡ್ರೋಜನ್‌ ರೈಲುಗಳು ಈಗಾಗಲೇ ಓಡಾಟ ನಡೆಸುತ್ತಿವೆ. ಹೈಡ್ರೋಜನ್‌ ಆಧರಿತ ರೈಲು ಹೊಂದಿ ರಾಷ್ಟ್ರಗಳ ಪಟ್ಟಿಗೆ ಭಾರತವು 5ನೇ ರಾಷ್ಟ್ರವಾಗಿ ಸೇರ್ಪಡೆಯಾಗಲಿದೆ. ಈ ನಡುವೆ ಸೌದಿ ಅರೇಬಿಯಾದಲ್ಲಿ ಪರೀಕ್ಷಾರ್ಥ ರೈಲು ಓಡಾಟವನ್ನು ಪೂರ್ಣ­ಗೊಳಿಸಲಾಗಿದೆ. ಅಮೆರಿಕ, ಬ್ರಿಟನ್‌, ಜಪಾನ್‌ನಲ್ಲೂ ಈ ರೈಲು ಪ್ರಾಯೋಗಿಕ ಹಂತದಲ್ಲಿದೆ.

-ತೇಜಸ್ವಿನಿ. ಸಿ.ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next