Advertisement

ಕೆಸರು ಗುಪ್ಪಿ 

04:12 PM Sep 22, 2018 | |

ಈ ಹಕ್ಕಿಯನ್ನು ಕೆಂಪು ಕೆಸರ ಗುಪ್ಪಿ ,ಕಂದುಗೆಂಪು ಗುಪ್ಪಿ ಎಂದು ಕರೆಯುವುದುಂಟು.Chestnut bittern  (Lxobrychus cinnamomcus)  RM -Indian Pond heron+, Village hen ಮುದುಡಿ ಕುಳಿತುಕೊಳ್ಳುವ, ಕೊಕ್ಕನ್ನು ಆಕಾಶದೆಡೆ ಚಾಚಿರುವ ಕೊಕ್ಕರೆ ಕುಟುಂಬದಲ್ಲಿನ ಉಪಜಾತಿಗೆ ಈ ಹಕ್ಕಿ ಸೇರಿದೆ. 

Advertisement

 ಇದು, ಕೆಮ್ಮಣ್ಣು ಕೆಸರಿನ ಬಣ್ಣದ ಹಕ್ಕಿ. ಲ್ಯಾಟಿನ್‌ ಭಾಷೆಯ- ಬುಟಿಯೋ+ಟರಸ್‌ ಎಂಬ ಎರಡು ಶಬ್ದ ಸೇರಿ ಬಿಟರಿನ್‌ ಎಂಬ ಹೆಸರು ಬಂದಿದೆ.  ಕೊಕ್ಕರೆಯನ್ನು ಇಂಗ್ಲಿಷಿನಲ್ಲಿ ಈಗ್ರೆಟ್‌, ಹೆರಾನ್‌ ಎಂದು ಎನ್ನುತ್ತಾರೆ.  ಕನ್ನಡದಲ್ಲಿ ಕೊಕ್ಕರೆ , ಬೆಳ್ಳಗಿರುವುದರಿಂದ ಬೆಳ್ಳಕ್ಕಿ ಅನ್ನುತ್ತಾರೆ.  ಹಕ್ಕಿಯ ಬಣ್ಣ ಕೆಂಪಾಗಿರುವುದರಿಂದ ಇದನ್ನು -ಕೆಸರು ಗುಪ್ಪಿ ಅನ್ನುವ ಹೆಸರಿಸಿದೆ.  ಜೌಗು ಪ್ರದೇಶ -ಜೊಂಡು ಹುಲ್ಲು ಬೆಳೆದಿರುವ ಕಡೆ ತನ್ನ ಇರುನೆಲೆ ಮಾಡಿಕೊಂಡಿರುತ್ತದೆ.  

 ಊರು ಕೋಳಿ, ಬಕಪಕ್ಷಿಯನ್ನು ಹೋಲುತ್ತದೆ ಈ ಗುಪ್ಪಿ. ನೋಡುವುದಕ್ಕೆ  ಕೊಕ್ಕರೆಗಿಂತ ಚಿಕ್ಕ, ದಪ್ಪ ಕುತ್ತಿಗೆಯನ್ನು ಹೊಂದಿದೆ.  ಕೊಕ್ಕರೆಯ ಕೊಕ್ಕಿಗಿಂತ ದಪ್ಪ ಚುಂಚು -ಈ ಗುಪ್ಪಿಗೆ ಇದೆ. ಕೆಸರು ಗುಪ್ಪಿ ಮತ್ತು ಕೊಳದಬಕ ಪಕ್ಷಿಗೆ ಬಣ್ಣದ ಹೋಲಿಕೆ ಇರುವುದರಿಂದ ಇವೆರಡೂ ಒಂದೇ ಇರಬಹುದಾ ಎಂಬ ಭ್ರಮೆ ಉಂಟುಮಾಡುತ್ತದೆ.   ಆದರೆ ಸೂಕ್ಷ್ಮವಾಗಿ ಇದರ ಲಕ್ಷಣ, ಬಣ್ಣದ ಗೆರೆ, ಸ್ವಭಾವ ನೋಡಿ ಇವೆರಡರಲ್ಲಿಯ ವ್ಯತ್ಯಾಸ ತಿಳಿಯಬಹುದು. 

ಕೆಸರು ಗುಪ್ಪಿ -ಸುಮಾರು 38 ಸೆ.ಮೀ. ದೊಡ್ಡದಾಗಿರುತ್ತದೆ.  ಇದರ ತೂಕ 100-160 ಗ್ರಾಂ.  ಗಂಡು ಹಕ್ಕಿಯ ಎದೆ, ಕುತ್ತಿಗೆವರೆಗೆ ಹಳದಿ ಮಿಶ್ರಿತವಾಗಿರುತ್ತದೆ. ಜೊತೆಗೆ  ಅಚ್ಚ ಕಂದುಗೀರುಗಳಿಂದ ಕೂಡಿರುತ್ತದೆ. ಎದೆ ಕುತ್ತಿಗೆಯ ಕೆಳಭಾಗದಲ್ಲಿ ಕೆಂಪು ಮಿಶ್ರಿತ ಹಳದಿ ಬಣ್ಣ ಇದೆ.  ಹೆಣ್ಣು ಹಕ್ಕಿಯ ಬಣ್ಣ ಸ್ವಲ್ಪ ಮಾಸಲು ಇರುತ್ತದೆ. ಹಳದಿಮಿಶ್ರಿತ ಕೆಂಪು ಬಣ್ಣದ ಮೇಲೆ, ತಿಳಿಯಾದ ಕಂದು ಗೀರು ಇರುವುದನ್ನು ಕಾಣಬಹಬುದು. ಕಾಲು -ನೀಲಿಮಿಶ್ರಿತ ಹಳದಿ, ಕೊಕ್ಕು ಕೆಸರು ಗೆಂಪು ಇದ್ದು, ಚುಂಚಿನ ಮೇಲ್ಭಾಗ ಬೂದು ಗಪ್ಪು ಇದೆ. 

Advertisement

ಜೌಗು ಪ್ರದೇಶ, ಉಪ್ಪು ನೀರಿನ ಗಜನೀ ಪ್ರದೇಶದಲ್ಲಿ -ಕೆಸರು ಹುಳು, ಇಲ್ಲವೇ ಮೀನು ,ಸೀಗಡಿ ಮುಂತಾದ ಜಲಚರಗಳನ್ನು ಸುಮ್ಮನೆ ಕುಳಿತು, ಅದು ತನ್ನ ಸಮೀಪಬಂದಾಗ ತನ್ನ ಕುತ್ತಿಗೆ ಉದ್ದಮಾಡಿ  ಲಬಕ್‌ ಅಂತ ಹಿಡಿದು ತಿನ್ನುತ್ತದೆ.  ಬೇಟೆ ಹತ್ತಿರ ಹೋಗುವವರೆಗೂ ಸುಮ್ಮನೆ ಹುಲ್ಲು ಜೊಂಡಿನಲ್ಲಿ ಅಡಗಿ ಕುಳಿತಿರುತ್ತದೆ. ನಂತರ, ತಕ್ಷಣ ಹಾರಿ ಬೆಚ್ಚಿ ಬೀಳಿಸುತ್ತದೆ. ಸಾಮಾನ್ಯವಾಗಿ ಅಡ್ಡಾದಿಡ್ಡಿಯಾಗಿ, ಗಾಳಿಯಲ್ಲಿ ತೂರಾಡಿದಂತೆ ಹಾರುವುದು ಇದರ ವಿಶೇಷ. 

 ಹುಳ, ಸೊಳ್ಳೆ, ಸೊಳ್ಳೆಮೊಟ್ಟೆ ಮತ್ತು ಕೆಲವೊಮ್ಮೆ ಮೃದ್ವಂಗಿಗಳನ್ನೂ ತಿನ್ನುವುದರಿಂದ ನೀರಿನ ಸ್ವಚ್ಚತೆ ಕಾರ್ಯದಲ್ಲಿ ಇದರ ಪಾತ್ರ ಹಿರಿದು. ಜುಲೈ-ಸೆಪ್ಟೆಂಬರ್‌ ತಿಂಗಳುಗಳು ಇದು ಮರಿಮಾಡುವ ಸಮಯ. ಆದರೂ ಮನ್‌ಸೂನ್‌ ಆಧರಿಸಿ ಈ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವುದಿದೆ. 

 ಜೊಂಡು ಹುಲ್ಲಿನ ನಡುವೆ, ನೀರಿನ ಜಾಗದ ಜೊಂಡಿನಲ್ಲಿ -ತೆಪ್ಪದಂತೆ ಗೂಡು ನಿರ್ಮಿಸಿ, ಅದರಲ್ಲಿ4-5 ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಮಳೆ ನೀರುತುಂಬಿದ ಕೆಸರು ಹೊಂಡದ ತೀರದಲ್ಲೂ ಗೂಡನ್ನು ನಿರ್ಮಿಸುತ್ತದೆ. ಈ ಹಕ್ಕಿಯನ್ನು ಮಾಂಸಕ್ಕಾಗಿ ಹಿಡಿಯುತ್ತಾರೆ.  ಅದರಲ್ಲೂ ಮೀನಿನ ಮರಿ, ಎರೆಹುಳುವನ್ನು ಗಾಳಕ್ಕೆ ಸಿಕ್ಕಿಸಿ, ಈ ಹಕ್ಕಿಯನ್ನು ಹಿಡಿಯುವುದರಿಂದಲೂ, ಕಾಂಡ್ಲಾ, ಶೀಗಡಿಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದಲೂ  ಇದರ ಸಂಖ್ಯೆ ಕ್ಷೀಣಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next