Advertisement

ಜಿ20ಯಲ್ಲಿ ಪ್ರಧಾನಿ ಮಿಂಚು; ಅಮೆರಿಕ ಅಧ್ಯಕ್ಷರ ಜತೆಗೆ ಮೋದಿ ಮಾತುಕತೆ

08:55 PM Nov 15, 2022 | Team Udayavani |

ಬಾಲಿ: ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ ಚೀನಾ ಜತೆಗೆ ಸಂಘರ್ಷ ನಡೆದು ಎರಡು ವರ್ಷಗಳು ಕಳೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಲ್ಲಿನ ಅಧ್ಯಕ್ಷ ಕ್ಸಿಜಿನ್‌ಪಿಂಗ್‌ ಜತೆಗೆ ಭೇಟಿಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ಶೃಂಗಸಮ್ಮೇಳನ ಪ್ರಯುಕ್ತ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿಜಿನ್‌ಪಿಂಗ್‌ ಪರಸ್ಪರ ಕೈಕುಲುಕಿ ಮಾತನಾಡಿದ್ದಾರೆ.

Advertisement

ಬುಧವಾರ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿದಂತೆ ಪ್ರಮುಖ ನಾಯಕರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಆದರೆ, ಚೀನಾ ಅಧ್ಯಕ್ಷರ ಜತೆಗೆ ಪ್ರತ್ಯೇಕ ಭೇಟಿ – ಮಾತುಕತೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

2020ರಲ್ಲಿ ಚೀನ ಸೈನಿಕರ ಜತೆಗೆ ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಉಜ್ಬೇಕಿಸ್ತಾನದ ಸಮರ್‌ಕಂಡ್‌ನ‌ಲ್ಲಿ ನಡೆದಿದ್ದ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಸಭೆಯಲ್ಲಿ ಇಬ್ಬರು ನಾಯಕರು ಪರಸ್ಪರ ಎದುರಾಗಿದ್ದರೂ, ಮಾತುಕತೆ ನಡೆದಿರಲಿಲ್ಲ.

ಉಕ್ರೇನ್‌ ವಿಚಾರ ಚರ್ಚೆ?
ಔತಣಕೂಟಕ್ಕೆ ಮೊದಲು ಪ್ರಧಾನಿಯವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ಪ್ರಧಾನಿ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್‌ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನವಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕೃತಕ ಬುದ್ಧಿಮತ್ತೆ, ಹೊಸ ರೀತಿಯ ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಸುವ ಮಾತಾಡಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆ ಪ್ರಕಾರ “ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಇಬ್ಬರೂ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಕ್ವಾಡ್‌ ಮತ್ತು ಇತರ ಅಂತಾರಾಷ್ಟ್ರೀಯ ಒಕ್ಕೂಟಗಳಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವ ತೃಪ್ತಿಕರವಾಗಿದೆ ಎಂದು ಇಬ್ಬರು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Advertisement

ಸುನಕ್‌ ಜತೆಗೆ ಭೇಟಿ:
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಜತೆಗೆ ಪ್ರಧಾನಿ ಮೋದಿ ಕೆಲ ಕಾಲ ಭೇಟಿಯಾಗಿದ್ದರು. ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾದ ಬಳಿಕ ಮೋದಿಯವರ ಜತೆಗೆ ಮೊದಲ ಭೇಟಿ ಇದಾಗಿದೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌, ಇಂಡೋನೇಷ್ಯಾ, ಸ್ಪೇನ್‌, ಸಿಂಗಾಪುರ, ಜರ್ಮನಿ, ಆಸ್ಟ್ರೇಲಿಯಾ ಪ್ರಧಾನಿಗಳ ಜತೆಗೆ ಬುಧವಾರ ಪ್ರಧಾನಿ ವಿಸ್ತೃತ ಮಾತುಕತೆ ನಡೆಸಲಿದ್ದಾರೆ.

ಆಹಾರ ಕೊರತೆ ತಪ್ಪಿಸಿ
ಸದ್ಯ ಉಂಟಾಗಿರುವ ರಸಗೊಬ್ಬರ ಕೊರತೆಯೇ ಮುಂದಿನ ದಿನಗಳಲ್ಲಿ ಆಹಾರದ ಕೊರತೆಗೆ ಕಾರಣವಾಗಲಿದೆ. ಅದನ್ನು ನಿವಾರಿಸಲು ರಾಷ್ಟ್ರಗಳ ನಡುವೆ ಪೂರೈಕೆಯ ವ್ಯವಸ್ಥೆಯ ಸರಪಳಿ ಚೆನ್ನಾಗಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೊನಾ ಅವಧಿಯಲ್ಲಿ ಭಾರತ ಇದರ ದೇಶಗಳಲ್ಲಿ ಆಹಾರ ಧಾನ್ಯಗಳನ್ನು ಪೂರೈಸುವುದರ ಜತೆಗೆ, ದೇಶದ 130 ಕೋಟಿ ಮಂದಿಗೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆಹಾರ ಒದಗಿಸಿತ್ತು ಎಂದರು. ಆಹಾರದ ಕೊರತೆ ನೀಗುವ ನಿಟ್ಟಿನಲ್ಲಿ ಭಾರತದಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಜತೆಗೆ ಪೌಷ್ಟಿಕಾಂಶಯುಕ್ತವಾಗಿರುವ ಸ್ಥಳೀಯ ಆಹಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.

ಸಂಧಾನವೇ ಸೂಕ್ತ:
ಉಕ್ರೇನ್‌ನಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟಿಗೆ ಕದನ ವಿರಾಮ ಮತ್ತು ರಾಜತಾಂತ್ರಿಕ ಮಾರ್ಗವೇ ಸೂಕ್ತವೆಂದರು. ಹಲವು ಸಂದರ್ಭಗಳಲ್ಲಿ ಅದುವೇ ಪರಿಹಾರ ಸೂತ್ರ ಎಂಬುದನ್ನು ಪ್ರತಿಪಾದಿಸಿದ್ದೆ ಎಂದರು. ಎರಡನೇ ಮಹಾಯುದ್ಧ ಕಳೆದ ಶತಮಾನದಲ್ಲಿ ಭಾರೀ ಹಾನಿ ಉಂಟು ಮಾಡಿತ್ತು ಎಂದು ಎಂದು ಮೋದಿ ನೆನಪಿಸಿಕೊಂಡರು.

ಗಾಂಧಿ- ಬುದ್ಧನ ನಾಡಿನಲ್ಲಿ:
ಮುಂದಿನ ತಿಂಗಳ 1ರಿಂದ ಒಂದು ವರ್ಷ ಕಾಲ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳಲಿದೆ. ಅದಕ್ಕೆ ಪೂರಕವಾಗಿ ಮಾತನಾಡಿದ ಪ್ರಧಾನಿ, “ಬುದ್ಧ ಹಾಗೂ ಗಾಂಧಿಯವರು ಜನಿಸಿದ ಪವಿತ್ರ ನೆಲದಿಂದ ಜಗತ್ತಿಗೆ ಶಾಂತಿಯ ಸಂದೇಶವನ್ನು ಒಕ್ಕೂಟದ ನಾಯಕರು ನೀಡಲಿದ್ದೇವೆ ಎಂಬ ವಿಶ್ವಾಸ ಇದೆ’ ಎಂದರು. ನಮ್ಮ ದೇಶದ ಅಧ್ಯಕ್ಷತೆಯ ಅವಧಿಯಲ್ಲಿ ಜಗತ್ತನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಸಹಮತದಿಂದ ಪರಿಹಾರ ಕಂಡುಕೊಳ್ಳಲು ಶ್ರಮಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next