Advertisement

ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ನೀರ್ಗಲ್ಲಿನಡಿ ಸಿಕ್ಕಿದವು 1966ರ ಭಾರತದ ಪತ್ರಿಕೆಗಳು!

03:20 AM Jul 14, 2020 | Hari Prasad |

ಪ್ಯಾರಿಸ್‌: ಫ್ರೆಂಚ್‌ ಆಲ್ಪ್ಸ್ ಪರ್ವತ ಶ್ರೇಣಿಯ ಮಾಂಟ್‌ ಬ್ಲಾಂಕ್‌ ನೀರ್ಗಲ್ಲುಗಳು ಕರಗುತ್ತಾ ಸಾಗಿದಂತೆ, ಹೊಸ ಹೊಸ ರಹಸ್ಯಗಳು ಬಹಿರಂಗಗೊಳ್ಳುತ್ತಿವೆ.

Advertisement

ಹಲವು ದಶಕಗಳ ಹಿಂದೆ ಹೂತುಹೋಗಿದ್ದ ಪ್ರಶ್ನೆಗಳಿಗೆ ಈ ನೀರ್ಗಲ್ಲಿನಡಿ ಒಂದೊಂದಾಗಿ ಉತ್ತರಗಳು ಸಿಗಲಾರಂಭಿಸಿವೆ.

ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, 1966ರಲ್ಲಿ ಇಂದಿರಾಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ ದಿನ ಪ್ರಕಟಗೊಂಡ ವೃತ್ತಪತ್ರಿಕೆಗಳ ಕಟ್ಟೊಂದು ನೀರ್ಗಲ್ಲಿನ ಸಮೀಪ ಪ್ರತ್ಯಕ್ಷವಾಗಿದೆ.

ಈ ಪತ್ರಿಕೆಗಳು ಅಲ್ಲಿಗೆ ತಲುಪಿದ್ದು ಹೇಗೆ ಎನ್ನುವುದೇ ಕುತೂಹಲಕಾರಿ ಸಂಗತಿ!

ಅದು 1966ರ ಜನವರಿ 24. ಬರೋಬ್ಬರಿ 177 ಮಂದಿಯನ್ನು ಹೊತ್ತ ಏರ್‌ಇಂಡಿಯಾ ಬೋಯಿಂಗ್‌ 707 ವಿಮಾನವು ಮುಂಬಯಿನಿಂದ ಲಂಡನ್‌ಗೆ ಹೊರಟಿತ್ತು.

Advertisement

ದಾರಿ ಮಧ್ಯೆ ಪೈಲಟ್‌ನ ಅಚಾತುರ್ಯದಿಂದಾಗಿ ಮಾಂಟ್‌ ಬ್ಲಾಂಕ್‌ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡಿತು. ಒಳಗಿದ್ದ ಎಲ್ಲ 177 ಮಂದಿಯೂ ಸಾವಿಗೀಡಾದರು.

ಭಾರತೀಯ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಡಾ| ಹೋಮಿ ಜಹಾಂಗೀರ್‌ ಭಾಭಾ ಅವರೂ ಮೃತಪಟ್ಟಿದ್ದು ಇದೇ ದುರಂತದಲ್ಲಿ.

ಕೆಫೆ ಮಾಲೀಕನ ಕೈಗೆ ಭಾರತದ ಪತ್ರಿಕೆ:


ಈಗ ಸಿಕ್ಕಿರುವ ಸುಮಾರು 12 ಪತ್ರಿಕೆಗಳ ಕಟ್ಟು ಅದೇ ವಿಮಾನದಲ್ಲಿದ್ದ ವಸ್ತುಗಳಲ್ಲಿ ಒಂದು ಎಂದು ಊಹಿಸಲಾಗಿದೆ. ನ್ಯಾಶನಲ್‌ ಹೆರಾಲ್ಡ್‌ ಮತ್ತು ಎಕನಾಮಿಕ್‌ ಟೈಮ್ಸ್‌ ಪತ್ರಿಕೆಗಳು ಅದರಲ್ಲಿದ್ದು, ಮುಖಪುಟದಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ ಸುದ್ದಿ ಪ್ರಕಟಗೊಂಡಿದೆ.

ಶಿಖರದ ಸಮೀಪ ಅಂದರೆ 4,455 ಅಡಿ ಎತ್ತರದಲ್ಲಿ ಕೆಫೆ ನಡೆಸುತ್ತಿರುವ ತಿಮೋತಿ ಮೋಟಿನ್‌ ಎಂಬಾತನಿಗೆ ಈ ಪತ್ರಿಕೆಗಳು ಸಿಕ್ಕಿವೆ. ವಿಮಾನ ಪತನಗೊಂಡ ಸ್ಥಳದಿಂದ ಈತನ ಕೆಫೆಗೆ 45 ನಿಮಿಷ ನಡೆಯಬೇಕು. ಈ ನೀರ್ಗಲ್ಲಿನಲ್ಲಿ ಸಿಕ್ಕಿರುವ ಬಹುತೇಕ ಅವಶೇಷಗಳನ್ನು ಮೋಟಿನ್‌ ತನ್ನ ಕೆಫೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾನೆ.
ಈಗ ಈ ಪತ್ರಿಕೆಗಳೂ ನನ್ನ ಅಮೂಲ್ಯ ಸಂಗ್ರಹ ಸೇರುತ್ತದೆ ಎನ್ನುತ್ತಾನೆ ಮೋಟಿನ್‌.

– 177 ಮಂದಿಯನ್ನು ಬಲಿಪಡೆದಿದ್ದ ದುರಂತ

– ಮುಂಬಯಿಯಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ


– ಮಳಿಗೆಯಲ್ಲಿ ಪತ್ರಿಕೆಗಳ ತುಂಡುಗಳನ್ನು ಪ್ರದರ್ಶನಕ್ಕೆ ಇರಿಸಲು ಕೆಫೆ ಮಾಲಕನ ತೀರ್ಮಾನ

Advertisement

Udayavani is now on Telegram. Click here to join our channel and stay updated with the latest news.

Next