ಸಿಂಗಾಪುರ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗಿನ ಐತಿಹಾಸಿಕ ಶೃಂಗಕ್ಕಾಗಿ ಸಿಂಗಾಪುರಕ್ಕೆ ಬಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಮಹದಾಸೆಯೊಂದಿಗೆ ಮಲೇಶ್ಯದ ಭಾರತ ಸಂಜಾತ 25ರ ಹರೆಯದ ಮಹಾರಾಜ್ ಮೋಹನ್ ಎಂಬಾತ 573 ಡಾಲರ್ ಖರ್ಚು ಮಾಡಿ ಒಂದು ದಿನ ಮೊದಲೇ ಸಿಂಗಾಪುರಕ್ಕೆ ಬಂದು ಟ್ರಂಪ್ ಉಳಿಯಲಿದ್ದ ಶಾಂಗ್ರಿಲಾ ಹೊಟೇಲ್‌ನಲ್ಲಿ ರೂಮ್ ಪಡೆದುಕೊಂಡು ಟ್ರಂಪ್ ಗಾಗಿ ಹೊಟೇಲ್ ಲಾಬಿಯಲ್ಲಿ ತಾಸುಗಟ್ಟಲೆ ಕಾದು ಪ್ರಯೋಜನವಾಗದೆ ಕೊನೆಗೆ ಟ್ರಂಪ್ ಬಳಸುವ ಎಂಟು ಟನ್ ತೂಕದ ಬುಲೆಟ್‌ಪ್ರೂಫ್ ಲಿಮೋಸಿನ್ “ದ ಬೀಸ್ಟ್’ ಕಾರಿನೊಂದಿಗೆ ಸೆಲ್ಫಿ ತೆಗೆದುಕೊಂಡು ಅಷ್ಟಕ್ಕೇ ಅನಿವಾರ್ಯವಾಗಿ ತೃಪ್ತಿಪಟ್ಟ ವಿಲಕ್ಷಣಕಾರಿ ಘಟನೆ ವರದಿಯಾಗಿದೆ.
“ಟ್ರಂಪ್ ಅವರನ್ನು ಭೇಟಿಯಾಗುವ ಸಾಧ್ಯತೆ ಶೇ.1ರಷ್ಟು ಕೂಡ ಇಲ್ಲವೆಂದು ನನಗೆ ಮೊದಲೇ ಗೊತ್ತಿತ್ತು. ಆದರೆ ಅಕಸ್ಮಾತ್ ಅದೃಷ್ಟ ಖುಲಾಯಿಸಿದರೆ ಟ್ರಂಪ್ ಭೇಟಿ ಸಾಧ್ಯವಾದೀತು ಎಂಬ ಒಂದು ಸಣ್ಣ ಆಸೆ ಮನದಾಳದಲ್ಲಿ ಇತ್ತು. ಅದಕ್ಕಾಗಿ 765 ಸಿಂಗಾಪುರ ಡಾಲರ್ (573 ರೂ. ಅಮೆರಿಕನ್ ಡಾಲರ್ ಅಥವಾ 38,600 ರೂ. ಅಥವಾ 2,000 ರಿಂಗಿಟ್ ಗಿಂತ ಹೆಚ್ಚು ) ಖರ್ಚು ಮಾಡಿದೆ. ಇದು ನನ್ನ ಮಟ್ಟಿಗೆ ದೊಡ್ಡ ಖರ್ಚೇ ಆದರೂ ಟ್ರಂಪ್ ಭೇಟಿ ಅದು ತೀರ ಸಣ್ಣ ಮೊತ್ತವೆಂದು ನನಗೆ ಕೊನೆಗೆ ಅನ್ನಿಸಿತು’ ಎಂದು ಮಹಾರಾಜ್ ಮೋಹನ್ ಹೇಳಿದರು.
ಟ್ರಂಪ್ ಉಳಿದುಕೊಳ್ಳುವ ಹೊಟೇಲ್‌ಗೆ ತಾಗಿಕೊಂಡೇ ಇರುವ ವಿಭಾಗದಲ್ಲಿ ಮೋಹನ್ ಕೋಣೆ ಹಿಡಿದಿದ್ದರು. ಬೆಳಗ್ಗೆ 6.30ಕ್ಕೆ ಹೊಟೇಲ್ ಲಾಬಿ ಗೆ ಬಂದು ಟ್ರಂಪ್ ಬರುವಿಕೆಯನ್ನು ಕಾದರು. ಟ್ರಂಪ್ ಅವರ ಬೆಸ್ಟ್ ಸೆಲ್ಲರ್ “ಟ್ರಂಪ್ : ದಿ ಆರ್ಟ್ ಆಫ್ ದಿ ಡೀಲ್’ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಅದಕ್ಕೆ ಟ್ರಂಪ್ ಹಸ್ತಾಕ್ಷರ ಪಡೆಯುವುದು ಮೋಹನ್ ಅವರ ಅಭಿಲಾಷೆಯಾಗಿತ್ತು. ಆದರೆ 8 ಗಂಟೆಯಾದರೂ ಟ್ರಂಪ್ ಸುಳಿವಿಲ್ಲದೆ ಮೋಹನ್‌ಗೆ ನಿರಾಶೆಯಾಗಿತ್ತು. ಆ ಹೊತ್ತಿಗಾಗಲೇ ಟ್ರಂಪ್ ಅವರು ಸೆಂಟೋಸಾ ದ್ವೀಪದಲ್ಲಿನ ಕ್ಯಾಪೆಲಾ ಹೊಟೇಲ್ ನಲ್ಲಿ ನಡೆಯಲಿದ್ದ ಐತಿಹಾಸಿಕ ಶೃಂಗಕ್ಕೆ ನಿರ್ಗಮಿಸಿಯಾಗಿತ್ತು.
“ಎಲ್ಲರೂ ನನಗೆ ಹೇಳಿದ್ದರು : 20 ಕಿ.ಮೀ. ಫಾಸಲೆಯಲ್ಲಿ ಕೂಡ ಟ್ರಂಪ್ ಅವರನ್ನು ಕಾಣುವುದಾಗಲೀ ಅವರ ಸನಿಹಕ್ಕೆ ಹೋಗುವುದಾಗಲೀ ಅಸಾಧ್ಯ ಎಂದು. ಆದರೆ ಕೆಲವೊಮ್ಮೆ ಅಸಾಧ್ಯವಾದದ್ದು ಸಾಧ್ಯವಾಗುವುದಿದೆಯಲ್ಲ – ಅಂತಹ ಒಂದು ಕ್ಷಣಕ್ಕಾಗಿ ನಾನು ಆಸೆ ಪಡುತ್ತಿದ್ದೆ’ ಎಂದು ಮೋಹನ್ ನಿರಾಶೆಯಿಂದ ಹೇಳಿದರು. ಮೋಹನ್ ಅವರು ತನ್ನ ತಂದೆ ನಡೆಸುತ್ತಿರುವ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಆಗಿ ದುಡಿಯುತ್ತಿದ್ದಾರೆ.