ನ್ಯೂಯಾರ್ಕ್: ವಿಶ್ವ ಆರೋಗ್ಯ ಸಂಸ್ಥೆ ಫೌಂಡೇಶನ್ ಗೆ ಭಾರತೀಯ ಮೂಲದ ಆರೋಗ್ಯ ತಜ್ಞ ಅನಿಲ್ ಸೋನಿ ಅವರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ)ಯನ್ನಾಗಿ ನೇಮಕ ಮಾಡಿದೆ ಎಂದು ವರದಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಸಿಇಒ ಆಗಿ 2021ರ ಜನವರಿ 1ರಂದು ಅನಿಲ್ ಸೋನಿ ಅವರು ಅಧಿಕಾರ ಸ್ವೀಕರಿಸುವ ಮೂಲಕ ಕರ್ತವ್ಯ ನಿರ್ವಹಿಸಲಿದ್ದಾರೆ. ಜಗತ್ತನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಡಬ್ಲ್ಯುಎಚ್ ಒ ಫೌಂಡೇಶನ್ ಕಾರ್ಯನಿರ್ವಹಿಸಲಿದ್ದು, ಇದರ ಮೂಲಕ ಅನಿಲ್ ಸೋನಿ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಜಾಗತಿಕವಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗೆ ಹೆಚ್ಚು ಒತ್ತು ನೀಡಿ ಪರಿಹರಿಸುವ ನಿಟ್ಟಿನಲ್ಲಿ 2020ರ ಮೇನಲ್ಲಿ ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಫೌಂಡೇಶನ್ ಮತ್ತು ಜಾಗತಿಕ ಆರೋಗ್ಯ ಸಮುದಾಯ ಜಂಟಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತ್ತು ಎಂದು ವರದಿ ವಿವರಿಸಿದೆ.
ಅನಿಲ್ ಸೋನಿ ಅವರು ಈ ಮೊದಲು ವಿಯಾಟ್ರಿಸ್ ನಲ್ಲಿ ಹಲವು ಔಷಧಗಳನ್ನು ಅಭಿವೃದ್ದಿಪಡಿಸಿದ್ದರು. ಅನಿಲ್ ಅವರ ಮುಂದಾಳತ್ವದಲ್ಲಿ ಎಚ್ ಐವಿ/ಏಡ್ಸ್ ಮತ್ತು ಕ್ಷಯರೋಗಕ್ಕೆ ಚಿಕಿತ್ಸೆ ನೀಡುವ ಔಷಧಗಳನ್ನು ಪರಿಚಯಿಸಿದ್ದರು.
ಅನಿಲ್ ಸೋನಿ ನುರಿತ ಜಾಗತಿಕ ಆರೋಗ್ಯ ತಜ್ಞ ಎಂದು ಬಣ್ಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಫೌಂಡೇಶನ್, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಲಾಭೋದ್ದೇಶವಿಲ್ಲದ ಆರೋಗ್ಯ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸೋನಿ ಸಾರ್ವಜನಿಕ, ಖಾಸಗಿ ಕ್ಷೇತ್ರದಲ್ಲಿಯೂ ಸುಮಾರು ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದೆ.