ಹೊಸದಿಲ್ಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಪತ್ರಿಕೆಗಳಿಗೆ ಜಾಹೀರಾತಿನಿಂದ ಬರುತ್ತಿದ್ದ ಆದಾಯ ನಿಂತಿದೆ. ಹೀಗಾಗಿ, ಕೇಂದ್ರ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ, ಆರ್ಥಿಕ ನೆರವು ಕಲ್ಪಿಸಬೇಕು. ಆ ಮೂಲಕ ಪತ್ರಿಕೋದ್ಯಮದ ರಕ್ಷಣೆಗೆ ಮುಂದಾಗಬೇಕು ಎಂದು ಐಎನ್‌ಎಸ್ (ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ) ಕೇಂದ್ರಕ್ಕೆ ಲಿಖಿತ ಮನವಿ ಸಲ್ಲಿಸಿದೆ.
ಎರಡು ವರ್ಷಗಳ ತೆರಿಗೆ ರಜೆ ಘೋಷಿಸಬೇಕು. ನ್ಯೂಸ್‌ಪ್ರಿಂಟ್ (ವೃತ್ತ ಪತ್ರಿಕೆ ಕಾಗದ) ಮೇಲಿನ ಆಮದು ಸುಂಕವನ್ನು (ಶೇ.5ರಷ್ಟು) ರದ್ದು ಮಾಡಬೇಕು. ಡಿಎವಿಪಿ (ಜಾಹೀರಾತು ಮತ್ತು ದೃಶ್ಯ ಪ್ರಸಾರದ ನಿರ್ದೇಶನಾಲಯ) ಜಾಹೀರಾತು ದರದಲ್ಲಿ ಶೇ.50ರಷ್ಟು ಏರಿಕೆ ಮಾಡಬೇಕು, ಮುದ್ರಣ ವಲಯಕ್ಕಾಗಿ ಬಜೆಟ್‌ನಲ್ಲಿ ಮೀಸಲಿರಿಸಲಾದ ಹಣವನ್ನು ಸಂಪೂರ್ಣ ಬಳಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿ ರವಿ ಮಿಟ್ಟಲ್ ಅವರಿಗೆ ಸಲ್ಲಿಸಲಾದ ಲಿಖಿತ ಮನವಿಯಲ್ಲಿ ಒತ್ತಾಯಿಸಿದೆ. ಅಲ್ಲದೆ, ಕೇಂದ್ರ ಸರಕಾರ, ಜಾಹೀರಾತಿನ ಬಾಕಿ ಹಣವನ್ನು ತಕ್ಷಣವೇ ಪಾವತಿಸಬೇಕು. ಜೊತೆಗೆ, ಬಾಕಿ ಹಣ ಪಾವತಿ ಮಾಡುವಂತೆ ರಾಜ್ಯ ಸರಕಾರಗಳಿಗೂ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.
ಕೋವಿಡ್ 19 ವೈರಸ್ ನಿಂದಾದ ಲಾಕ್‌ಡೌನ್, ಜಾಹೀರಾತು ಆದಾಯದಲ್ಲಿನ ಇಳಿಕೆ ಹಾಗೂ ನ್ಯೂಸ್‌ಪ್ರಿಂಟ್ ಮೇಲಿನ ಆಮದು ಸುಂಕಗಳ ಹೊರೆಯಿಂದಾಗಿ ಪತ್ರಿಕೋದ್ಯಮ ತೀವ್ರ ಸಂಕಷ್ಟದ ಸಮಯ ಎದುರಿಸುತ್ತಿದೆ. ಇದೇ ವೇಳೆ, ನಿರ್ವಹಣಾ ಖರ್ಚು-ವೆಚ್ಚದ ಪ್ರಮಾಣ ಹೆಚ್ಚಾಗಿದ್ದು, ದೇಶೀಯ ಪತ್ರಿಕೋದ್ಯಮ ಅಲ್ಪಕಾಲದಲ್ಲಿಯೇ ಅವನತಿ ಕಾಣುವ ಪರಿಸ್ಥಿತಿ ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪತ್ರಿಕೆಗಳು ಪುಟಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ವಾರಾಂತ್ಯದ ಪುರವಣಿಗಳನ್ನು ಮುಖ್ಯ ಆವೃತ್ತಿಯ ಜೊತೆ ಸೇರಿಸಿ ಪ್ರಕಟಿಸುತ್ತಿವೆ. ಈ ಎಲ್ಲಾ ಕ್ರಮಗಳ ಹೊರತಾಗಿಯೂ ಪತ್ರಿಕೆಗಳು ಪ್ರತಿದಿನ ಆರ್ಥಿಕ ನಷ್ಟ ಅನುಭವಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆಹಾರ ಪದಾರ್ಥಗಳು, ಹಾಲು, ದಿನಸಿ ಪದಾರ್ಥಗಳನ್ನು ಗ್ರಾಹಕರು ಅವುಗಳ ಮೇಲಿನ ಸಂಪೂರ್ಣ ಬೆಲೆ ನೀಡಿ ಖರೀದಿಸುತ್ತಾರೆ. ಆದರೆ, ಪತ್ರಿಕೆಗಳು ತಮ್ಮ ವೆಚ್ಚದ ಒಂದು ಭಾಗವನ್ನು ಮಾತ್ರ ಚಂದಾದಾರರಿಂದ ವಸೂಲು ಮಾಡುತ್ತವೆ. ಉಳಿದ ವೆಚ್ಚವನ್ನು ಜಾಹೀರಾತಿನ ಆದಾಯದ ಮೂಲಕವೇ ಸರಿದೂಗಿಸಿಕೊಳ್ಳಬೇಕು. ಆದರೆ, ಈಗ ಜಾಹೀರಾತಿನಿಂದ ಬರುತ್ತಿದ್ದ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಈಗಾಗಲೇ ಹಲವು ಸಣ್ಣ ಮತ್ತು ಮಧ್ಯಮ ಗಾತ್ರದ ಪತ್ರಿಕೆಗಳು ಪ್ರಕಟಣೆಯನ್ನು ಸ್ಥಗಿತಗೊಳಿಸಿವೆ. ಉಳಿದವು ತೀವ್ರ ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ಇವು ಪ್ರಕಟಣೆಯನ್ನು ನಿಲ್ಲಿಸಿದರೆ ಅದನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನೌಕರರು, ಅವರ ಕುಟುಂಬದವರು ಕೆಲಸ ಕಳೆದುಕೊಳ್ಳಲಿದ್ದಾರೆ. ಮುದ್ರಣಾಲಯಗಳು, ಸಂಬಂಧಿತ ಉದ್ದಿಮೆಗಳು, ಪತ್ರಿಕಾ ಮಾರಾಟಗಾರರು, ವಿತರಣಾ ಹುಡುಗರು ಸೇರಿದಂತೆ ಹಲವು ಮಂದಿ ಸಂಕಷ್ಟಕ್ಕೆ ಈಡಾಗುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.