ಹೊಸದಿಲ್ಲಿ: ಲಡಾಖ್‌ನಲ್ಲಿ ತಿಂಗಳುಗಳಿಂದ ಭಾರತಕ್ಕೆ ಕಿರಿಕಿರಿ ಉಂಟು ಮಾಡಿದ್ದ ಚೀನ, ಈಗ ದಕ್ಷಿಣದ ಹಿಂದೂ ಮಹಾ ಸಾಗರದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಮುಂದಾಗಿದೆ.
ಇದಕ್ಕೆ ಪ್ರತಿಯಾಗಿ, ಭಾರತೀಯ ನೌಕಾಪಡೆ ತನ್ನ ಸಮರ ನೌಕೆಗಳನ್ನು ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ (ಐಒಆರ್) ನಿಯೋಜಿಸಿ, ಚೀನಕ್ಕೆ ಸೆಡ್ಡು ಹೊಡೆದಿದೆ.
ಚೀನಕ್ಕೆ ಆಮದಾಗುವ ಕಚ್ಚಾ ತೈಲದಲ್ಲಿ ಶೇ. 80ರಷ್ಟು ಸರಕು ಹಿಂದೂ ಮಹಾ ಸಾಗರದ ಮೂಲಕವೇ ಹಾದು ಹೋಗುವುದರಿಂದ ಆ ಸಮುದ್ರ ಭಾಗವನ್ನು ತನ್ನ ವಶಕ್ಕೆ ಪಡೆಯಲು ಚೀನ ಹೊಂಚು ಹಾಕುತ್ತಿದೆ.
ಐಒಆರ್ ಸೇರಿದಂತೆ ಏಷ್ಯಾ ಖಂಡದ ಸುತ್ತಮುತ್ತಲಿನ ಸಮುದ್ರಗಳ ಮೇಲೆ ತನ್ನ ಸೇನಾ ನೆಲೆಗಳನ್ನು ನಿರ್ಮಿಸಿ, ನೂತನ ಸಾಗರ ಮಾರ್ಗಗಳನ್ನು ಸೃಷ್ಟಿ ಮಾಡಿಕೊಳ್ಳುವ ಮೂಲಕ ಜಗತ್ತಿನ ಹೊಸ ಸೂಪರ್ ಪವರ್ ಆಗಿ ಹೊರಹೊಮ್ಮಲು ಚೀನ ನಿರ್ಧರಿಸಿದೆ. ಮಲಾಕ್ಕಾದ ದಕ್ಷಿಣ ಭಾಗ, ಸುಂಡಾ, ಲೊಂಬೊಕ್, ಒಬಾಯ್ ಹಾಗೂ ವೆಟಾರ್ ಮಾರ್ಗಗಳ ಮೂಲಕ ಹಿಂದೂ ಮಹಾ ಸಾಗರಕ್ಕೆ ಲಗ್ಗೆ ಹಾಕಲು ಚೀನ ಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಸಮರ ನೌಕೆಗಳ ಜಮಾವಣೆ: ಚೀನದ ಉದ್ದೇಶವನ್ನು ಅರಿತಿರುವ ಭಾರತೀಯ ನೌಕಾಪಡೆ, ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ ತನ್ನ ಸಮರ ನೌಕೆಗಳನ್ನು, ಜಲಾಂತರ್ಗಾಮಿಗಳ ಕಾವಲು ಆರಂಭಿಸಿದೆ. ಈ ಮೂಲಕ ಚೀನಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ಭಾರತ ರವಾನಿಸಿದೆ.
ನೆರೆಯವರ ಸಹಾಯ ಕೋರಿದ ಭಾರತ: ಸಾಗರದ ಮೇಲೆ ಚೀನದ ಅತಿಕ್ರಮಣವನ್ನು ತಡೆಯುವ ಉದ್ದೇಶದಿಂದ ‘ಐಒಆರ್’ನೊಂದಿಗೆ ತಮ್ಮ ತೀರಗಳನ್ನು ಹಂಚಿಕೊಂಡಿರುವ ಮಾಲ್ಡೀವ್ಸ್, ಮಾರಿಷಿಯಸ್, ಸೆಷಲ್ಸ್, ಮಡಗಾಸ್ಕರ್ ರಾಷ್ಟ್ರಗಳನ್ನು ಈಗಾಗಲೇ ಸಂಪರ್ಕಿಸಿರುವ ಭಾರತ, ಚೀನದ ಪ್ರಯತ್ನಗಳನ್ನು ವಿರೋಧಿಸುವಂತೆ ಕೇಳಿಕೊಂಡಿದೆ.