ಶ್ರೀನಗರ : ಭಾರತದಲ್ಲಿ ಮುಸ್ಲಿಮರಿಗೆ ಲವ್ ಜಿಹಾದ್, ಗೋ ರಕ್ಷಣೆ ಮುಂತಾಗಿ ಅನೇಕ ವಿಷಯಗಳಲ್ಲಿ ತೀವ್ರ ಕಿರುಕುಳ ನೀಡಲಾಗುತ್ತಿದೆ; ಆದುದರಿಂದ ಅವರು ಪ್ರತ್ಯೇಕ ರಾಷ್ಟ್ರವನ್ನು ಕೇಳಬೇಕು ಎಂದು ‘ಕಾಶ್ಮೀರ್ ಡೆಪ್ಯುಟಿ ಮುಫ್ತಿ’ ಆಜಂ ನಸೀರ್ ಉಲ್ ಇಸ್ಲಾಮ್ ಅವರು ಭಾರತೀಯ ಮುಸ್ಲಿಮರಿಗೆ ಕರೆ ನೀಡುವ ಮೂಲಕ ಹೊಸ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ.
“ಕೇವಲ 17 ಕೋಟಿ ಜನರೊಂದಿಗೆ ಪಾಕಿಸ್ಥಾನವನ್ನು ರಚಿಸಲಾಯಿತು. ಭಾರತದಲ್ಲಿ ಮುಸ್ಲಿಮರದ್ದು ಎರಡನೇ ಅತೀ ದೊಡ್ಡ ಜನಸಂಖ್ಯೆಯಾಗಿದೆ. ಭಾರತದಲ್ಲಿ ಮುಸ್ಲಿಮರು ಇದೇ ರೀತಿ ಯಾತನೆಗೆ ಗುರಿಯಾಗುವುದಾದರೆ ಅವರು ಪ್ರತ್ಯೇಕ ದೇಶ ಕೇಳುವುದೇ ಉತ್ತಮ’ ಎಂದು ನಸೀರ್ ಉಲ್ ಇಸ್ಲಾಂ ಹೇಳಿದರು.
“ಭಾರತ ಸರಕಾರ ದೇಶದಲ್ಲಿನ ಮುಸ್ಲಿಮರ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಕಿವಿಕೊಡುತ್ತಿಲ್ಲ; ಇದು ಹೀಗೆಯೇ ಮುಂದುವರಿದರೆ ದೇಶದಲ್ಲಿನ ಮುಸ್ಲಿಮರ ಸ್ಥಿತಿಗತಿ ಶೋಚನೀಯವಾಗಲಿದೆ. ಇದಕ್ಕೆಲ್ಲ ಪರಿಹಾರವೆಂದರೆ ಮುಸ್ಲಿಮರು ಭಾರತದಿಂದ ಪ್ರತ್ಯೇಕವಾಗುವುದು’ ಎಂದು ನಸೀರ್ ಉಲ್ ಇಸ್ಲಾಂ ಹೇಳಿದರು.
ನಸೀರ್ ಉಲ್‌ಇಸ್ಲಾಂ ಅವರು 2000 ಇಸವಿಯಿಂದ ಡೆಪ್ಯುಟಿ ಮುಫ್ತಿ ಆಜಂ ಆಗಿದ್ದಾರೆ. 2012ರಲ್ಲಿ ಇವರ ತಂದೆ ಮತ್ತು ಗ್ರ್ಯಾಂಡ್ ಮುಫ್ತಿ ಯಾಗಿರುವ ಬಶೀರ್ ಉದ್ ದಿನ್ ಅವರು ನಸೀರ್ ಉಲ್ ಇಸ್ಲಾಂ ಅವರನ್ನು “ಸುಪ್ರೀಂ ಕೋರ್ಟ್ ಆಫ್ ಇಸ್ಲಾಮಿಕ್ ಶರಿಯತ್’ ಹುದ್ದೆಗೆ ತಮ್ಮ ಉತ್ತರಾಧಿಕಾರಿಯನ್ನಾಗಿ ನಾಮಕರಣ ಮಾಡಿದ್ದರು.
ನಸೀರ್ ಉಲ್‌ಇಸ್ಲಾಂ ಅವರು ಭಾರತದ ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ ಸಭೆಯಲ್ಲಿ ಜಮ್ಮು ಕಾಶ್ಮೀರ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ ಇದರ ಹಿರಿಯ ಸದಸ್ಯರು ಉಪಸ್ಥಿತರಿದ್ದರು.