ನವದೆಹಲಿ: ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾಕ್ಕೆ ಭಾರತ ಪರೋಕ್ಷ ಟಾಂಗ್ ನೀಡಿದೆ. ತೈವಾನ್‌ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ಸಂಸದರನ್ನು ಭಾಗಿ ಮಾಡುವ ಮೂಲಕ ಪ್ರಧಾನಿ ಮೋದಿ, ಚೀನಾಧ್ಯಕ್ಷರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ತೈವಾನ್‌ನ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯಿಂದ ನೂತನ ರಾಷ್ಟ್ರಾಧ್ಯಕ್ಷೆಯಾಗಿ ತ್ಸಾಯಿ ಇಂಗ್‌ವೆನ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ವರ್ಚುವಲ್ ಸಮಾರಂಭದಲ್ಲಿ ಕೇಂದ್ರ ಸರ್ಕಾರ ಪರವಾಗಿ ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ , ರಾಹುಲ್ ಕಸ್ವಾನ್ ಪಾಲ್ಗೊಂಡಿದ್ದರು. ತ್ಸಾಯಿ ಇಂಗ್‌ವೆನ್, ಚೀನಾದ ದಬ್ಟಾಳಿಕೆಯ ವಿರುದ್ಧ ಸಾಕಷ್ಟು ವರ್ಷ ಹೋರಾಡಿದವರು.
ತೈವಾನ್ ಬೇಸರ: ತೈವಾನ್ ತನ್ನ ಸುಪರ್ದಿಯಲ್ಲಿದ್ದು, ಚೀನಾದ ಪುನರೇಕೀಕರಣಕ್ಕೆ ನೆರವಾಗಬೇಕು ಎಂದು ಇತ್ತೀಚೆಗಷ್ಟೇ ಕಮ್ಯುನಿಸ್ಟ್ ರಾಷ್ಟ್ರ ಹೇಳಿಕೊಂಡಿತ್ತು. ದ್ವೀಪರಾಷ್ಟ್ರದ ಸ್ವಾತಂತ್ರ್ಯ ಹತ್ತಿಕ್ಕಲು ಯತ್ನಿಸುತ್ತಿರುವ ಚೀನಾದ ನಡವಳಿಕೆಗಳು ತೈವಾನ್‌ಗೂ ಬೇಸರ ಮೂಡಿಸಿದೆ. ಅಲ್ಲದೆ, ತೈವಾನ್‌ನ ಇತ್ತೀಚಿನ ಬೆಳವಣಿಗೆಗಳು ಬೀಜಿಂಗ್‌ಗೆ ತೃಪ್ತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ.
ಚೀನಾ ಅಡ್ಡಗಾಲು: ವಿಶ್ವ ಆರೋಗ್ಯ ಸಭೆ ಮುಂತಾದ ಜಾಗತಿಕ ಗೌರವಗಳಿಂದ ತೈವಾನ್ ಅನ್ನು ದೂರವಿಡಲು, ಚೀನಾ ಸಾಕಷ್ಟು ಕುತಂತ್ರಗಳನ್ನು ರೂಪಿಸಿತ್ತು. ಚೀನಾ ಸಮುದ್ರದಲ್ಲಿ ಮಿಲಿಟರಿ ಗಸ್ತು- ತರಬೇತಿ ನಡೆಸುವ ಮೂಲಕ, ಗುಬ್ಬಚ್ಚಿಯಂಥ ರಾಷ್ಟ್ರದ ಎದೆಯನ್ನು ಚೀನಾ ನಡುಗಿಸುತ್ತಲೇ ಬಂದಿದೆ.
ಅಮೆರಿಕ, ಭಾರತ ಸ್ನೇಹ: ಈ ಎಲ್ಲ ಬೆಳವಣಿಗೆಗಳ ನಡುವೆ, ತೈವಾನ್ ಅಮೆರಿಕದೊಂದಿಗೆ ಸಂಬಂಧ ಚಿಗುರಿಸಿಕೊಂಡಿದೆ. ಪ್ರಸ್ತುತ ನೂತನ ಅಧ್ಯಕ್ಷರ ಪ್ರಮಾಣ ವಚನಕ್ಕೆ ಹಾಜರಾಗುವ ಮೂಲಕ ಭಾರತ, ತೈವಾನ್‌ಗೆ ಗೆಳೆಯನಾಗಿದ್ದು, ಚೀನಾಗೆ ಚಿಂತೆ ಹೆಚ್ಚಿಸಿದೆ.
ಲೇಹ್‌ಗೆ ಸೇನಾ ಮುಖ್ಯಸ್ಥರ ಭೇಟಿ
ಚೀನಾ ಸೈನಿಕರ ಸಂಘರ್ಷದಿಂದ ಲಡಾಖ್‌ನ ಗಡಿಯಲ್ಲಿ ಹೆಚ್ಚಿರುವ ಉದ್ವಿಗ್ನತೆ ನಡುವೆಯೇ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ, ಲೇಹ್‌ಗೆ ಭೇಟಿನೀಡಿದ್ದಾರೆ. ಲೇಹ್ ವಲಯದ ಉನ್ನತ ಸೇನಾಧಿಕಾರಿಗಳಾದ ಲೆ.ಜ. ವೈ.ಕೆ. ಜೋಶಿ, ಲೆ.ಜ. ಹರಿಂದರ್ ಸಿಂಗ್ ಅವರು ಸೇನಾ ಮುಖ್ಯಸ್ಥರಿಗೆ ಗಡಿಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.